ADVERTISEMENT

ಫಲ ನೀಡುವ ಮರ ನೆಡಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2010, 12:40 IST
Last Updated 31 ಡಿಸೆಂಬರ್ 2010, 12:40 IST

ಬೆಂಗಳೂರು: ರಾಜ್ಯದಲ್ಲಿ ಪ್ರತ್ಯೇಕ ಅರಣ್ಯ ನೀತಿ ಜಾರಿಗೆ ತರಲು ಗಂಭೀರ ಚಿಂತನೆ ನಡೆದಿದ್ದು, ಫಲ ನೀಡುವ ಮರಗಳನ್ನು ಬೆಳೆಸುವುದಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ.ಅದಮ್ಯ ಚೇತನ ಸಂಸ್ಥೆಯ ವತಿಯಿಂದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ನೂತನ ಪರಿಸರ ಪ್ರದರ್ಶಿನಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಪರಿಸರಕ್ಕೆ ಪೂರಕವಾದ ಮರಗಳನ್ನು ಹೆಚ್ಚು ಹೆಚ್ಚು ನೆಡಬೇಕಿದೆ. ಅಕೇಶಿಯಾ, ನೀಲಗಿರಿ ಮರಗಳ ಬದಲಿಗೆ ಫಲ ನೀಡುವ ಮರಗಳನ್ನು ನೆಟ್ಟರೆ ಅದರಿಂದ ಮನುಷ್ಯ ಮತ್ತು ಪ್ರಾಣಿ ಸಂಕುಲಕ್ಕೆ ಅನುಕೂಲವಾಗುತ್ತದೆ ಎನ್ನುವ ಕಾರಣದಿಂದ ಈ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಪ್ರಯತ್ನ ನಡೆಸಲಿದೆ’ ಎಂದರು.

ನಗರ ಪ್ರದೇಶಗಳಲ್ಲಿ ಸಾಲು ಮರಗಳನ್ನು ನೆಡುವುದಕ್ಕೂ ಸರ್ಕಾರ ಯೋಜನೆಯೊಂದನ್ನು ರೂಪಿಸಲಿದೆ. ಅದಮ್ಯ ಚೇತನ ಹಮ್ಮಿಕೊಂಡಿರುವ ‘ಹಸಿರು ಉಸಿರು’ ಕಾರ್ಯಕ್ರಮವನ್ನು ಎಲ್ಲಾ ಸರ್ಕಾರಿ ಶಾಲೆಗಳಿಗೆ ವಿಸ್ತರಿಸುವ ವಿಚಾರ ಸರ್ಕಾರದ ಮುಂದಿದೆ ಎಂದರು.ಸಂಸದ ಅನಂತಕುಮಾರ್ ಮಾತನಾಡಿ, ಪ್ರತಿಯೊಬ್ಬರು ಪರಿಸರ ರಕ್ಷಣೆ ಮಾಡಬೇಕು. ವರ್ಷಕ್ಕೊಂದು ಗಿಡ ನೆಡುವುದನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ಗಿಡ ಮರಗಳನ್ನು ಬೆಳೆಸಿ ಪೋಷಿಸುವಲ್ಲಿ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂದರು.

ಅದಮ್ಯ ಚೇತನದ ಅಧ್ಯಕ್ಷರಾದ ತೇಜಸ್ವಿನಿ ಅನಂತಕುಮಾರ್ ಅವರು ಸಂಸ್ಥೆಯ ಕಾರ್ಯಕ್ರಮಗಳನ್ನು ವಿವರಿಸಿ, ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯಲ್ಲಿ ಸಂಸ್ಥೆಯು ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದರು.ಇದೇ ಸಂದರ್ಭದಲ್ಲಿ ವನ್ಯಚಿತ್ರ ಛಾಯಾಗ್ರಾಹಕ ಎಸ್. ಪಿ. ನಾಗೇಂದ್ರ ಅವರ ಛಾಯಾಚಿತ್ರ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಂದ ಮಳೆ ನೀರು ಸಂಗ್ರಹ ಹಾಗೂ ಪರಿಸರದ ಮಹತ್ವ ಸಾರುವ ಪ್ರದರ್ಶನಗಳನ್ನು ಹಾಗೂ ಪರಿಸರ ಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶನವೂ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.