ADVERTISEMENT

ಬರಿಗೈಲಿ ಹಿಂದಿರುಗಿದ ತನಿಖಾ ತಂಡಗಳು

ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 20:21 IST
Last Updated 16 ಡಿಸೆಂಬರ್ 2013, 20:21 IST

ಬೆಂಗಳೂರು: ಎನ್‌.ಆರ್‌.ಚೌಕದ ಕಾರ್ಪೊ­ರೇಷನ್ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದು 28 ದಿನಗಳು ಕಳೆದರೂ, ಆರೋಪಿಯ ಭಾವಚಿತ್ರ ಹೊರತುಪಡಿಸಿ ಪೊಲೀಸ­ರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿಗೆ ತೆರಳಿದ್ದ  ತನಿಖಾ ತಂಡಗಳು ಇದೀಗ ಬರಿಗೈಲಿ ನಗರಕ್ಕೆ ಹಿಂದಿರುಗಿವೆ.

‘ಆರೋಪಿಯ ಪತ್ತೆಗೆ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮೀಷನರ್ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದ್ದು, 200 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿ­ದ್ದಾರೆ. ಆತ ಅನಂತಪುರ ಜಿಲ್ಲೆಯಲ್ಲೂ ಇಂತಹ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಈವರೆಗಿನ ತನಿಖೆಯಿಂದ ಗೊತ್ತಾಗಿದೆ. ಆಂಧ್ರ­ಪ್ರದೇಶ ಪೊಲೀಸ­ರೊಂದಿಗೆ ನಿರಂತರ ಸಂಪರ್ಕ­ದಲ್ಲಿದ್ದೇವೆ. ಎಟಿಎಂ ಘಟಕದ ಸಿ.ಸಿ. ಟಿ.ವಿ ಕ್ಯಾಮೆ­ರಾ­ದಲ್ಲಿ ಲಭ್ಯವಾದ ಭಾವಚಿತ್ರ ಹೊರತುಪಡಿಸಿ ಆರೋಪಿ­ಯ ಹೆಸರು, ವಿಳಾಸ ಹಾಗೂ ಹಿಂದಿನ ಚಟುವಟಿಕೆ­ಗಳ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ನಗರ ಪೊಲೀಸ್‌ ಕಮಿನಷರ್‌ ರಾಘವೇಂದ್ರ ಔರಾದಕರ್‌ ತಿಳಿಸಿದ್ದಾರೆ.

‘ಕರ್ನಾಟಕ, ತಮಿಳುನಾಡು ಹಾಗೂ ಆಂದ್ರ­ಪ್ರದೇಶ­ಗಳಲ್ಲಿ ಆರೋಪಿಯ ಚಹರೆ ಹಾಗೂ ವಿವರ­ಗಳುಳ್ಳ ಭಿತ್ತಿಪತ್ರಗಳನ್ನು ಸಾರ್ವಜನಿಕವಾಗಿ ಹಂಚಲಾಗಿದೆ. ಜತೆಗೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯ ವಾಹಿನಿಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ’ ಎಂದರು.

ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈವರೆಗೆ ಆರೋಪಿಯ ಮುಖ ಚಹರೆ ಹೋಲುವ ಎಂಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆದರೆ, ಎಟಿಎಂ ಘಟಕದ ಹಲ್ಲೆ ಆರೋಪಿಯ ಸಣ್ಣ ಸುಳಿವು ಸಿಗಲಿಲ್ಲ. ಮಾನಸಿಕ ಅಸ್ವಸ್ಥನಂತೆ ಕಾಣುವ ಆತ, ಮೊಬೈಲ್‌ ಕೂಡ ಬಳಕೆ ಮಾಡುವುದಿಲ್ಲ. ಹೀಗಾಗಿ ತನಿಖೆಗೆ ಹಿನ್ನಡೆ­ಯಾಗಿದೆ. ತನಿಖಾ ತಂಡಗಳು ಮೂರು ದಿನ­ಗಳ ಹಿಂದೆಯೇ ನಗರಕ್ಕೆ ವಾಪಸಾಗಿದ್ದು,  ಪ್ರಾಥ­ಮಿಕ ಹಂತದಿಂದ ಕಾರ್ಯಾಚರಣೆ ಆರಂಭಿ­ಸಲು ನಿರ್ಧರಿಸಲಾಗಿದೆ’ ಎಂದು  ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಳಿವಿಗೆ ಬಹುಮಾನ ₨ 5 ಲಕ್ಷಕ್ಕೆ ಏರಿಕೆ
ಆತ ಆಂಧ್ರಪ್ರದೇಶದಲ್ಲಿ ತಲೆಮರೆಸಿ­ಕೊಂಡಿ­ರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಆರೋಪಿಯ ಸುಳಿವು ನೀಡುವವರಿಗೆ ಘೋಷಿಸ­ಲಾಗಿದ್ದ ಬಹುಮಾನದ ಮೊತ್ತ­ವನ್ನು ₨ 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾ­ಗಿದೆ’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT