ADVERTISEMENT

ಬಾಗಲೂರು ಗ್ರಾಮದಲ್ಲಿ ಕೃಷಿ ಯುಗಾದಿ ಉತ್ಸವ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2012, 19:30 IST
Last Updated 22 ಮಾರ್ಚ್ 2012, 19:30 IST

ಯಲಹಂಕ: `ಕೃಷಿಗೆ ಸಂಬಂಧಿಸಿದ ಯಾವುದೇ ವಿಶ್ವವಿದ್ಯಾನಿಲಯ, ಇಲಾಖೆ ಹಾಗೂ ಸಂಶೋಧನಾ ಸಂಸ್ಥೆಗಳು ಕೃಷಿಕನ ಜಮೀನಿಗೆ ಬಂದು ಅಲ್ಲಿ ತರಬಹುದಾದ ಬದಲಾವಣೆಯ ಬಗ್ಗೆ ಆಲೋಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದಾಗ ಮಾತ್ರ ಕೃಷಿಕನ ಬಾಳನ್ನು ಸುಧಾರಣೆ ಮಾಡಬೇಕೆಂಬ ಗುರಿ ಈಡೇರಲು ಸಾಧ್ಯ ಎಂದು ಶಾಸಕ ಕೃಷ್ಣಬೈರೇಗೌಡ ಅಭಿಪ್ರಾಯಪಟ್ಟರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ವಿವಿಧ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ಬೆಂಗಳೂರು ಉತ್ತರ ತಾಲ್ಲೂಕಿನ ಬಾಗಲೂರು ಗ್ರಾಮದಲ್ಲಿ ಆಯೋಜಿಸಿದ್ದ `ಕೃಷಿ ಯುಗಾದಿ ಉತ್ಸವ~ ಅಂಗವಾಗಿ ನಡೆದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರು ಮತ್ತು ಕೃಷಿ ತಜ್ಞರು ಒಟ್ಟಾಗಿ ಪ್ರಯತ್ನ ಮಾಡಿದಾಗ ಕೃಷಿಯಲ್ಲಿ ಸುಧಾರಣೆ ತರಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

`ಬೇರೆ ದೇಶಗಳಲ್ಲಿ ಒಂದು ಎಕರೆ ಜಾಗದಲ್ಲಿ ಇಪ್ಪತ್ತು  ಟನ್ ಬೆಳೆ ಬೆಳೆಯುತ್ತಿದ್ದರೆ ನಮ್ಮ ದೇಶದಲ್ಲಿ 13 ಟನ್ ಬೆಳೆಯುತ್ತಿದ್ದೇವೆ. ನಮ್ಮಲ್ಲಿ ಉತ್ತಮ ಬೀಜ, ನೀರಾವರಿ, ವಿದ್ಯುತ್, ಶೇಖರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಗಳು ಸರಿ ಇಲ್ಲದ ಕಾರಣ ಹೆಚ್ಚಿನ ಉತ್ಪಾದನೆಗೆ ಅವಕಾಶ ಇಲ್ಲದಂತಾಗಿದ್ದು, ಸರ್ಕಾರಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕಾಗಿದೆ~ ಎಂದು ಅವರು ಹೇಳಿದರು.

ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ನಾರಾಯಣಗೌಡ ಮಾತನಾಡಿ, ರೈತ ಸಂಸ್ಥೆಗಳಿಂದ ಮಾತ್ರ ಮಾರುಕಟ್ಟೆ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿಯಲು ಸಾಧ್ಯ ಎಂದರು.

ನಗರದ ಅಂಚಿನಲ್ಲಿದ್ದರೂ ಈ ಗ್ರಾಮ ಸಾಂಸ್ಕೃತಿಕ ಸೊಗಡಿನ ಕೃಷಿಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರ. ನಗರದ ಹೊರ ವಲಯದ್ಲ್ಲಲಿರುವ  ಗ್ರಾಮಗಳ ರೈತರು ಇತ್ತೀಚಿನ ವರ್ಷಗಳಲ್ಲಿ ಕೃಷಿಯನ್ನು ಮಾಡಬೇಕೊ ಅಥವಾ ಬೇಡವೋ ಎಂಬ ಡೋಲಾಯಮಾನ ಪರಿಸ್ಥಿತಿಯ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ~ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದ `ಕೃಷಿ ಪಂಡಿತ~ ಹಾಗೂ ಇತರೆ ಪ್ರಶಸ್ತಿಗಳನ್ನು ಪಡೆದಿರುವ ಪ್ರಗತಿಪರ ರೈತರನ್ನು ಸನ್ಮಾನಿಸಿ ಗೌರವಿಸ ಲಾಯಿತು. ಕೃಷಿರೇಷ್ಮೆ ಇಲಾಖೆ ವತಿಯಿಂದ  40 ಜನ ರೈತರಿಗೆ 2.38 ಲಕ್ಷ ರೂಪಾಯಿ ಸಹಾಯಧನದ ಚೆಕ್ ವಿತರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ದಿ, ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯರಾದ ಡಾ.ಆರ್.ಪ್ರಸನ್ನಕುಮಾರ್, ನಫೀಸ್ ಫಾತಿಮ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸರ್ವಮಂಗಳ ಕೃಷ್ಣಪ್ಪ, ಸದಸ್ಯರಾದ ದಾನೇಗೌಡ, ಶುಭಾ ನರಸಿಂಹಮೂರ್ತಿ, ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಕೆ.ಜಗದೀಶ್ವರ ಮೊದಲಾದವರು ಇದ್ದರು. ವಿಸ್ತರಣಾ ತಜ್ಞ ಡಾ. ಕೆ.ನಾರಾಯಣಗೌಡ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.