ಬೆಂಗಳೂರು: ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯು ಅತ್ಯಾಧುನಿಕ ಸೌಲಭ್ಯವುಳ್ಳ ಮೂತ್ರಕೋಶ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಮೂತ್ರಕೋಶ ಸಂಬಂಧಿ ಎಲ್ಲ ತೊಂದರೆಗಳಿಗೂ ಒಂದೇ ಸೂರಿನಡಿ ಅತ್ಯಾಧುನಿಕ ಚಿಕಿತ್ಸೆ ನೀಡಲಿದೆ.ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಸಲಹೆಗಾರರಾದ ಮೂತ್ರಕೋಶತಜ್ಞ ಡಾ.ಎಲ್.ಎನ್. ರಾಜು, ‘ಮೂತ್ರಕೋಶ ಸಂಬಂಧಿ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಎರಡು ದಶಕಗಳಲ್ಲಿ ಹೆಚ್ಚಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ ಇತರೆ ತೊಂದರೆಗಳು ರಕ್ತನಾಳದ ವೈಫಲ್ಯಕ್ಕೆ ಕಾರಣವಾಗಿದೆ’ ಎಂದರು.
‘ಆ ಹಿನ್ನೆಲೆಯಲ್ಲಿ ಫೋರ್ಟಿಸ್ ಆಸ್ಪತ್ರೆಯು ಈ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಣಾಮಕಾರಿ ಚಿಕಿತ್ಸೆ ನೀಡುವ ಸೌಲಭ್ಯ ಕಲ್ಪಿಸಿದೆ. ಮೂತ್ರಪಿಂಡದಲ್ಲಿ ಕಲ್ಲು, ಮಾಂಸಖಂಡ ಬೆಳೆಯುವಿಕೆ ಸಮಸ್ಯೆಗೆ ಲೇಸರ್ ಯುರಾಲಜಿ ಚಿಕಿತ್ಸೆ ನೀಡಲಾಗುತ್ತದೆ ಹಾಗೆಯೇ ಮೂತ್ರಪಿಂಡ, ಮೂತ್ರಕೋಶ, ಮೂತ್ರದ್ವಾರದಲ್ಲಿ ಕಂಡುಬರುವ ಕ್ಯಾನ್ಸರ್‌ನಂತಹ ಗಂಭೀರ ಸಮಸ್ಯೆಗೆ ಯುರೋ ಆಂಕಾಲಜಿ ಚಿಕಿತ್ಸೆ ನೀಡಲಾಗುವುದು’ ಎಂದು ಹೇಳಿದರು.
‘ಮೂತ್ರಕೋಶದ ಹಾನಿಗೊಳಗಾದ ಅಂಗಗಳನ್ನು ಸರಿಪಡಿಸುವುದು, ನವಜಾತ ಶಿಶುವಿನಿಂದ 15 ವರ್ಷದವರೆಗಿನ ಮಕ್ಕಳಲ್ಲಿನ ಮೂತ್ರಕೋಶ ಸಂಬಂಧಿ ಸಮಸ್ಯೆಗೆ ಗುಣಮಟ್ಟ ಚಿಕಿತ್ಸೆ ನೀಡುವ ಸೌಲಭ್ಯ ಆಸ್ಪತ್ರೆಯಲ್ಲಿದೆ. ಮೂತ್ರಕೋಶಕ್ಕೆ ಸಂಬಂಧಪಟ್ಟ ಎಲ್ಲ ಸಮಸ್ಯೆಗಳಿಗೂ ಇಲ್ಲಿ ಚಿಕಿತ್ಸೆ ದೊರೆಯುತ್ತದೆ’ ಎಂದು ಹೇಳಿದರು.ಫೋರ್ಟಿಸ್ ಆಸ್ಪತ್ರೆಯ ಮೇಲ್ವಿಚಾರಣಾ ವಿಭಾಗದ ಮುಖ್ಯಸ್ಥ ಡಾ.ಮುದಿತ್ ಸಕ್ಸೆನಾ, ‘ದೇಶದಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಮಂದಿ ಮೂತ್ರಪಿಂಡ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಬಹುಪಾಲು ಮಂದಿ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲ ಮಂದಿಯಷ್ಟೇ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಈ ಸಮಸ್ಯೆಯಿಂದ ಬಳಲುವವರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ಉದ್ದೇಶದಿಂದ ಮೂತ್ರಕೋಶ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.