ADVERTISEMENT

ಬಜೆಟ್‌ ಅನುದಾನ: ಶಿಕ್ಷಣ, ಆರೋಗ್ಯ ಕ್ಷೇತ್ರ ನಿರ್ಲಕ್ಷ್ಯ

ವಿಚಾರ ಸಂಕಿರಣದಲ್ಲಿ ಡಾ. ರತಿನ್‌ ರಾಯ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 19:30 IST
Last Updated 6 ಫೆಬ್ರುವರಿ 2016, 19:30 IST
ಸೆಂಟರ್ ಫಾರ್‌ ಬಜೆಟ್‌ ಆ್ಯಂಡ್‌ ಪಾಲಿಸಿ ಸ್ಟಡೀಸ್‌ ಮಾಜಿ ನಿರ್ದೇಶಕ ಪ್ರೊ. ವಿನೋದ್‌ ವ್ಯಾಸಲು ಮಾತನಾಡಿದರು.  ಡಾ. ರತಿನ್‌ ರಾಯ್‌, ಪ್ರೊ. ರಾಜೀವ್‌ ಗೌಡ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ
ಸೆಂಟರ್ ಫಾರ್‌ ಬಜೆಟ್‌ ಆ್ಯಂಡ್‌ ಪಾಲಿಸಿ ಸ್ಟಡೀಸ್‌ ಮಾಜಿ ನಿರ್ದೇಶಕ ಪ್ರೊ. ವಿನೋದ್‌ ವ್ಯಾಸಲು ಮಾತನಾಡಿದರು. ಡಾ. ರತಿನ್‌ ರಾಯ್‌, ಪ್ರೊ. ರಾಜೀವ್‌ ಗೌಡ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನ ಕಡಿಮೆ’ ಎಂದು ‘ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಫೈನಾನ್ಸ್ ಆ್ಯಂಡ್‌ ಪಾಲಿಸಿ’ಯ ನಿರ್ದೇಶಕ ಡಾ. ರತಿನ್‌ ರಾಯ್‌ ಹೇಳಿದರು. ‘ಸೆಂಟರ್‌ ಫಾರ್‌ ಬಜೆಟ್‌ ಆ್ಯಂಡ್‌ ಪಾಲಿಸಿ ಸ್ಟಡೀಸ್‌’ ಆಶ್ರಯದಲ್ಲಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಬಜೆಟ್‌ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರಕ್ಕೆ ಬಾಂಗ್ಲಾದೇಶ, ಕೀನ್ಯಾ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನೇಪಾಳ ನಮಗಿಂತ ಹೆಚ್ಚಿನ ಪ್ರಮಾಣದ ಅನುದಾನ ನೀಡುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ನಮ್ಮಲ್ಲಿ ಆಂತರಿಕ ಭದ್ರತೆಗೆ ಹೆಚ್ಚಿನ ಹಣ ವೆಚ್ಚ ಮಾಡಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಆಂತರಿಕ ಭದ್ರತೆಗೆ ನೀಡುತ್ತಿರುವ ಅನುದಾನ ಶೇ 350 ರಷ್ಟು ಹೆಚ್ಚಾಗಿದೆ’ ಎಂದು ಅವರು ವಿಶ್ಲೇಷಿಸಿದರು.

