ADVERTISEMENT

ಬಂಧನ ಪ್ರಶ್ನಿಸಿ ರೆಡ್ಡಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2012, 19:00 IST
Last Updated 6 ಮಾರ್ಚ್ 2012, 19:00 IST

ಬೆಂಗಳೂರು: ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗಾಗಿ ತಮ್ಮನ್ನು ಸಿಬಿಐ ಪೊಲೀಸರ ವಶಕ್ಕೆ ಒಪ್ಪಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡುವಂತೆ ಕೋರಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮಂಗಳವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಹಿರಿಯ ವಕೀಲ ರವಿ ಬಿ.ನಾಯ್ಕ ಅವರು ರೆಡ್ಡಿ ಪರ ಅರ್ಜಿ ಸಲ್ಲಿಸಿದ್ದಾರೆ. ಆದರೆ, ವಕೀಲರು ಕೋರ್ಟ್ ಕಲಾಪ ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಈ ಅರ್ಜಿ ವಿಚಾರಣೆಗೆ ಬಂದಿಲ್ಲ. ಸಿಬಿಐ ವಿಶೇಷ ನ್ಯಾಯಾಲಯ, ರೆಡ್ಡಿ ಮತ್ತು ಅವರ ಸಹಚರ ಮೆಹಫೂಜ್ ಅಲಿಖಾನ್‌ನನ್ನು ಇದೇ 12ರವರೆಗೆ ಸಿಬಿಐ ವಶಕ್ಕೊಪ್ಪಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿರುವ ರೆಡ್ಡಿ, ಅದನ್ನು ರದ್ದು ಮಾಡುವಂತೆ ಕೋರಿದ್ದಾರೆ.

ಮುಂದುವರಿದ ವಿಚಾರಣೆ: ಗಂಗಾನಗರದ ಸಿಬಿಐ ಕಚೇರಿಯಲ್ಲಿ ರೆಡ್ಡಿ ಮತ್ತು ಅಲಿಖಾನ್ ವಿಚಾರಣೆ ಮುಂದುವರಿದಿದೆ. ಡಿಐಜಿ ಆರ್.ಹಿತೇಂದ್ರ ನೇತೃತ್ವದ ತನಿಖಾ ತಂಡ ಮಂಗಳವಾರ ಇಡೀ ದಿನ ಇಬ್ಬರನ್ನೂ ಪ್ರಶ್ನಿಸಿದೆ. ಬೌರಿಂಗ್ ಆಸ್ಪತ್ರೆಯ ವೈದ್ಯರು ಪ್ರತಿ 48 ಗಂಟೆಗೊಮ್ಮೆ ಇಬ್ಬರೂ ಆರೋಪಿಗಳ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಇಬ್ಬರೂ ಆರೋಗ್ಯದಿಂದಿದ್ದು, ತನಿಖೆಗೆ ಸಮರ್ಪಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಬಳ್ಳಾರಿ ಮತ್ತು ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ಅವರ ಮತ್ತಷ್ಟು ಸಹಚರರನ್ನು ಮಂಗಳವಾರ ಗಂಗಾನಗರದ ಕಚೇರಿಗೆ ಕರೆಸಿಕೊಂಡಿದ್ದ ಸಿಬಿಐ ಅಧಿಕಾರಿಗಳು, ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ವ್ಯವಹಾರಗಳ ಜೊತೆಗಿನ ನಂಟು ಕುರಿತು ಪ್ರಶ್ನಿಸಿದ್ದಾರೆ. ರೆಡ್ಡಿ ನಡೆಸಿರುವ ಬೇನಾಮಿ ವ್ಯವಹಾರಗಳ ಬಗ್ಗೆಯೂ ಕೆಲವರನ್ನು ಪ್ರಶ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಸಿಬಿಐ ಅಧಿಕಾರಿಗಳ ತಂಡ ಸರದಿ ಮೇಲೆ ಆರೋಪಿಗಳನ್ನು ಪ್ರಶ್ನಿಸುತ್ತಿದೆ. ಕೆಲವು ಮಹತ್ವದ ವಿಷಯಗಳ ಬಗ್ಗೆ ರೆಡ್ಡಿ ಮತ್ತು ಅಲಿಖಾನ್‌ನನ್ನು ಪ್ರತ್ಯೇಕವಾಗಿ ಪ್ರಶ್ನಿಸಲಾಗುತ್ತಿದೆ. ಬಳಿಕ ಉಳಿದ ಸಹಚರರನ್ನು ಕರೆದು ಈ ಬಗ್ಗೆ ಪ್ರಶ್ನಿಸಿ, ಅವರು ನೀಡಿದ ಉತ್ತರವನ್ನು ಆರೋಪಿಗಳ ಪ್ರತಿಕ್ರಿಯೆ ಜೊತೆ ತಾಳೆ ಮಾಡಲಾಗುತ್ತಿದೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.