ADVERTISEMENT

ಬಾಹ್ಯಾಕಾಶ ತಂತ್ರಜ್ಞಾನ ಬಳಸಲು ಇಲಾಖೆಗಳಿಗೆ ‘ಇಸ್ರೊ’ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 20:01 IST
Last Updated 11 ಜುಲೈ 2017, 20:01 IST
ಬಾಹ್ಯಾಕಾಶ ತಂತ್ರಜ್ಞಾನ ಬಳಸಲು ಇಲಾಖೆಗಳಿಗೆ ‘ಇಸ್ರೊ’ ನಿರ್ದೇಶನ
ಬಾಹ್ಯಾಕಾಶ ತಂತ್ರಜ್ಞಾನ ಬಳಸಲು ಇಲಾಖೆಗಳಿಗೆ ‘ಇಸ್ರೊ’ ನಿರ್ದೇಶನ   

ಬೆಂಗಳೂರು: ‘ಎಲ್ಲಾ ಇಲಾಖೆ, ಸಚಿವಾಲಯಗಳೂ ಬಾಹ್ಯಾಕಾಶ ತಂತ್ರಜ್ಞಾನಬಳಸಬೇಕು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈಗಾಗಲೇ ನಿರ್ದೇಶನ ನೀಡಿದೆ’ ಎಂದು ಇಸ್ರೊದ ನಿವೃತ್ತ ನಿರ್ದೇಶಕಿ ಗೀತಾ ವರದನ್‌ ತಿಳಿಸಿದರು.

ಬೆಂಗಳೂರು ವಿಜ್ಞಾನ ವೇದಿಕೆ ನ್ಯಾಷನಲ್‌ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರಕೃತಿ ವಿಕೋಪಗಳ ಜಾಗೃತಿಗೆ ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಲಾಶಯ ಹಾಗೂ ನದಿಗಳಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂಬ ವಿವರ ಉಪಗ್ರಹಗಳಿಂದ ದೊರೆಯುತ್ತಿದ್ದರೂ ಸುಪ್ರೀಂಕೋರ್ಟ್‌, ತಂಡಗಳನ್ನು ಕಳುಹಿಸಿ ಕಾಲಹರಣ ಮಾಡುತ್ತಿದೆ. ಅವರಿಗೆ ಈ ತಂತ್ರಜ್ಞಾನದ ಬಗ್ಗೆ ತಿಳಿದಿಲ್ಲವೇ. ಇದನ್ನು ಏಕೆ ಬಳಸಿಕೊಳ್ಳುತ್ತಿಲ್ಲ’ ಎಂದು ಸಭಿಕರೊಬ್ಬರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅವರು, ‘ಬಾಹ್ಯಾಕಾಶ ತಂತ್ರಜ್ಞಾನದ ಬಳಕೆ ಹೇಗಾಗುತ್ತಿದೆ ಎಂಬ ಬಗ್ಗೆ 60ಕ್ಕಿಂತ ಹೆಚ್ಚು ಇಲಾಖೆಗಳೊಂದಿಗೆ ಇಸ್ರೊ ಚರ್ಚಿಸಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿ ಬಳಕೆಗೆ 160ಕ್ಕಿಂತ ಹೆಚ್ಚು ಯೋಜನೆಗಳನ್ನು ರೂಪಿಸಿದೆ. ಅಲ್ಲದೆ, ಆ ಬಗ್ಗೆ ಚರ್ಚಿಸಲು ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಅವರೊಂದಿಗೆ ಸಭೆ ನಿಯೋಜನೆಯಾಗಿದೆ. ಅಲ್ಲಿ ಎಲ್ಲಾ ಸಚಿವಾಲಯಗಳು ಭಾಗವಹಿಸಲಿವೆ. ಮುಂದಿನ ದಿನಗಳಲ್ಲಿ ಈ ತಂತ್ರಜ್ಞಾನ ಸಮಗ್ರವಾಗಿ ಜಾರಿಯಾಗಲಿದೆ’ ಎಂದು ಹೇಳಿದರು.

ADVERTISEMENT

‘ಸೂರ್ಯನ ಬಿಸಿಲು ಯಾವ ಭಾಗದಲ್ಲಿ ಹೆಚ್ಚು ಬರುತ್ತದೆ ಎಂಬ ಮಾಹಿತಿಯನ್ನೂ ನಾವು ಪಡೆಯಬಹುದು. ಇದು ಸೌರ ಘಟಕಗಳ ಸ್ಥಾಪನೆಗೆ ನೆರವಾಗುತ್ತದೆ. ಅಲ್ಲದೆ, ವಾಯು ಗುಣಮಟ್ಟ, ಕಾಳ್ಗಿಚ್ಚು ಪರಿವೀಕ್ಷಣೆಯೂ ಈಗ ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಸಮುದ್ರದಲ್ಲಿ ಯಾವ ಭಾಗದಲ್ಲಿ ಮೀನುಗಳು ಹೆಚ್ಚಿವೆ ಎಂಬ ದತ್ತಾಂಶವನ್ನು ನಾವು ಪಡೆಯುತ್ತೇವೆ. ವಾರಕ್ಕೊಮ್ಮೆ ಮೀನುಗಾರರಿಗೆ ಇದನ್ನು ಕಳಿಸಲಾಗುತ್ತದೆ. ಇದರಿಂದ ಮೀನುಗಾರರ ಶೇ 70ರಷ್ಟು ಸಮಯ ಉಳಿತಾಯವಾಗಿದೆ. ಇದರಿಂದ ಶೇ 3ರಷ್ಟು ಹೆಚ್ಚು ಮೀನುಗಳನ್ನು ಸಂಗ್ರಹಿಸಲು ಸಾಧ್ಯವಾಗಿದೆ. ಮೀನುಗಾರರ ಜೀವನಮಟ್ಟವೂ ಸುಧಾರಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.