ADVERTISEMENT

ಬದಲಾಗಲಿದೆ ‘ನಮ್ಮ ಮೆಟ್ರೊ’ ಸಮಯ

ಸೋಮವಾರದಿಂದ ಹೊಸ ವೇಳಾಪಟ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 20:23 IST
Last Updated 16 ಜೂನ್ 2017, 20:23 IST
ಬದಲಾಗಲಿದೆ ‘ನಮ್ಮ ಮೆಟ್ರೊ’ ಸಮಯ
ಬದಲಾಗಲಿದೆ ‘ನಮ್ಮ ಮೆಟ್ರೊ’ ಸಮಯ   

ಬೆಂಗಳೂರು: ‘ನಮ್ಮ ಮೆಟ್ರೊ’ ಮೊದಲ ಹಂತ ಲೊಕಾರ್ಪಣೆಯ ಬಳಿಕ ಮೆಟ್ರೊ ರೈಲುಗಳ ವೇಳಾಪಟ್ಟಿಯೂ ಬದಲಾಗಲಿದೆ. ಇದೇ ಸೋಮವಾರದಿಂದ ಹೊಸ ವೇಳಾಪಟ್ಟಿ ಜಾರಿಗೊಳಿಸಲಾಗುತ್ತಿದೆ   ಎಂದು  ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌)  ಪ್ರಕಟಣೆಯಲ್ಲಿ ತಿಳಿಸಿದೆ.

ಎಲ್ಲ ಟರ್ಮಿನಲ್‌ ನಿಲ್ದಾಣಗಳಲ್ಲಿ ಸೋಮವಾರ ಬೆಳಿಗ್ಗೆ 5.30ರಿಂದ ರೈಲುಗಳು ಹೊರಡಲಿವೆ. ಮಂಗಳವಾರದಿಂದ ಎಲ್ಲ ಟರ್ಮಿನಲ್‌ ನಿಲ್ದಾಣಗಳಲ್ಲಿ ಬೆಳಿಗ್ಗೆ 5 ಗಂಟೆಗೆ ಮೊದಲ ರೈಲುಗಳು ಹೊರಡಲಿವೆ.  ರಾತ್ರಿ 11 ಗಂಟೆವರೆಗೂ (ನಾಗಸಂದ್ರ ನಿಲ್ದಾಣ ಹೊರತುಪಡಿಸಿ) ರೈಲುಗಳು ಲಭ್ಯ.

ದಿನದ ಮೊದಲ ರೈಲು ಪೈಲಟ್‌ ರೈಲಾಗಿರುವುದರಿಂದ ಅದು ನಿಧಾನ ಗತಿಯಲ್ಲಿ ಚಲಿಸಲಿದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದರು.
ಕೆಂಪೇಗೌಡ ರೈಲು ನಿಲ್ದಾಣದಲ್ಲಿ ನಗರದ ನಾಲ್ಕು ಟರ್ಮಿನಲ್‌ ನಿಲ್ದಾಣಗಳ ಕಡೆಗೆ  ರಾತ್ರಿ 11.25ಕ್ಕೆ ಕೊನೆಯ ರೈಲು ಹೊರಡಲಿದೆ. ಈ ನಿಲ್ದಾಣದಲ್ಲಿ  ಮಾರ್ಗ ಬದಲಾವಣೆ ಮಾಡುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.

ADVERTISEMENT

ದಟ್ಟಣೆ ವೇಳೆ 4 ನಿಮಿಷಕ್ಕೊಂದು ರೈಲು:  ಎರಡೂ ಮಾರ್ಗಗಳಲ್ಲೂ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ಸಮಯದಲ್ಲಿ ಎರಡು ರೈಲುಗಳ ನಡುವಿನ ಅಂತರವನ್ನು 20 ನಿಮಿಷದವರೆಗೆ  ಹೆಚ್ಚಿಸಲಾಗುತ್ತದೆ.   ಸಾಮಾನ್ಯ ಅವಧಿಯಲ್ಲಿ ಪ್ರತಿ 10 ನಿಮಿಷಗಳಿಗೊಂದು ರೈಲು ಸಂಚರಿಸಲಿದೆ.

ಸಂಚಾರ ಬದಲಾವಣೆ: ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪಾಲ್ಗೊಳ್ಳಲಿರುವುದರಿಂದ  ನಗರದ ಕೆಲವು ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಸಂಜೆ 4 ಗಂಟೆಗೆ ಎಚ್‌.ಎ.ಎಲ್‌. ವಿಮಾನ ನಿಲ್ದಾಣಕ್ಕೆ ಆಗಮಿಸುವ ರಾಷ್ಟ್ರಪತಿಯವರು ಅಲ್ಲಿಂದ ಕಾರಿನಲ್ಲಿ ವಿಧಾನಸೌಧಕ್ಕೆ ಬರಲಿದ್ದಾರೆ. ಅವರು ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

