ADVERTISEMENT

ಬಿಎಂಟಿಸಿ ಡಿಪೊಗಳಲ್ಲಿ ಎಸ್‌ಟಿಪಿ ಅಳವಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 20:11 IST
Last Updated 5 ಜೂನ್ 2017, 20:11 IST
ಇಂದ್ರಜಿತ್‌ ಲಂಕೇಶ್‌ (ಎಡದಿಂದ ಮೂರನೆಯವರು), ಮೇಘನಾ ರಾಜ್‌ ಅವರು ಔಷಧೀಯ ಸಸ್ಯನೆಟ್ಟರು. ಕಿರಣ್‌ ಕುಮಾರ್‌, ಸುಂದರರಾಜ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದ್ದಾರೆ.
ಇಂದ್ರಜಿತ್‌ ಲಂಕೇಶ್‌ (ಎಡದಿಂದ ಮೂರನೆಯವರು), ಮೇಘನಾ ರಾಜ್‌ ಅವರು ಔಷಧೀಯ ಸಸ್ಯನೆಟ್ಟರು. ಕಿರಣ್‌ ಕುಮಾರ್‌, ಸುಂದರರಾಜ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದ್ದಾರೆ.   

ಬೆಂಗಳೂರು: ‘ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಎಲ್ಲ ಡಿಪೊಗಳಲ್ಲಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ಸ್ಥಾಪಿಸಬೇಕು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.

ಜಯನಗರದಲ್ಲಿರುವ ಬಿಎಂಟಿಸಿ ಘಟಕ–4ರಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಪರಿಸರ ದಿನ ಹಾಗೂ 89ನೇ ಬಸ್ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೆಎಸ್‌ಆರ್‌ಟಿಸಿ, ವಾಯವ್ಯ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ಡಿಪೊಗಳಲ್ಲಿ ಎಸ್‌ಟಿಪಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿ ಬಿಎಂಟಿಸಿಯ 43 ಡಿಪೊಗಳಿದ್ದು, ಅವುಗಳಲ್ಲಿ ಮುಂದಿನ ಪರಿಸರ ದಿನದ ಒಳಗೆ ಎಸ್‌ಟಿಪಿಗಳನ್ನು ಸ್ಥಾಪಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಅಪಾರ್ಟ್‌ಮೆಂಟ್‌ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣ ಹಾಗೂ ಹೋಟೆಲ್‌ಗಳಲ್ಲಿ ಎಸ್‌ಟಿಪಿಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು. ‘ಸಾರಿಗೆ ನಿಗಮಗಳಲ್ಲಿ ಅಂತರ ನಿಗಮ ವರ್ಗಾವಣೆ ಪ್ರಕ್ರಿಯೆ ಒಂದು ವಾರದಲ್ಲಿ ಆರಂಭವಾಗಲಿದೆ. ನೌಕರರ ಭತ್ಯೆ ಸಮಸ್ಯೆಯನ್ನು ಬಗೆಹರಿಸುತ್ತೇವೆ’ ಎಂದರು.

ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಮಾತನಾಡಿ, ‘ಬೆಳ್ಳಂದೂರು ಕೆರೆಯ ನೊರೆ ಹಾಗೂ ಬೆಂಕಿ ಸಮಸ್ಯೆಯನ್ನು ನಿವಾರಿಸಬೇಕು’ ಎಂದು ಒತ್ತಾಯಿಸಿದರು. ನಟ ಸುಂದರರಾಜ್‌, ‘ಒಂದು ಮರ ಸಾವಿರ ಜನರಿಗೆ ಜೀವ ನೀಡುತ್ತದೆ. ಆದರೆ, ನಾವು ಒಂದು ಮರಕ್ಕೂ ಜೀವ ನೀಡುವುದಿಲ್ಲ. ಇನ್ನಾದರೂ ಸಸಿ ನೆಟ್ಟು ಪೋಷಿಸಬೇಕು’ ಎಂದರು.

