ಬೆಂಗಳೂರು: `ಉದ್ಯಮ ಕ್ಷೇತ್ರದಲ್ಲಿ ಬ್ರಾಡ್‌ಬ್ಯಾಂಡ್ ಸಂಪರ್ಕವೇ ಭವಿಷ್ಯವಾಗಲಿದ್ದು, ಹೊಸ ಭರವಸೆ ಮೂಡಿಸಲಿದೆ' ಎಂದು ಪ್ರಧಾನಿ ಮೂಲಸೌಕರ್ಯಗಳ ಸಲಹೆಗಾರ ಸ್ಯಾಮ್ ಪಿತ್ರೋಡ ತಿಳಿಸಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಂಥನ್'- ಉದ್ಯಮ ಯೋಜನೆಯ ಅವಾರ್ಡ್-2013' ಕಾರ್ಯಕ್ರಮದಲ್ಲಿ `ಸ್ಕೈಪ್' ತಂತ್ರಜ್ಞಾನದ ಮೂಲಕ ಸಂವಾದ ನಡೆಸಿದರು.
`ದೇಶದಲ್ಲಿ 90 ಕೋಟಿಗಿಂತಲೂ ಅಧಿಕ ಮಂದಿ ಮೊಬೈಲ್ ಪೋನ್‌ಗಳ ಬಳಕೆದಾರರಿದ್ದಾರೆ. ಮುಂದೆ ಬ್ರಾಡ್‌ಬ್ಯಾಂಡ್ ಕೂಡ ಇದೇ ಮಾದರಿಯಲ್ಲಿ ಜನರನ್ನು ತಲುಪಲಿದೆ. ಇದರಿಂದ ಉದ್ಯಮದ ಸ್ವರೂಪ ಹಾಗೂ ಮಾರುಕಟ್ಟೆಯ ವ್ಯವಸ್ಥೆ ಬದಲಾಗಲಿದೆ' ಎಂದರು.
`ಬ್ರಾಡ್‌ಬ್ಯಾಂಡ್ ಸಂಪರ್ಕ ಕ್ರಾಂತಿಯಿಂದಾಗಿ ಶಿಕ್ಷಣ ಹಾಗೂ ಆರೋಗ್ಯ ಸೇವೆಗಳ ವ್ಯಾಪ್ತಿ ಇನ್ನಷ್ಟು ಹಿಗ್ಗಲಿದೆ. ಯುವಸಮೂಹದ ಸಂಖ್ಯೆ ಹೆಚ್ಚಿರುವ ಈ ದೇಶದಲ್ಲಿ ಹೊಸ ವಿನ್ಯಾಸದ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯ ಎದ್ದು ಕಾಣುತ್ತಿದೆ' ಎಂದರು.
`ಕರ್ನಾಟಕ ರಾಜ್ಯವು ಮಾಹಿತಿ ತಂತ್ರಜ್ಞಾನದಲ್ಲಿ ಸಾಕಷ್ಟು ಪರಿಣಿತಿಯನ್ನು ಪಡೆದಿದೆ. ಅದರಲ್ಲೂ ಬೆಂಗಳೂರು ಮಹಾನಗರ ತಂತ್ರಜ್ಞಾನ ಕ್ಷೇತ್ರಕ್ಕೆ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಆದರೆ, ವಾಹನ ದಟ್ಟಣೆಯಂತಹ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದನ್ನು ತೊಡೆದುಹಾಕುವತ್ತ ಚಿಂತನೆ ನಡೆಯಬೇಕು' ಎಂದು ಪ್ರತಿಕ್ರಿಯಿಸಿದರು.