‘ಹಳೆ ವಿಮಾನ ನಿಲ್ದಾಣ ರಸ್ತೆ, ಟ್ರಿನಿಟಿ ಚರ್ಚ್‌ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್‌ ರಸ್ತೆ, ರಾಜಭವನ ರಸ್ತೆ, ಅಲಿ ಆಸ್ಕರ್‌ ರಸ್ತೆ, ಇನ್‌ಫೆಂಟ್ರಿ ರಸ್ತೆ, ಕ್ವೀನ್ಸ್‌ ರಸ್ತೆ, ಡಾ. ಬಿ.ಆರ್‌.ಅಂಬೇಡ್ಕರ್‌ ರಸ್ತೆ, ದೇವರಾಜ ಅರಸ್ ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ’ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ: ‘ವಿಕಾಸಸೌಧದ ಸೆಲ್ಲಾರ್‌ 1 ಹಾಗೂ 3ರಲ್ಲಿ, ಕೆಂಗಲ್‌ ಹನುಮಂತಯ್ಯ ವೃತ್ತದ ಅಕ್ಕ–ಪಕ್ಕದಲ್ಲಿ ಸಚಿವರು ಹಾಗೂ ಶಾಸಕರ ವಾಹನಗಳಿಗೆ, ಅಡ್ವೊಕೇಟ್ ಜನರಲ್‌ ಕಚೇರಿ ಬಳಿ ಮಾಧ್ಯಮದವರ ವಾಹನಗಳ ನಿಲುಗಡೆಗೆ ಅವಕಾಶ ಒದಗಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಎಂ.ಎಸ್‌.ಕಟ್ಟಡ, ಹಳೆ ಕೆ.ಜಿ.ಐ.ಡಿ ಕಟ್ಟಡ ಹಾಗೂ ಹೈಕೋರ್ಟ್‌ನ ವಾಹನ ನಿಲುಗಡೆ ಸ್ಥಳ, ಕಬ್ಬನ್‌ ಉದ್ಯಾನ, ಸೆಂಟ್ರಲ್‌ ಸ್ಟ್ರೀಟ್‌ನ ಪಶ್ಚಿಮ ಭಾಗ, ಸ್ವಾತಂತ್ರ್ಯ ಉದ್ಯಾನದ ವಾಹನ ನಿಲುಗಡೆ ಪ್ರದೇಶ, ಅರಮನೆ ರಸ್ತೆ, ಕಸ್ತೂರಬಾ ರಸ್ತೆಯ ಇಕ್ಕೆಲಗಳಲ್ಲಿ ಆಹ್ವಾನಿತರ ವಾಹನಗಳನ್ನು ನಿಲ್ಲಿಸಬಹುದು. ಶಾಸಕರ ಭವನದ ವಾಹನ ನಿಲುಗಡೆ ಸ್ಥಳದಲ್ಲಿ  ಸ್ಥಳದಲ್ಲಿ ಪೊಲೀಸರ ವಾಹನ ನಿಲ್ಲಿಸಲು ಅವಕಾಶವಿದೆ’ ಎಂದು ತಿಳಿಸಿದ್ದಾರೆ.

ಮೊದಲ ಹಂತ ಇಂದು ಲೋಕಾರ್ಪಣೆ
‘ನಮ್ಮ ಮೆಟ್ರೊ’ ಮೊದಲ ಹಂತವನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಶನಿವಾರ ಲೋಕಾರ್ಪಣೆಗೊಳಿಸಲಿದ್ದಾರೆ. ಸಂಜೆ 6 ಗಂಟೆಗೆ ವಿಧಾನಸೌಧದ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿದೆ. ರಾಜ್ಯಪಾಲ  ವಜುಭಾಯಿ ವಾಲಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು.

ದಕ್ಷಿಣಕ್ಕೂ ಮೆಟ್ರೊ ಸಂಪರ್ಕ
ಯಲಚೇನಹಳ್ಳಿ– ಸಂಪಿಗೆರಸ್ತೆ ಮಾರ್ಗ  ಉದ್ಘಾಟನೆಗೊಳ್ಳುವುದರೊಂದಿಗೆ ಬೆಂಗಳೂರಿನ ದಕ್ಷಿಣ ಪ್ರದೇಶಕ್ಕೂ ಮೆಟ್ರೊ ಸಂಪರ್ಕ ಸಿಗಲಿದೆ.
ಭಾನುವಾರ ಸಂಜೆ ಸಾರ್ವಜನಿಕರಿಗೆ ಮುಕ್ತ:ಈ ಮಾರ್ಗವು ಶನಿವಾರವೇ ಉದ್ಘಾಟನೆಗೊಂಡರೂ, ಇದರಲ್ಲಿ ಪ್ರಯಾಣಿಸಲು ಸಾರ್ವಜನಿಕರು ಭಾನುವಾರ ಸಂಜೆವರೆಗೆ ಕಾಯಬೇಕು.  ಅಂದು ಸಂಜೆ 4ರ ಬಳಿಕ ಈ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.