ADVERTISEMENT

ಬಟ್ಟೆ ಅಂಗಡಿಗಳಿಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:35 IST
Last Updated 18 ಮೇ 2012, 19:35 IST

ಬೆಂಗಳೂರು: ಕಮರ್ಷಿಯಲ್‌ಸ್ಟ್ರೀಟ್‌ನ ವಾಣಿಜ್ಯ ಸಮುಚ್ಚಯವೊಂದರಲ್ಲಿರುವ ಬಟ್ಟೆ ಅಂಗಡಿಗಳಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬಟ್ಟೆಗಳು ಸುಟ್ಟು  ಹೋಗಿವೆ.

ಒಟ್ಟು ಮೂರು ಅಂತಸ್ತುಗಳಲ್ಲಿರುವ ಸಮುಚ್ಚಯದ ಮೇಲಿನ ಅಂತಸ್ತಿನ ಬಟ್ಟೆ ಅಂಗಡಿಯ ಜನರೇಟರ್ ಕೊಠಡಿಯಲ್ಲಿ ರಾತ್ರಿ 8.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಬೆಂಕಿ ಸ್ವಲ್ಪ ಸಮಯದಲ್ಲೇ ಕೆಳ ಅಂತಸ್ತಿನ ಅಂಗಡಿಗಳಿಗೂ ವ್ಯಾಪಿಸಿತು. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ಹತ್ತು ವಾಹನಗಳಲ್ಲಿ ಕೂಡಲೇ ಸ್ಥಳಕ್ಕೆ ಬಂದು ಒಂದು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಸುಮಾರು ಐವತ್ತು ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದರು. ಕಮರ್ಷಿಯಲ್‌ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸರಗಳವು: ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ರಶ್ಮಿ ಉಪಾರಿ ಎಂಬುವರಿಂದ ಚಿನ್ನದ ಸರ ದೋಚಿ ಪರಾರಿಯಾದ ಘಟನೆ ಮೈಕೊಲೇಔಟ್ ಸಮೀಪದ ಬಿಟಿಎಂ ಮೊದಲನೇ ಹಂತದಲ್ಲಿ ಗುರುವಾರ ರಾತ್ರಿ ನಡೆದಿದೆ.

ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದ ರಶ್ಮಿ ಕೆಲಸ ಮುಗಿಸಿ ರಾತ್ರಿ ಮನೆಗೆ ನಡೆದು ಹೋಗುತಿದ್ದರು. ಬೈಕ್‌ನಲ್ಲಿ ಅವರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ರಶ್ಮಿ ಅವರ ಕುತ್ತಿಗೆಯಲ್ಲಿದ್ದ ಹದಿಮೂರು ಗ್ರಾಂ ತೂಕದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮೈಕೊಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.