ADVERTISEMENT

ಬಾಲ್ಯದಲ್ಲೇ ಬೇಕು ಇಂಗ್ಲಿಷ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 19:30 IST
Last Updated 3 ಜುಲೈ 2012, 19:30 IST

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಬೋಧನೆ ಮಾಡುವ ನೀತಿಯನ್ನು ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ರಕ್ಷಣಾ ಸಮಿತಿ ಸದಸ್ಯರು ಮೈಸೂರು ಬ್ಯಾಂಕ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಸಮಿತಿಯ ಅಧ್ಯಕ್ಷ ಚಿ.ನಾ.ರಾಮು ಮಾತನಾಡಿ, `ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಇಂಗ್ಲಿಷ್ ಜ್ಞಾನದ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಆರನೇ ತರಗತಿಯಿಂದ ಇಂಗ್ಲಿಷ್ ಬೋಧನೆಗೆ ಆದೇಶಿಸಿರುವ ಸರ್ಕಾರ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ನೀತಿಯನ್ನು ಒಂದನೇ ತರಗತಿಯಿಂದಲೇ ಜಾರಿಗೆ ತರಬೇಕು~ ಎಂದು ಒತ್ತಾಯಿಸಿದರು.

`ಮಕ್ಕಳು ಇಂಗ್ಲಿಷ್ ಕಲಿತರೆ ಕನ್ನಡ ನಶಿಸುತ್ತದೆ ಎಂಬು ಭ್ರಮೆಯಲ್ಲಿರುವ ಕೆಲ ಬುದ್ಧಿಜೀವಿಗಳು ಈ ನೀತಿಯನ್ನು ವಿರೋಧಿಸುತ್ತಿದ್ದಾರೆ. ಆದರೆ, ಅವರ ಮಕ್ಕಳು, ಮೊಮ್ಮಕ್ಕಳು ಖಾಸಗಿ ಶಾಲೆಯಲ್ಲಿ ಆಂಗ್ಲ ಭಾಷೆಯ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಶಿಕ್ಷಣ ಮಕ್ಕಳ ಹಕ್ಕು ಎಂದು ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಆ ಬುದ್ಧಿಜೀವಿಗಳ ಮನೆ ಮುಂದೆ ಹೋರಾಟ ಮಾಡಲು ನಿರ್ಧರಿಸಿದ್ದೇವೆ~ ಎಂದು ಎಚ್ಚರಿಕೆ ನೀಡಿದರು.

ಶ್ರೀಮಂತರು, ರಾಜಕಾರಣಿಗಳ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆ ಪಡೆಯುತ್ತಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳು ಇಂಗ್ಲಿಷ್ ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅವರ ಭವಿಷ್ಯಕ್ಕೆ ಪೆಟ್ಟು ಬೀಳುತ್ತಿದೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಶಿಕ್ಷಣದ ಜತೆಗೆ ಇಂಗ್ಲಿಷ್ ವಿಷಯಗಳನ್ನು ಬೋಧನೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.