ADVERTISEMENT

ಬರ ಸ್ಥಿತಿ ವೀಕ್ಷಣೆ: ಸಿ.ಎಂಗೆ ವರದಿ ಸಲ್ಲಿಸಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2012, 19:30 IST
Last Updated 14 ಏಪ್ರಿಲ್ 2012, 19:30 IST

ಬೆಂಗಳೂರು: ರಾಜ್ಯದ ಬರಪೀಡಿತ ಪ್ರದೇಶಗಳಾದ ಬೀದರ್, ಗುಲ್ಬರ್ಗ ಮತ್ತು ಕೋಲಾರ ಜಿಲ್ಲೆಗಳಲ್ಲಿ 2ನೇ ಹಂತದ ಪ್ರವಾಸ ಕೈಗೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಪ್ರವಾಸದಲ್ಲಿ ತಾವು ಕಂಡುಕೊಂಡ ಅಂಶಗಳ ಕುರಿತು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ವರದಿ ಸಲ್ಲಿಸಿದ್ದಾರೆ.

ಬರ ಪರಿಸ್ಥಿತಿಯ ಕಾರಣ ಈ ಪ್ರದೇಶಗಳಲ್ಲಿ ಜನ ಎದುರಿಸುತ್ತಿರುವ ಸಮಸ್ಯೆಗಳು, ಅಗತ್ಯ ಪರಿಹಾರ ಕ್ರಮಗಳನ್ನು ಅವರು ಗುರುವಾರ ಸಲ್ಲಿಸಿರುವ ಎಂಟು ಪುಟಗಳ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಬರ ಪರಿಹಾರ ಕಾಮಗಾರಿಗೆ ಸರ್ಕಾರ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಕೊರತೆ ಎಲ್ಲಿಯೂ ಕಂಡುಬಂದಿಲ್ಲ. ಆದರೆ ಕುಡಿಯುವ ನೀರು ಪೂರೈಸಲು ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದರೂ, ಬೀದರ್ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಸಮಸ್ಯೆ ತೀವ್ರವಾಗಿದೆ. ಸಮಸ್ಯೆ ನಿವಾರಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಯಡಿಯೂರಪ್ಪ ಅವರು ವರದಿಯಲ್ಲಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಹಲವು ವಾರ ಕಳೆದರೂ ಕೂಲಿ ನೀಡಿಲ್ಲ. ಬಿಜೆಪಿ ಸರ್ಕಾರವೇ ಜಾರಿಗೆ ತಂದಿರುವ ವಿವಿಧ ಪಿಂಚಣಿ ಯೋಜನೆಗಳ ವ್ಯಾಪ್ತಿಗೆ ಬರುವ ವ್ಯಕ್ತಿಗಳಿಗೆ ಹಲವು ತಿಂಗಳಿನಿಂದ ಹಣ ದೊರೆತಿಲ್ಲ. ಈ ಕುರಿತೂ ಸರ್ಕಾರ ಗಮನಹರಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.