ADVERTISEMENT

ಬಾವಿಯಲ್ಲಿ ಬಿದ್ದು ಕಾರ್ಮಿಕ ಸಾವು

ಬಣ್ಣ ಬಳಿಯುವಾಗ ಆಯತಪ್ಪಿ ಅವಘಡ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 19:47 IST
Last Updated 2 ಏಪ್ರಿಲ್ 2018, 19:47 IST

ಬೆಂಗಳೂರು: ಮನೆಗೆ ಬಣ್ಣ ಬಳಿಯುವ ವೇಳೆ ಆಯತಪ್ಪಿ, ಮನೆ ಪಕ್ಕವೇ ಇದ್ದ ಬಾವಿಗೆ ಬಿದ್ದು ಕಾರ್ಮಿಕ ಶೈಲೇಶ್ (24) ಎಂಬುವರು ಮೃತಪಟ್ಟಿದ್ದಾರೆ.

ಕೊಡಿಗೇಹಳ್ಳಿ ಬಳಿಯ ಭದ್ರಪ್ಪ ಲೇಔಟ್‌‌ನಲ್ಲಿ ಸೋಮವಾರ ಬೆಳಿಗ್ಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಮನೆ ಮಾಲೀಕ ಪಳನಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಮ್ಮ ಮನೆಗೆ ಬಣ್ಣ ಬಳಿಯುವುದಕ್ಕಾಗಿ ಪಳನಿ ಅವರು ಶೈಲೇಶ್‌ನನ್ನು ಕರೆಸಿದ್ದರು. ಗೋಡೆ ಪಕ್ಕವೇ ನಿಂತು ಅವರಿಬ್ಬರೂ ಬಣ್ಣ ಬಳಿಯುತ್ತಿದ್ದರು. ಈ ವೇಳೆ ಕಾಲು ಜಾರಿ ಇಬ್ಬರೂ ಬಾವಿಯೊಳಗೆ ಬಿದ್ದಿದ್ದರು ಎಂದು ಕೊಡಿಗೇಹಳ್ಳಿ ಪೊಲೀಸರು ತಿಳಿಸಿದರು.

ADVERTISEMENT

ಸಹಾಯಕ್ಕಾಗಿ ಅವರಿಬ್ಬರೂ ಕೂಗಾಡಿದ್ದರು. ಸ್ಥಳೀಯರು ಬಾವಿ ಬಳಿಗೆ ಓಡಿ ಬಂದಿದ್ದರು. ಐದು ನಿಮಿಷಗಳ ಬಳಿಕ ಕೂಗಾಟವೇ ನಿಂತಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಇಬ್ಬರನ್ನೂ ಮೇಲಕ್ಕೆ ಕರೆತಂದರು. ಅಷ್ಟರಲ್ಲೇ ಶೈಲೇಶ್‌ ಅಸುನೀಗಿದ್ದರು. ಉಸಿರಾಡುತ್ತಿದ್ದ ಪಳನಿಯನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಲಾಯಿತು ಎಂದರು.

‘ಬಾವಿಯ ಮೇಲೆ ಕಬ್ಬಿಣದ ಜಾಲರಿ ಹಾಕಲಾಗಿತ್ತು. ಬಣ್ಣ ಬಳಿಯಲು ನೀರು ತೆಗೆಯುವ ಸಲುವಾಗಿ ಜಾಲರಿ ತೆಗೆಯಲಾಗಿತ್ತು. ಬಾವಿ ಸಹ ಕಿರಿದಾಗಿದ್ದರಿಂದ ಉಸಿರುಗಟ್ಟಿ ಕಾರ್ಮಿಕ ಅಸುನೀಗಿದ್ದಾರೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.