ವನ್ಯಜೀವಿ ಸಂರಕ್ಷಕ ಡಿ.ಕಿರಣ್‌ ಕುಮಾರ್‌, ‘ಮನುಷ್ಯ ಹಾಗೂ ಪ್ರಾಣಿ–ಪಕ್ಷಿಗಳ ನಡುವೆ ಸಮರ ಏರ್ಪಟ್ಟಿದೆ. ಇದನ್ನು ಕಡಿಮೆ ಮಾಡಬೇಕು. ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು.

ಬಸ್‌ ಪಥ ಬೇಕು: ‘ನಗರದಲ್ಲಿ ಪ್ರತ್ಯೇಕ ಬಸ್‌ ಪಥದ ಬಗ್ಗೆ ಟ್ವಿಟರ್ ಮೂಲಕ ಸಮೀಕ್ಷೆ ನಡೆಸಿದ್ದು, ಶೇ 63ರಷ್ಟು ಪ್ರಯಾಣಿಕರು ಪಥ ಬೇಕು ಎಂದಿದ್ದಾರೆ. ಪ್ರಾಯೋಗಿಕವಾಗಿ ಜಾರಿಗೆ ತಂದು ಮುಂದಿನ ಕ್ರಮ ಕೈಗೊಳ್ಳುವಂತೆ ಶೇ 30ರಷ್ಟು ಮಂದಿ ಸಲಹೆ ನೀಡಿದ್ದಾರೆ. ಇದರ ಅವಶ್ಯಕತೆಯಿಲ್ಲ ಎಂದು ಶೇ 7ರಷ್ಟು ಜನ ಹೇಳಿದ್ದಾರೆ. ಇದರ ವರದಿಯನ್ನು ಸಾರಿಗೆ ಇಲಾಖೆಗೆ ಸಲ್ಲಿಸುತ್ತೇವೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್‌ ಕೌರ್‌ ತಿಳಿಸಿದರು.

‘ಸಂಸ್ಥೆಯ 36 ಡಿಪೊಗಳಲ್ಲಿ ಎಫ್ಲ್ಯುಯೆಂಟ್ ಟ್ರೀಟ್‌ಮೆಂಟ್ ಪ್ಲಾಂಟ್ (ಇಟಿಪಿ) ಅಳವಡಿಸಲಾಗಿದೆ. ಉಳಿದ ಡಿಪೊಗಳಲ್ಲಿ ಇಟಿಪಿ ಅಳವಡಿಸುತ್ತೇವೆ. ವಾಹನಗಳನ್ನು ಸ್ವಚ್ಛಗೊಳಿಸಲು ಬಳಸುವ ನೀರನ್ನು ಮರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶಾಂತಿನಗರ ಬಸ್‌ ನಿಲ್ದಾಣದಲ್ಲಿ ಎಸ್‌ಟಿಪಿ ಅಳವಡಿಸಲಾಗಿದೆ’ ಎಂದು ಅವರು ತಿಳಿಸಿದರು.

‘ನಟ–ನಟಿಯರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಲಿ’
ಬಿಎಂಟಿಸಿ ಅಧ್ಯಕ್ಷ ಎಂ.ನಾಗರಾಜ್‌ ಯಾದವ್‌ ಮಾತನಾಡಿ, ‘ಕನ್ನಡದ ನಟ–ನಟಿಯರು ಒಂದು ದಿನ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುವುದರಿಂದ ಪ್ರಯಾಣಿಕರನ್ನು ಸೆಳೆಯಬಹುದು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಗೂ ಪತ್ರ ಬರೆಯುತ್ತೇನೆ. ತಾರೆಯರಿಗೆ ಬೇಕಾದ ಭದ್ರತೆ ಕಲ್ಪಿಸಲು ಸಿದ್ಧ’ ಎಂದು ಹೇಳಿದರು. ಇದಕ್ಕೆ ಸ್ಪಂದಿಸಿದ ಸುಂದರರಾಜ್‌, ‘ನಾನು ಪ್ರತಿ ಭಾನುವಾರ ಬಿಎಂಟಿಸಿಯಲ್ಲೇ ಸಂಚರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.