ADVERTISEMENT

ಬಿಎಂಟಿಸಿ ಚಾಲಕನಿಗೆ ಹಲ್ಲೆ

ಸಂಚಾರ ದಟ್ಟಣೆಯಿಂದ ರೊಚ್ಚಿಗೆದ್ದ ರಿಕ್ಷಾ ಚಾಲಕರಿಂದ ಕೃತ್ಯ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: ಬಿಎಂಟಿಸಿ ಚಾಲಕ ಹಾಗೂ ನಿರ್ವಾಹಕನ ಮೇಲೆ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದನ್ನು ಹಾಗೂ ಪೊಲೀಸರು ದೂರು ದಾಖಲಿಸಲು ವಿಳಂಬ ಮಾಡಿದ್ದನ್ನು ಖಂಡಿಸಿ ರಾಜರಾಜೇಶ್ವರಿ ಡಿಪೊಗೆ ಸೇರಿದ ಸಿಬ್ಬಂದಿ ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು.

`225 ಸಿ ಮಾರ್ಗದ ಬಸ್ ಚಾಲಕ ಪ್ರಭು ರೆಡ್ಡಿ ಹಾಗೂ ನಿರ್ವಾಹಕ ಸುಂದರ್ ಎಂಬವರ ಮೇಲೆ ಬುಧವಾರ ರಾತ್ರಿ ರಿಕ್ಷಾ ಚಾಲಕರು ಹಲ್ಲೆ ನಡೆಸಿದ್ದರು. ರಾಜರಾಜೇಶ್ವರಿ ನಗರದ ಬಿಎಂಎಲ್ ಕಾಂಪ್ಲೆಕ್ಸ್ ಬಳಿ 9 ಗಂಟೆ ಹೊತ್ತಿಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಸಂದರ್ಭದಲ್ಲಿ ಬಸ್ ವೇಗವಾಗಿ ಹೋಗಲಿಲ್ಲ ಎಂಬ ಕಾರಣ ನೀಡಿ ರಿಕ್ಷಾ ಚಾಲಕರು ಬಸ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು ಎಂದು ಬಿಎಂಟಿಸಿ ನೌಕರರು ಆರೋಪಿಸಿದರು.

ಬಳಿಕ ರಾಜರಾಜೇಶ್ವರಿ ಠಾಣೆಯಲ್ಲಿ ದೂರು ನೀಡಲು ಹೋದಾಗ ಪೊಲೀಸರು ಕೂಡಲೇ ದಾಖಲಿಸಿಕೊಳ್ಳಲು ನಿರಾಕರಿಸಿದರು. ಇದರಿಂದ ಆಕ್ರೋಶಗೊಂಡ ಬಿಎಂಟಿಸಿ ಸಿಬ್ಬಂದಿ ಗುರುವಾರ ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಮೆಜೆಸ್ಟಿಕ್, ಯಲಹಂಕ ಮತ್ತಿತರ ಕಡೆಗೆ ಬಸ್‌ಗಳ ಸೇವೆಯಲ್ಲಿ ಸ್ಥಗಿತ ಉಂಟಾಗಿತ್ತು. ಇದರಿಂದಾಗಿ ಜನರು ಪರದಾಡಬೇಕಾಯಿತು. ಬಿಎಂಟಿಸಿ ಹಿರಿಯ ಅಧಿಕಾರಿಗಳ ಭರವಸೆ ನಂತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು.

`ಬಿಎಂಟಿಸಿ ಸಿಬ್ಬಂದಿಯಲ್ಲಿ ಹಲವು ಕಾಲದಿಂದ ಮಡುಗಟ್ಟಿದ ಆಕ್ರೋಶ ಈಗ ಕಟ್ಟೆ ಒಡೆದಿದೆ. ನಿಗಮವು ನೌಕರರ ವೇತನ ಹೆಚ್ಚಿಸಲು ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಹಿರಿಯ ಅಧಿಕಾರಿಗಳ ದೌರ್ಜನ್ಯ ಮಿತಿಮೀರಿದೆ. ಲಾಭದ ಉದ್ದೇಶದಿಂದ ಮಾತ್ರ ನಿಗಮವು ಕಾರ್ಯನಿರ್ವಹಿಸುತ್ತಿದೆ' ಎಂದು ಸಿಐಟಿಯು ಪಶ್ಚಿಮ ವಲಯದ ಪ್ರಧಾನ ಕಾರ್ಯದರ್ಶಿ ರಾಜ ಸಿ.ಮುತ್ತಿಗೆ ಆರೋಪಿಸಿದರು.

`ರಾತ್ರಿ ಜಗಳ ಮುಗಿದ ನಂತರ ಪ್ರಭುರೆಡ್ಡಿ ಮತ್ತು ಸುಂದರ್ ಎಂಬುವರು ಠಾಣೆಗೆ ಬಂದು ಘಟನೆ ಬಗ್ಗೆ ವಿವರಿಸಿ ಹೋಗಿದ್ದರು. ಆದರೆ, ಯಾವುದೇ ಪ್ರಕರಣ ದಾಖಲಿಸಿರಲಿಲ್ಲ. ಗುರುವಾರ ಬೆಳಿಗ್ಗೆ ಅವರು ದೂರು ನೀಡಿದ್ದಾರೆ. ಅಲ್ಲದೇ, ಹಲ್ಲೆ ನಡೆಸಿದವರ ಆಟೊಗಳ ನೋಂದಣಿ ಸಂಖ್ಯೆಯನ್ನು ಕೊಟ್ಟಿದ್ದಾರೆ. ಆಟೊ ಚಾಲಕರ ಪತ್ತೆ ಕಾರ್ಯ ನಡೆಯುತ್ತಿದೆ' ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.