ADVERTISEMENT

ಬಗರ್‌ಹುಕುಂ: 2,157 ಎಕರೆ ಸಕ್ರಮ ‘ಅಕ್ರಮ’

ಬೆಂಗಳೂರು ದಕ್ಷಿಣ ತಾಲ್ಲೂಕಿನ ಭೂಮಂಜೂರಾತಿ ಅವ್ಯವಹಾರ

ಮಂಜುನಾಥ್ ಹೆಬ್ಬಾರ್‌
Published 17 ಅಕ್ಟೋಬರ್ 2017, 19:20 IST
Last Updated 17 ಅಕ್ಟೋಬರ್ 2017, 19:20 IST
ಬಗರ್‌ಹುಕುಂ: 2,157 ಎಕರೆ ಸಕ್ರಮ ‘ಅಕ್ರಮ’
ಬಗರ್‌ಹುಕುಂ: 2,157 ಎಕರೆ ಸಕ್ರಮ ‘ಅಕ್ರಮ’   

ಬೆಂಗಳೂರು: ಬಗರ್‌ಹುಕುಂ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕಿನಲ್ಲಿ ನಿಯಮಬಾಹಿರವಾಗಿ 2,157 ಎಕರೆ ಜಾಗವನ್ನು ಸಕ್ರಮ ಮಾಡಿರುವುದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿದೆ.

ತಾಲ್ಲೂಕಿನ 62 ಗ್ರಾಮಗಳಲ್ಲಿ 1,516 ಮಂದಿಗೆ ಬಗರ್‌ಹುಕುಂ ಸಮಿತಿ ಅಕ್ರಮವಾಗಿ ಮಂಜೂರು ಮಾಡಿದೆ ಎಂದು ‘ವಿಧಾನಮಂಡಲದ ಸರ್ಕಾರಿ ಭರವಸೆಗಳ ಸಮಿತಿ’ಗೆ ಇಲಾಖೆ ವರದಿ ಸಲ್ಲಿಸಿದೆ. ಈ ಜಾಗಗಳ ಮೊತ್ತ ₹10 ಸಾವಿರ ಕೋಟಿ ದಾಟುತ್ತದೆ. ಬಿಜೆಪಿ ಶಾಸಕ ಆರ್‌. ಅಶೋಕ ಹಾಗೂ ಮಾಜಿ ಶಾಸಕ ಎಂ. ಶ್ರೀನಿವಾಸ ಅವರು ಸಮಿತಿ ಅಧ್ಯಕ್ಷರಾಗಿದ್ದ ಅವಧಿಯಲ್ಲೇ ಹೆಚ್ಚಿನ ಮಂಜೂರಾತಿಗಳು ನಡೆದಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಏನಿದು ಬಗರ್‌ಹುಕುಂ ವಿವಾದ: ಬಗರ್‌ಹುಕುಂ ಸಮಿತಿಗೆ ಸ್ಥಳೀಯ ಶಾಸಕರು ಅಧ್ಯಕ್ಷರು, ತಹಶೀಲ್ದಾರ್‌ ಸದಸ್ಯ ಕಾರ್ಯದರ್ಶಿ. ಮೂವರು ಸದಸ್ಯರು ಇರುತ್ತಾರೆ. ಅರ್ಜಿಯ ದಾಖಲೆಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಜಾಗ ಮಂಜೂರು ಮಾಡುವ ಹೊಣೆ ಈ ಸಮಿತಿಯದು.
ಸರ್ಕಾರಿ ಜಮೀನಿನಲ್ಲಿ ಯಾವುದೇ ವ್ಯಕ್ತಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿದ್ದರೆ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94 ಎ ಪ್ರಕಾರ ನಮೂನೆ 50ರಲ್ಲಿ ಅರ್ಜಿ ಸಲ್ಲಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ಇದೆ.