‘ಸೆಂಟರ್‌ ಫಾರ್‌ ಬಜೆಟ್‌ ಆ್ಯಂಡ್‌ ಪಾಲಿಸಿ ಸ್ಟಡೀಸ್‌’ ನಿರ್ದೇಶಕಿ ಡಾ. ಜ್ಯೋತ್ಸಾ ಝಾ ಮಾತನಾಡಿ, ‘ರಾಜ್ಯದಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿದೆ. ಆದರೆ, ಮಹಿಳಾ ಸಾಕ್ಷರತಾ ಪ್ರಮಾಣ ಗಣನೀಯವಾಗಿ ಹೆಚ್ಚಾಗಿಲ್ಲ. ವರ್ಷದಿಂದ ವರ್ಷಕ್ಕೆ ಲಿಂಗ ಅನುಪಾತ ಹೆಚ್ಚಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರಗಳ ವಿತ್ತೀಯ ನೀತಿಯ ಮೇಲೆ ತಕ್ಷಣ ಹಾಗೂ ದೂರಗಾಮಿ ಪರಿಣಾಮ ಬೀರುವಂತಹ ಬದಲಾವಣೆಗಳು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯಲ್ಲಿ ಆಗಿವೆ. ಯೋಜನಾ ಆಯೋಗದ ಸ್ಥಾನದಲ್ಲಿ ನೀತಿ ಆಯೋಗ ಬಂದಿದೆ. ಇದರಿಂದಾಗಿ ದೇಶದ ಯೋಜನಾ ಪ್ರಕ್ರಿಯೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ರಾಜ್ಯದ ಜವಾಬ್ದಾರಿ ಹೆಚ್ಚಿದೆ’ ಎಂದು ವಿಶ್ಲೇಷಿಸಿದರು.

‘ಈಗ ತೆರಿಗೆ ಆದಾಯದಲ್ಲಿ ರಾಜ್ಯಗಳಿಗೆ ಶೇ 32 ಪಾಲು ನೀಡಲಾಗುತ್ತಿದೆ. 2015–20ರ ಅವಧಿಯಲ್ಲಿ ಅದನ್ನು ಶೇ 42ಕ್ಕೆ ಏರಿಸುವಂತೆ 14ನೇ ಹಣಕಾಸು ಆಯೋಗ ಶಿಫಾರಸು ಮಾಡಿತ್ತು. ಇದು ಹೆಚ್ಚಳ ಆಗಿದೆ. ಆದರೆ, ಕೇಂದ್ರ ನೀಡುತ್ತಿರುವ ಅನುದಾನ ಹೆಚ್ಚಾಗಿಲ್ಲ’ ಎಂದರು.

‘ಕಳೆದೊಂದು ವರ್ಷದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ (ನರೆಗಾ) ಹೊರತುಪಡಿಸಿ ಉಳಿದ ಎಲ್ಲ ಯೋಜನೆಗಳಿಗೆ ಕೇಂದ್ರ ನೀಡುತ್ತಿರುವ ಅನುದಾನ ಕಡಿಮೆಯಾಗಿದೆ. ಬಹುತೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಅನುದಾನ ಯಥಾಸ್ಥಿತಿಯಲ್ಲಿದೆ. ಇದರಿಂದಾಗಿ ಕಲ್ಯಾಣ ಯೋಜನೆಗಳಿಗೆ ಸಿಗುತ್ತಿರುವ ಅನುದಾನ ಕಡಿಮೆಯಾಗುತ್ತಿದೆ’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಜೆ.ವಿ.ಆರ್‌.ಪ್ರಸಾದ್‌ ರಾವ್‌ ಮಾತನಾಡಿ, ‘ಆರೋಗ್ಯ ಕ್ಷೇತ್ರಕ್ಕೆ ನೀಡುತ್ತಿರುವ ಅನುದಾನವನ್ನು ಹೆಚ್ಚಿಸಬೇಕು ಎಂದು 2002ರಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗಲೂ ಅನುದಾನ ಪ್ರಮಾಣದಲ್ಲಿ ಹೆಚ್ಚಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್‌ ಗೌಡ ಮಾತನಾಡಿ, ‘ಬಜೆಟ್‌ನಲ್ಲಿ ಸಾಮಾಜಿಕ ವಲಯಕ್ಕೆ ನೀಡುತ್ತಿರುವ ಅನುದಾನ ಕಡಿಮೆಯಾಗುತ್ತಿದೆ. ಇದು ಕಳವಳಕಾರಿ. ಅಲ್ಲದೆ ಸಾಮಾಜಿಕ ವಲಯಕ್ಕೆ ಹೆಚ್ಚು ಅನುದಾನ ನೀಡುವಂತೆ  ಹೋರಾಟ ಮಾಡಲು ಪ್ರಾಧಿಕಾರವೇ ಇಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.