ADVERTISEMENT

ಬಂದೀಖಾನೆ ಇಲಾಖೆ ಮುಖ್ಯಸ್ಥರ ಅಖಿಲ ಭಾರತ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ಬೆಂಗಳೂರು: `ಮಹಿಳಾ ಕೈದಿಗಳಿಗಾಗಿ ತುಮಕೂರಿನಲ್ಲಿ ಪ್ರತ್ಯೇಕ ಕಾರಾಗೃಹ ನಿರ್ಮಿಸಲಾಗುತ್ತದೆ~ ಎಂದು ಬಂಧೀಖಾನೆ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.ಬಂಧೀಖಾನೆ ಇಲಾಖೆ ಮತ್ತು ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (ಬಿಪಿಆರ್‌ಡಿ) ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬಂಧೀಖಾನೆ ಇಲಾಖೆ ಮುಖ್ಯಸ್ಥರ ಅಖಿಲ ಭಾರತ ಮಟ್ಟದ ಸಮಾವೇಶ ಉದ್ಘಾಟಿಸಿದ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಸುಮಾರು ಐನೂರು ಮಹಿಳಾ ಕೈದಿಗಳಿದ್ದಾರೆ. ಅವರೆಲ್ಲರನ್ನು ತುಮಕೂರಿನ ಕಾರಾಗೃಹಕ್ಕೆ ವರ್ಗಾಯಿಸಲಾಗುತ್ತದೆ. ಮಹಿಳಾ ಕೈದಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಅಧಿಕ ಭದ್ರತೆಯ ಕಾರಾಗೃಹ ನಿರ್ಮಿಸಲಾಗುತ್ತದೆ.

ಪ್ರಮುಖ ಪ್ರಕರಣಗಳ ವಿಚಾರಣಾಧೀನ ಕೈದಿಗಳು ಮತ್ತು ಶಿಕ್ಷೆಗೆ ಗುರಿಯಾದವರನ್ನು ಈ ಕಾರಾಗೃಹಗಳಲ್ಲಿ ಇಡಲಾಗುತ್ತದೆ. ಕೈದಿಗಳು ಮೊಬೈಲ್ ಮೂಲಕ ಹೊರ ಜಗತ್ತಿನ ಸಂಪರ್ಕ ಸಾಧಿಸುವುದನ್ನು ತಡೆಯಲು ಜಾಮರ್ ಅಳವಡಿಸಲಾಗುತ್ತದೆ ಎಂದು ಅವರು ಹೇಳಿದರು.

ರಾಜ್ಯದ ಕಾರಾಗೃಹಗಳಲ್ಲಿ ಹದಿಮೂರು ಸಾವಿರ ಕೈದಿಗಳಿದ್ದಾರೆ. ಅವರಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗುತ್ತದೆ. ಕೌಶಲ್ಯ ತರಬೇತಿ ನೀಡಿ ಬಿಡುಗಡೆಯ ನಂತರ ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಮಾಡಿಕೊಡಲಾಗುತ್ತದೆ. ಕೆಲ ಜಿಲ್ಲಾ ಕಾರಾಗೃಹಗಳನ್ನು ಕೇಂದ್ರ ಕಾರಾಗೃಹಗಳ ದರ್ಜೆಗೆ ಏರಿಸಲಾಗುತ್ತದೆ ಎಂದರು. `ಕಾರಾಗೃಹಗಳಲ್ಲಿ ಕುಳಿತು ಅಪರಾಧ ಚಟುವಟಿಕೆ ನಡೆಸುವ ಪ್ರವೃತ್ತಿ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
 
ಅಪರಾಧ ಮಾಡಿದ ವ್ಯಕ್ತಿ ಪರಿವರ್ತನೆ ಆಗಲಿ ಎಂದು ಆತನನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಇಂತಹ ವ್ಯಕ್ತಿ ಬಿಡುಗಡೆಯಾಗುವ ಸಂದರ್ಭದಲ್ಲಿ ಸುಧಾರಣೆ ಆಗಿರುತ್ತಾನೆಯೇ ಅಥವಾ ಇನ್ನೂ ದೊಡ್ಡ ಅಪರಾಧಿ ಆಗಿರುತ್ತಾನೆಯೇ ಎಂಬುದು ಬಹಳ ಮುಖ್ಯ. ಆದ್ದರಿಂದ ಕಾರಾಗೃಹಗಳಲ್ಲಿ ಸುಧಾರಣೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ. ಬಾಲಾಪರಾಧಿಗಳಿಗಾಗಿ ಪ್ರತ್ಯೇಕ ಕೇಂದ್ರ ತೆರೆಯಲಾಗುತ್ತದೆ.

ಅಲ್ಲಿ ಅವರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ~ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮ್‌ದಾರ್ ಹೇಳಿದರು.`ದೇಶದಲ್ಲಿ ಒಟ್ಟು 1374 ಕಾರಾಗೃಹಗಳಿದ್ದು ಇವುಗಳ ಸಾಮರ್ಥ್ಯ 3,07052 ಆದರೆ ಒಟ್ಟು 3,76,969 ಮಂದಿ ಕೈದಿಗಳು ಕಾರಾಗೃಹಗಳಲ್ಲಿ ಇದ್ದಾರೆ.
 
ಇವರಲ್ಲಿ ಶೇ 4.1ರಷ್ಟು ಮಹಿಳಾ ಕೈದಿಗಳಿದ್ದಾರೆ. ಕೆಳ ಹಂತದ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬೇಗ ಇತ್ಯರ್ಥವಾದರೆ ಕೈದಿಗಳ ಸಂಖ್ಯೆ ಕಡಿಮೆ ಆಗುತ್ತದೆ~ ಎಂದು ಬಿಪಿಆರ್‌ಡಿ ನಿರ್ದೇಶಕ ಎ.ಆರ್. ಕಿಣಿ ಹೇಳಿದರು.

ಕಾರಾಗೃಹಗಳಲ್ಲಿನ ದಟ್ಟಣೆ ನಿವಾರಣೆ, ಸಿಬ್ಬಂದಿ ಕೊರತೆ ನೀಗಿಸುವುದು ಮತ್ತು ಕೈದಿಗಳಿಗೆ ನವೀನ ಮಾದರಿಯ ವೃತ್ತಿ ತರಬೇತಿ ನೀಡುವ ಬಗ್ಗೆ ಸಮಾವೇಶದಲ್ಲಿ ಗೋಷ್ಠಿಗಳು ನಡೆದವು. ಗೃಹ ಇಲಾಖೆ ಕಾರ್ಯದರ್ಶಿ ರಾಘವೇಂದ್ರ ಔರಾದ್‌ಕರ್, ಬಂಧೀಖಾನೆ ಇಲಾಖೆಯ ಎಡಿಜಿಪಿ ಕೆ.ವಿ. ಗಗನ್‌ದೀಪ್, ಡಿಐಜಿಗಳಾದ ಎಸ್. ರವಿ, ವಿ. ರಾಜಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.