ADVERTISEMENT

ಬಂಡೀಪುರ ಉದ್ಯಾನ: ವಾಹನ ನಿಷೇಧಕ್ಕೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 18:30 IST
Last Updated 1 ಅಕ್ಟೋಬರ್ 2012, 18:30 IST

ಬೆಂಗಳೂರು: ಮೈಸೂರಿನಿಂದ ಕೇರಳ ಅಥವಾ ತಮಿಳುನಾಡಿಗೆ ಹೋಗುವ ಭಾರಿ ವಾಹನಗಳು ಬಂಡೀಪುರ ರಾಷ್ಟ್ರೀಯ ಉದ್ಯಾನದ ಮೂಲಕ ಸಾಗುವುದನ್ನು ನಿಷೇಧಿಸುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ವಾಹನಗಳ ನಿಷೇಧಕ್ಕೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಲವು ಬಾರಿ ಆದೇಶಿಸಿದ್ದರೂ, ಈ ಆದೇಶ ಪಾಲನೆ ಆಗುತ್ತಿಲ್ಲ ಎಂದು ವಕೀಲ ಜಿ.ಆರ್.ಮೋಹನ್ ದೂರಿದ್ದಾರೆ.

ಈ ಉದ್ಯಾನದ ವ್ಯಾಪ್ತಿಗೆ ಒಳಪಡುವ ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸದ್ಯ ಸುಮಾರು 100 ಪ್ರಾಣಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪಿವೆ. ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಉದ್ಯಾನದಲ್ಲಿ ಇರುವ ಎಲ್ಲ ಪ್ರಾಣಿಗಳ ಜೀವಕ್ಕೆ ತೊಂದರೆ ಇದೆ ಎನ್ನುವುದು ಅರ್ಜಿದಾರರ ಆರೋಪ. ವಿಚಾರಣೆಯನ್ನು ಹೈಕೋರ್ಟ್ ಬುಧವಾರಕ್ಕೆ ಮುಂದೂಡಿದೆ.

ಗಲ್ಲುಶಿಕ್ಷೆಗೆ ಸರ್ಕಾರದ ಮೇಲ್ಮನವಿ
ವಿಧಾನಸೌಧ ಸೇರಿದಂತೆ ಪ್ರಮುಖ ಕಟ್ಟಡಗಳನ್ನು ಸ್ಫೋಟಿಸುವ ಹಾಗೂ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿ ಕೋಮು ಗಲಭೆ ಉಂಟು ಮಾಡುವ ಸಂಚು ಹೂಡಿದ್ದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಆರು ಭಯೋತ್ಪಾದಕರಿಗೆ ಸೆಷನ್ಸ್ ಕೋರ್ಟ್ ವಿಧಿಸಿರುವ ಜೀವಾವಧಿ ಶಿಕ್ಷೆಯ ಬದಲಾಗಿ ಗಲ್ಲುಶಿಕ್ಷೆ ವಿಧಿಸುವಂತೆ ಕೋರಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

ಮೊಹಮ್ಮದ್ ರಜೂರ್ ರೆಹಮಾನ್, ಅಫಜಲ್ ಪಾಷಾ, ಮೆಹಬೂಬ್ ಇಬ್ರಾಹಿಂ ಸಾಬ್ ಚುಪ್‌ದಾರ್, ನೂರುಲ್ಲಾ ಖಾನ್, ಮೊಹಮ್ಮದ್ ಇರ್ಫಾನ್ ಹಾಗೂ ಮುನ್ನಾ ಅಲಿಯಾಸ್ ನಜರುದ್ದೀನ್ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಸರ್ಕಾರ ಪ್ರಶ್ನಿಸಿದ್ದು, ಮೇಲ್ಮನವಿಯನ್ನು ಕೋರ್ಟ್ ವಿಚಾರಣೆಗೆ ಅಂಗೀಕರಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಮೇಲೆ 2005ರಲ್ಲಿ ನಡೆದ ದಾಳಿಯ ಆರೋಪಿಗಳ ಶೋಧದಲ್ಲಿದ್ದ ಬೆಂಗಳೂರಿನ ಸದಾಶಿವನಗರ ಪೊಲೀಸರ ಕೈಗೆ ಈ ಭಯೋತ್ಪಾಕರು ಆಂಧ್ರಪ್ರದೇಶದ ನಲ್ಗೊಂಡದಲ್ಲಿ ಸಿಕ್ಕಿಬಿದ್ದಿದ್ದರು.

ವಿಚಾರಣೆ ವೇಳೆ ವಿಜ್ಞಾನ ಸಂಸ್ಥೆಯ ದಾಳಿಯಲ್ಲಿ ಇವರ ಕೈವಾಡ ಇಲ್ಲ ಎಂದು ಸಾಬೀತು ಆಗಿದ್ದರೂ ಅಕ್ರಮ ಶಸ್ತ್ರಾಸ್ತ್ರಗಳು ಇವರ ಬಳಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗಿತ್ತು.

ಪೊಲೀಸರ ವರ್ಗಾವಣೆ- ನೋಟಿಸ್

ರಾಜಕೀಯ ಮುಖಂಡರ ಹಸ್ತಕ್ಷೇಪದಿಂದ ರಾಜ್ಯದಲ್ಲಿ ಪೊಲೀಸ್ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ದೂರಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೆ ಆದೇಶಿಸಿದೆ.
`ಅಖಿಲ ಕರ್ನಾಟಕ ಪೊಲೀಸ್ ಮಹಾಸಂಘ~ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ.ಶ್ರೀಧರ ರಾವ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಪೊಲೀಸ್ ಅಧಿಕಾರಿಗಳನ್ನು ಯಾವ ರೀತಿ ವರ್ಗಾವಣೆ ಮಾಡಬೇಕು ಎಂಬ ಬಗ್ಗೆ 2006ರಲ್ಲಿ ಸುಪ್ರೀಂ ಕೋರ್ಟ್ `ಪ್ರಕಾಶ್ ಸಿಂಗ್~ ಪ್ರಕರಣದಲ್ಲಿ ತಿಳಿಸಿದೆ. ಆದರೆ ಈ ತೀರ್ಪಿನಂತೆ ನಡೆದುಕೊಳ್ಳದ ರಾಜ್ಯ ಸರ್ಕಾರ ಪೊಲೀಸರನ್ನು ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದೆ ಎನ್ನುವುದು ಅರ್ಜಿದಾರರ ದೂರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.