ADVERTISEMENT

ಬಸ್‌ಗಳ ಡಿಕ್ಕಿ: 35ಕ್ಕೂ ಹೆಚ್ಚು ಮಂದಿಗೆ ಗಾಯ, ನಾಲ್ವರು ಗಂಭೀರ

​ಪ್ರಜಾವಾಣಿ ವಾರ್ತೆ
Published 6 ಮೇ 2018, 19:40 IST
Last Updated 6 ಮೇ 2018, 19:40 IST
ಮೂಡಿಗೆರೆ ತಾಲ್ಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಬಸ್‌.
ಮೂಡಿಗೆರೆ ತಾಲ್ಲೂಕಿನ ಸಬ್ಬೇನಹಳ್ಳಿ ಗ್ರಾಮದ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಬಸ್‌.   

ಮೂಡಿಗೆರೆ: ತಾಲ್ಲೂಕಿನ ಫಲ್ಗುಣಿ ಗ್ರಾಮದ ಬಳಿ ಭಾನುವಾರ ಮಧ್ಯಾಹ್ನ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಖಾಸಗಿ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, 35ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಖಾಸಗಿ ಬಸ್‌ನಲ್ಲಿದ್ದ ನೆಲಮಂಗಲದ ಹಡಪ ಮಾರನಹಳ್ಳಿಯವರಾದ ಬಸವಾಚಾರ್‌, ಭವ್ಯ, ಬಿಂದು, ಚಂದ್ರಾಚಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಅರ್ಜುನ್‌ ಅವರ ಕಾಲಿಗೆ ಗಂಭೀರವಾಗಿ ಗಾಯಗಳಾಗಿದ್ದು ಮಂಗಳೂರಿಗೆ ಕಳುಹಿಸಲಾಗಿದೆ.

ಬೆಂಗಳೂರಿನಿಂದ ಉಡುಪಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಧರ್ಮಸ್ಥಳದಲ್ಲಿ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಬೆಂಗಳೂರಿನ ನೆಲಮಂಗಲಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಸಬ್ಬೇನಹಳ್ಳಿ ಸಮೀಪದ ಫಲ್ಗುಣಿ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ADVERTISEMENT

‘ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಅರ್ಜುನ್‌ ನಿರ್ವಾಹಕನೊಂದಿಗೆ ಮಾತನಾಡುತ್ತಿದ್ದು, ತಿರುವಿನಲ್ಲಿ ಬಲಬದಿಯಲ್ಲಿ ಸಾಗುತ್ತಿದ್ದರು. ಎದುರಿನಿಂದ ಏಕಾಏಕಿ ಖಾಸಗಿ ಬಸ್‌ ಬರುತ್ತಿದ್ದಂತೆ ಮುಖಾಮುಖಿ ಡಿಕ್ಕಿ ಸಂಭವಿಸಿತು’ ಎಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಿಳ್ಳೂರು ಕ್ರಾಸ್‌ನಿಂದ ಮಂಗಳೂರಿಗೆ ತೆರಳುತ್ತಿದ್ದ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ರುದ್ರಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.