ADVERTISEMENT

ಬರಪೀಡಿತ ಜಿಲ್ಲೆ ಘೋಷಣೆ ಅಗತ್ಯ: ಸಚಿವ ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ಬೆಂಗಳೂರು: `ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ತೀವ್ರವಾಗಿದ್ದು, ಜನತೆ ಸಂಕಷ್ಟದಲ್ಲಿದ್ದರೂ ಇದನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸದಿರುವುದು ದುರದೃಷ್ಟಕರ~ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎನ್.ಬಚ್ಚೇಗೌಡ ಅವರು ವಿಷಾದಿಸಿದರು.

ನಗರದಲ್ಲಿ ಬುಧವಾರ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2011-12ನೇ ಸಾಲಿನ ಎರಡನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

`ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕೆರೆಗಳು ತುಂಬುವಷ್ಟು ಮಳೆಯಾಗಿಲ್ಲ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದನ್ನು ಪರಿಗಣಿಸದೆ ಕೇವಲ ಇತ್ತೀಚೆಗೆ ಸುರಿದ ಮಳೆಯನ್ನೇ ಆಧರಿಸಿ ಜಿಲ್ಲೆಯನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಗೆ ಸೇರಿಸದಿರುವುದು ಸರಿಯಲ್ಲ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

`ಜಿಲ್ಲೆಯಲ್ಲಿ ಐದು ಪಟ್ಟಣಗಳು, 51 ಕುಗ್ರಾಮಗಳು ಸೇರಿದಂತೆ 1,051 ಕಂದಾಯ ಗ್ರಾಮಗಳಿವೆ. ಸುಮಾರು 500 ಕೊಳವೆ ಬಾವಿಗಳಿಂದ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹಾಗೆಯೇ 2,500 ಕೊಳವೆ ಬಾವಿಗಳಿಂದ ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ 1000 ಅಡಿಗಳಿಗೂ ಆಳಕ್ಕೆ ಕುಸಿದಿದೆ. ಹಾಗಾಗಿ ನೀರು ಪಂಪ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಈ ನಡುವೆ ವಿದ್ಯುತ್ ಕಡಿತದಿಂದ ಸಮಸ್ಯೆ ಇನ್ನಷ್ಟು ತೀವ್ರವಾಗಿದೆ~ ಎಂದರು.

ಟ್ಯಾಂಕರ್‌ನಿಂದ ನೀರು
`ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಈಗಾಗಲೇ ರೂ 88 ಲಕ್ಷ  ಬಿಡುಗಡೆಯಾಗಿದೆ. ನೀರಿನ ಅಭಾವವಿರುವ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು 4.51 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕುಡಿಯುವ ನೀರು ಪೂರೈಸಲು ತಾಲ್ಲೂಕುವಾರು ಟೆಂಡರ್ ಪ್ರಕ್ರಿಯೆ ನಡೆಸಲು ಸೂಚಿಸಲಾಗಿದೆ~ ಎಂದರು.

ಶಾಸಕ ಎಂ.ವಿ.ನಾಗರಾಜು, ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷೆ ಶಾಂತಮ್ಮ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬೆಟ್ಟಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.