ADVERTISEMENT

ಬದುಕುವ ಸಾಮರ್ಥ್ಯ ರೂಪಿಸುವ ಶಿಕ್ಷಣ ಬೇಕು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 18:55 IST
Last Updated 24 ಅಕ್ಟೋಬರ್ 2011, 18:55 IST

ಯಲಹಂಕ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವುದರ ಜೊತೆಗೆ ಬದುಕುವ ಸಾಮರ್ಥ್ಯವನ್ನು ರೂಢಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ಸುಪ್ರೀಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಕರೆ ನೀಡಿದರು.

ಜಕ್ಕೂರಿನಲ್ಲಿರುವ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನಾ ಕೇಂದ್ರದಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಅವರ `ಮಿತಿಯಿಲ್ಲದ ಏಣಿ~, ~ನ್ಯಾನೊ ಪ್ರಪಂಚ~, `ನ್ಯಾನೊ ವರ್ಲ್ಡ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೇವಲ ಅತ್ಯಾಧುನಿಕ ವಿಜ್ಞಾನ-ತಂತ್ರಜ್ಞಾನದ ಶಿಕ್ಷಣ ನೀಡುವುದರಿಂದ ಅವರಲ್ಲಿ ಜ್ಞಾನ ವೃದ್ಧಿಯಾಗಬಹುದು. ಆದರೆ ಬದುಕಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಮಾನಸಿಕ ಸಿದ್ಧತೆ ಮಾಡಿಕೊಳ್ಳಲು ಬೇಕಾದ ಶಿಕ್ಷಣ ನೀಡುವುದು ಅತ್ಯಗತ್ಯ ಎಂದರು.

ದೇಶದ ಈಗಿನ ಶಿಕ್ಷಣ ವ್ಯವಸ್ಥೆ ಸರಿಯಿಲ್ಲ ಮತ್ತು ವಿಜ್ಞಾನದ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಆರ್ಥಿಕ ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಲು ಹೊರಟಿದ್ದೇವೆ ಎಂದು ವಿಷಾದಿಸಿದ ಅವರು, ಕೇವಲ ತಲಾದಾಯವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ಆರ್ಥಿಕ ಪ್ರಗತಿಯನ್ನು ಮನಗಾಣಬೇಕು ಎಂದು ಹೇಳಿದರು.

ಪುಸ್ತಕಗಳನ್ನು ರಚಿಸಿರುವ ಲೇಖಕರು, ಭಾರತದ ಅತ್ಯುತ್ತಮ ವಿಜ್ಞಾನಿ ಗಳಲ್ಲೊಬ್ಬರು ಎಂದು ಪ್ರಶಂಸಿಸಿ, ಅವರು ತಮ್ಮ ಪುಸ್ತಕಗಳಲ್ಲಿ ನೀಡಿರುವ ಮಾಹಿತಿಯನ್ನು ಜನರು ಅರ್ಥಮಾಡಿಕೊಳ್ಳುವ ಮೂಲಕ ಅದರ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ಪುಸ್ತಕದ ಲೇಖಕರಾದ ಪ್ರೊ.ಸಿ.ಎನ್.ಆರ್.ರಾವ್ ಅವರು ಮಾತನಾಡಿ, ಯುವ ಜನಾಂಗಕ್ಕೆ ಮಾಹಿತಿಗಳು ದೊರೆಯಬೇಕೆಂಬ ಉದ್ದೇಶದಿಂದ ಈ ಪುಸ್ತಕಗಳನ್ನು ಬರೆದಿದ್ದೇನೆ. ಸಾಮಾನ್ಯ ಜ್ಞಾನಾರ್ಜನೆಗೆ ಅನುಕೂಲವಾಗುವಂತಹ ಕೃತಿಗಳನ್ನು ಹೆಚ್ಚಾಗಿ ರಚಿಸಬೇಕಾಗಿದೆ ಎಂದು ಅವರು ಹೇಳಿದರು.

ಶಿಕ್ಷಕರು ತಮ್ಮಲ್ಲಿರುವ ಸಂಪೂರ್ಣ ಜ್ಞಾನವನ್ನು ಮಕ್ಕಳಿಗೆ ಧಾರೆಯೆರೆದಾಗ ಮಾತ್ರ ಅವರು ನಿಜವಾದ ಶಿಕ್ಷಕರೆನಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಪ್ರೊ.ರೊದ್ದಂ ನರಸಿಂಹ ಅವರು ಕೃತಿಗಳ ಪರಿಚಯ ಮಾಡಿಕೊಟ್ಟರು. ಕೇಂದ್ರದ ಅಧ್ಯಕ್ಷ ಪ್ರೊ.ಎಂ.ಆರ್.ಎಸ್.ರಾವ್ ಅಧ್ಯಕ್ಷತೆ ವಹಿಸಿದ್ದರು. ಅನುವಾದಕರಾದ ಡಾ.ಎಚ್.ಎಸ್.ನಿರಂಜನ ಆರಾಧ್ಯ, ಇಂದುಮತಿ ರಾವ್ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.