`ತರಗತಿಗಳಲ್ಲಿ ಕುಳಿತು ಕೇವಲ ಪಠ್ಯವನ್ನು ಅರಗಿಸಿಕೊಳ್ಳುವುದರ ಜತೆಯಲ್ಲಿ ಪ್ರಾಯೋಗಿಕ ಹಂತವನ್ನು ತಲುಪಬೇಕು. ಜೀವನದಲ್ಲಿ ಸುಖಾಸುಮ್ಮನೆ ತಪ್ಪುಗಳನ್ನು ಮಾಡುತ್ತಲೇ ಕಲಿಕೆ ಆರಂಭಿಸಿ. ಗಳಿಸಿರುವ ಪದವಿಯ ವಿಷಯದಲ್ಲೇ ಭವಿಷ್ಯ ರೂಪಿಸಿಕೊಳ್ಳಬೇಕೆಂಬ ಸಾಮಾನ್ಯ ತತ್ವ ಪಕ್ಕಕ್ಕಿಟ್ಟು ವಿಭಿನ್ನವಾಗಿ ಚಿಂತಿಸಿ' ಎಂದು ಸಲಹೆ ನೀಡಿದರು.
`ಈಗಾಗಲೇ ಕೇಂದ್ರದ ಇನ್ನೊವೇಟಿವ್ ಕಾನ್ಸುಲೇಟ್ ತಾಂತ್ರಿಕ ಹೊಸತನವನ್ನು ಉತ್ತೇಜಿಸುವ ಸಲುವಾಗಿ 25ಸಾವಿರಕ್ಕೂ ಅಧಿಕ ಶಾಲೆಗಳನ್ನು ಆರಿಸಿಕೊಂಡಿದ್ದು, ಸಾಮಾನ್ಯ ಮಕ್ಕಳಲ್ಲಿರುವ ಅಗಾಧ ಪ್ರತಿಭೆಯನ್ನು ಹೊರತರುವತ್ತ ಹೆಜ್ಜೆ ಇಟ್ಟಿದೆ. ರಾಜ್ಯದ ಕಾನ್ಸುಲೇಟ್ ಕೂಡ ಈ ಮಾದರಿಯನ್ನು ಅನುಸರಿಸಲಿ' ಎಂದು ಆಶಿಸಿದರು.
ಗೃಹ ಸಚಿವ ಕೆ.ಜೆ.ಜಾರ್ಜ್, `ವಿದ್ಯಾರ್ಥಿ ಸಮೂಹವು ತಂತ್ರಜ್ಞಾನ ಬಳಸಿಕೊಂಡು ಹೊಸತನ್ನು ಸಾಧಿಸುವ ಪ್ರಕ್ರಿಯೆಗೆ ಎಫ್‌ಕೆಸಿಸಿಐ ಪ್ರೋತ್ಸಾಹ ನೀಡುತ್ತಿರುವುದು ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.
ಮಂಥನ್‌ನಲ್ಲಿ ಅಂತಿಮ ಸುತ್ತಿನಲ್ಲಿ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಡಾ.ಜಿ.ಗೌತಮ್ ಮತ್ತು ಡಾ.ಮಹೇಶ್ ಕಡಗಿ ಅವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ ರೂಪಾಯಿ ನೀಡಲಾಯಿತು.
ಶಿವಮೊಗ್ಗದ ಜವಾಹರ್‌ಲಾಲ್ ನೆಹರೂ ನ್ಯಾಷನಲ್ ಎಂಜಿನಿಯರಿಂಗ್ ಕಾಲೇಜಿನ ಸೈಯದ್ ಸಲೀಂ, ಡಿ.ಎಸ್, ವಿನಯ್ ಅವರಿಗೆ 30 ಸಾವಿರ (ದ್ವಿತೀಯ), ಅದೇ ಕಾಲೇಜಿನ ಎಸ್.ವಿ. ಕಾರ್ತಿಕ್ ಮತ್ತು ವಿ.ಆರ್.ನವೀನ್ ಅವರಿಗೆ 20 ಸಾವಿರ (ತೃತೀಯ) ನೀಡಲಾಯಿತು.
ಸಿಎಂಆರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ರೋಹಿತ್ ಕಶ್ಯಪ್, ಸಂಧ್ಯಾ ರಾಮ್ ಅವರಿಗೆ ಸಮಧಾನಕಾರ ಬಹುಮಾನ ನೀಡಲಾಯಿತು.
ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಎಸ್.ಸಡಗೋಪನ್, ಮಹಾಸಂಸ್ಥೆಯ ಅಧ್ಯಕ್ಷ ಕೆ.ಶಿವಷಣ್ಮುಗಂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.