ADVERTISEMENT

ನಗರ ಜಿಲ್ಲೆಯಲ್ಲಿ ನಮೂನೆ 50ರ ಅಡಿ 1991ರ ಸೆಪ್ಟೆಂಬರ್‌ 19ರೊಳಗೆ ಅರ್ಜಿ ಸಲ್ಲಿಸಬೇಕಿತ್ತು. ಈ ಕಾಯ್ದೆಯ ಕಲಂ 94–ಬಿ ಪ್ರಕಾರ ನಮೂನೆ–53ರಲ್ಲಿ 1999ರ ಏಪ್ರಿಲ್‌ 30ರೊಳಗೆ ಅರ್ಜಿ ಸಲ್ಲಿಸಬಹುದಿತ್ತು.ಈ ಅವಧಿಯಲ್ಲಿ ದಕ್ಷಿಣ ತಾಲ್ಲೂಕಿನಲ್ಲಿ 6,975 ಮಂದಿ ಅರ್ಜಿ ಸಲ್ಲಿಸಿದ್ದರು. 1,516 ಅರ್ಜಿದಾರರಿಗೆ ಜಮೀನು ಮಂಜೂರು ಮಾಡಲಾಗಿತ್ತು.

‘ಬಿಎಂಪಿ (ಈಗಿನ ಬಿಬಿಎಂಪಿ) ಕೇಂದ್ರ ಕಚೇರಿಯಿಂದ 18 ಕಿ.ಮೀ. ವ್ಯಾಪ್ತಿಯಲ್ಲಿ ಜಾಗ ಮಂಜೂರು ಮಾಡಲು ನಿಯಮದಲ್ಲಿ ಅವಕಾಶ ಇಲ್ಲ. ಯಾವುದೇ ಅಂತರವನ್ನು ಅಳೆಯುವಾಗ ನೇರ ಅಂತರವನ್ನು (ಸಮತಲದ ಮೇಲಿನ ನೇರ ಗೆರೆ) ಪರಿಗಣಿಸಬೇಕು ಎಂದು 1899ರ ಮೈಸೂರು ಸಾಮಾನ್ಯ ನಿಯಮಾವಳಿ ಕಾಯ್ದೆಯಲ್ಲಿ (ಮೈಸೂರು ಜನರಲ್‌ ಕ್ಲಾಸಸ್‌ ಆ್ಯಕ್ಟ್) ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಪ್ರಕಾರ ಆನೇಕಲ್‌ ತಾಲ್ಲೂಕಿನ ಸೋಲೂರು, ಬಿದರಕಾಡಹಳ್ಳಿ, ಕಾಳನಾಯಕನಹಳ್ಳಿ ಗ್ರಾಮಗಳಷ್ಟೇ 18 ಕಿ.ಮೀ. ವ್ಯಾಪ್ತಿಯಿಂದ ಹೊರಗಿವೆ’ ಎಂದು ವರದಿಯಲ್ಲಿ ಉಲ್ಲೇ
ಖಿಸಲಾಗಿದೆ. ಸಮಿತಿಯು ಷರತ್ತುಬದ್ಧವಾಗಿ ಜಾಗ ಸಕ್ರಮ ಮಾಡುತ್ತದೆ. ಒಂದು ವೇಳೆ ಷರತ್ತುಗಳ ಉಲ್ಲಂಘನೆ ಆಗಿದ್ದರೆ ತಹಶೀಲ್ದಾರ್‌ ಅವರು ಜಾಗವನ್ನು ಮತ್ತೆ ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಬಹುದು.

