ADVERTISEMENT

ಬಾನಂಗಳದಲ್ಲಿ ಅಪರೂಪದ ಅತಿಥಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2013, 19:51 IST
Last Updated 26 ನವೆಂಬರ್ 2013, 19:51 IST

ಬೆಂಗಳೂರು: ನಭೋಮಂಡಲದ ವಿಸ್ಮಯವೊಂದಕ್ಕೆ  ಸಾಕ್ಷಿಯಾಗುವ ಅವಕಾಶ ಜನಸಾಮಾನ್ಯರಿಗೆ ಒದಗಿದೆ. ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದುಹೋಗ­ಲಿರುವ ‘ಐಸಾನ್’ ಮಹಾಧೂಮಕೇತು   ಡಿ. 10 ರಿಂದ 20 ರವರೆಗೆ ಬರಿಗಣ್ಣಿಗೆ ಗೋಚರಿಸಲಿದೆ.

ನಮ್ಮ ಸೌರಮಂಡಲಕ್ಕೆ ಸೇರದ ಐಸಾನ್ 5 ಕಿ.ಮೀ ವಿಸ್ತೀರ್ಣದ ಕಾಯವಾದರೂ ನ.28 ರಿಂದ ಒಂದು ತಿಂಗಳ ಕಾಲ  ಕಾಣಲಿದೆ.  ‘ಸಹಸ್ರ­ಮಾನದ ಅಪರೂಪದ ಅತಿಥಿ’ ಎಂದು ಕರೆಯಲಾಗಿರುವ ಇದನ್ನು ಆಭ್ಯಸಿ ಸಲು   ವಿಶ್ವದಾದ್ಯಂತ ವಿಜ್ಞಾನಿಗಳು, ಖಗೋಳ ವೀಕ್ಷಕರು ಆಕಾಶದೆಡೆಗೆ ಮುಖಮಾಡಿ ಕಾಯುತ್ತಿದ್ದಾರೆ.

ಭೂಮಿಯಿಂದ 3 ಕೋಟಿ 99 ಲಕ್ಷ ಕಿ.ಮೀ.ಗಳಷ್ಟು ದೂರದಿಂದ ಹಾದು ಹೋಗ­ಲಿರುವ ಐಸಾನ್ 1680ರಲ್ಲಿ ಗೋಚರಿಸಿದ್ದ ‘ದಿ ಗ್ರೇಟ್ ಕಾಮೆಟ್’ ಧೂಮಕೇತುವಿನ ಒಡೆದ ಭಾಗ ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ.

ಈ ಖಗೋಳ ವಿದ್ಯಮಾನವನ್ನು ಜನರ ಬಳಿಗೆ ಕೊಂಡೊಯ್ಯಲು ಭಾರಿ ಸಿದ್ದತೆ ನಡೆಸಿರುವ  ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿಯು ಜಂಟಿ ಯಾಗಿ ಧೂಮಕೇತು ಗಳ ಬಗ್ಗೆ ಇರುವ ಮೂಢ­ನಂಬಿಕೆಗಳನ್ನು ಹೋಗಲಾಡಿಸುವ ಸಲುವಾಗಿ  ‘ಐ–ಆನ್ ಐಸಾನ್’ ಧೂಮಕೇತು ವೀಕ್ಷಣೆ ಆಂದೋಲನ’ವನ್ನು ಆಯೋಜಿಸಿವೆ.    
 
ಇದರ ಅಂಗವಾಗಿ ರಾಜ್ಯದಾದ್ಯಂತ 2040 ವಿಜ್ಞಾನ ಶಿಕ್ಷಕರು, ಮೂರು ಲಕ್ಷ 6ಸಾವಿರ ವಿದ್ಯಾರ್ಥಿಗಳನ್ನು ಧೂಮಕೇತು ವೀಕ್ಷಣೆಗೆ  ಸಂಪನ್ಮೂಲ ವ್ಯಕ್ತಿಗಳನ್ನಾಗಿ ತರಬೇತುಗೊಳಿಸಲು ಕಾರ್ಯಾಗಾರ ಗಳನ್ನು ಆರಂಭಿಸಿವೆ. ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಕ ಕನಿಷ್ಠ 10 ಮಂದಿಯಂತೆ 30 ಲಕ್ಷ ಜನಸಾಮಾನ್ಯ ರನ್ನು ಆಂದೋಲನವು ತಲುಪಲಿದೆ.

ಪ್ರತಿ ಜಿಲ್ಲೆಯಿಂದ ಸರ್ಕಾರಿ, ಅನು ದಾನಿತ ಮತ್ತು ಅನುದಾನ ರಹಿತ 50 ಪ್ರೌಢಶಾಲೆಗಳು ಹಾಗೂ 10 ಪ.ಪೂ ಕಾಲೇಜುಗಳನ್ನು ಆಯ್ಕೆ ಮಾಡ ಲಾಗಿದೆ. ಶಿಕ್ಷಕರ ತರಬೇತಿ ಕಾರ್ಯ  ಈಗಾಗಲೇ ಮುಗಿದಿದ್ದು ವಿದ್ಯಾರ್ಥಿ ಗಳಿಗೆ ತರಬೇತಿ ನೀಡಬೇಕಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಎಸ್.ವಿ. ಸಂಕನೂರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕರಾವಿಪ ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ, ಖಗೋಳ ವಿಜ್ಞಾನಿ ಡಾ.ಪ್ರಜ್ವಲ್ ಶಾಸ್ತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.