ಈ ಬಗ್ಗೆ ತಕರಾರು ಇದ್ದರೆ ಅರ್ಜಿದಾರರು ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಷರತ್ತುಗಳನ್ನು ಉಲ್ಲಂಘಿಸಿದ ಕಾರಣಕ್ಕೆ 245 ಎಕರೆಯನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆಯಲು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ನ್ಯಾಯಾಲಯವು 2016ರ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿತ್ತು. ‘ಬಗರ್‌ಹುಕುಂ ಮಂಜೂರಾತಿಯಲ್ಲಿ ನಗರ ಜಿಲ್ಲೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಆರಂಭಿಕ ಹಂತದಲ್ಲಿ ದಕ್ಷಿಣ ತಾಲ್ಲೂಕಿನ ವರದಿ ಸಲ್ಲಿಸಲಾಗಿದೆ. ಉಳಿದ ನಾಲ್ಕು ತಾಲ್ಲೂಕುಗಳ ವರದಿ ಸಿದ್ಧಪಡಿಸುತ್ತಿದ್ದೇವೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಜಮೀನು ಪಡೆಯಲು ಯಾರು ಅರ್ಹರು?
*ಅರ್ಜಿ ಸಲ್ಲಿಸುವವರಿಗೆ 18 ವರ್ಷವಾಗಿರಬೇಕು. ಅವರ ವಾರ್ಷಿಕ ಆದಾಯ ₹ 8,000 ಮೀರಿರಬಾರದು.
* ಅವರು ತಾಲ್ಲೂಕಿನ ನಿವಾಸಿ ಆಗಿರಬೇಕು.
* ಕೃಷಿಕನಾಗಿರಬೇಕು.
*ಕರ್ನಾಟಕ ಭೂಸುಧಾರಣಾ ಕಾಯ್ದೆ 1961ರ ಉಪನಿಯಮಗಳ ಆಧಾರದಲ್ಲಿ ಜಮೀನು ಹೊಂದಲು ಅರ್ಹತೆ ಹೊಂದಿರಬೇಕು.
*1990ರ ಏಪ್ರಿಲ್‌ 14ರ ಪೂರ್ವದಲ್ಲಿ ಕನಿಷ್ಠ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ ಈ ಜಾಗದಲ್ಲಿ ಅನಧಿಕೃತವಾಗಿ ಕೃಷಿ ಮಾಡಿರಬೇಕು (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಾದರೆ ಒಂದು ವರ್ಷ ಸಾಕು).
* ಅನಧಿಕೃತ ಸಾಗುವಳಿ ಸಕ್ರಮಕ್ಕೆ ಕೋರಿರುವ ವಿಸ್ತೀರ್ಣವು ಸೇರಿ ಅರ್ಜಿದಾರರು ಹೊಂದಿರುವ ಒಟ್ಟು ಜಮೀನಿನ ವಿಸ್ತೀರ್ಣ 4 ಎಕರೆ 38 ಗುಂಟೆ ಮೀರುವಂತಿಲ್ಲ.

ಭೂ ಮಂಜೂರಾತಿ ಷರತ್ತುಗಳು
*ಅರ್ಜಿದಾರರು ಸಾಗುವಳಿ ಚೀಟಿ ಪಡೆದ ದಿನದಿಂದ 15 ವರ್ಷಗಳ ವರೆಗೆ ಜಮೀನು ಪರಭಾರೆ ಮಾಡುವಂತಿಲ್ಲ. ಕೃಷಿಯೇತರ ಉದ್ದೇಶಕ್ಕೆ ಬಳಸುವಂತಿಲ್ಲ. ಜಮೀನಿನಲ್ಲಿ ಅವರೇ ಸಾಗುವಳಿ ಮಾಡಬೇಕು.
*ಸಾಗುವಳಿ ಚೀಟಿ ಪಡೆದ ಆರು ತಿಂಗಳೊಳಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 10 ಸಸಿಗಳನ್ನು ಬೆಳೆಸಬೇಕು.
*ಈ ಷರತ್ತುಗಳನ್ನು ಉಲ್ಲಂಘಿಸಿದರೆ, ಅಹವಾಲು ಹೇಳಿಕೊಳ್ಳಲು ಸೂಕ್ತ ಅವಕಾಶ ನೀಡಿ ಮಂಜೂರಾತಿ ರದ್ದುಪಡಿಸಿ ಜಾಗವನ್ನು ಕಂದಾಯ ಇಲಾಖೆ ವಶಕ್ಕೆ ಪಡೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.