ADVERTISEMENT

ಬಿಎಂಟಿಸಿ ಬಸ್ ನಿಲುಗಡೆಗೆ ಆಗ್ರಹ;ಜೆಡಿಎಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2012, 19:30 IST
Last Updated 6 ಆಗಸ್ಟ್ 2012, 19:30 IST

ಬೆಂಗಳೂರು: ನಾಗಸಂದ್ರ ಮತ್ತು ನೆಟ್ಟಕಲ್ಲಪ್ಪ ವೃತ್ತದಲ್ಲಿ ಬಿಎಂಟಿಸಿ ಬಸ್ ನಿಲುಗಡೆಯನ್ನು ನಿರ್ಬಂಧಿಸಿರುವ ಸಂಚಾರ ಪೊಲೀಸರ ಕ್ರಮವನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ನೆಟ್ಟಕಲ್ಲಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

`ನೆಟ್ಟಕಲ್ಲಪ್ಪ ಮತ್ತು ನಾಗಸಂದ್ರ ವೃತ್ತಗಳಿಗೆ ಸುಮಾರು ಐವತ್ತು ವರ್ಷಗಳ ಇತಿಹಾಸವಿದೆ. ಜಯನಗರ, ಜೆ.ಪಿ.ನಗರದ ಕಡೆ ಹೋಗುವ ಬಿಎಂಟಿಸಿ ಬಸ್‌ಗಳು ಹಲವು ದಶಕಗಳಿಂದ ನಾಗಸಂದ್ರ ಮತ್ತು ನೆಟ್ಟಕಲ್ಲಪ್ಪ ವೃತ್ತದ ಮಾರ್ಗವಾಗಿ ಹಾದು ಹೋಗುತ್ತಿದ್ದವು. ಆದರೆ, ಬಿಎಂಟಿಸಿ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯದೆ ಈ ವೃತ್ತಗಳಲ್ಲಿನ ಬಸ್ ನಿಲುಗಡೆಯನ್ನು ಏಕಾಏಕಿ ನಿರ್ಬಂಧಿಸಿದ್ದಾರೆ~ ಎಂದು ಜೆಡಿಎಸ್‌ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ವಿ.ಆದಿಶೇಷಯ್ಯ ಆರೋಪಿಸಿದರು.

`ನಾಗಸಂದ್ರ, ಟಾಟಾ ಸಿಲ್ಕ್ ಫಾರಂ, ಶಾಸ್ತ್ರಿನಗರ, ಬೈರಪ್ಪ ಬ್ಲಾಕ್, ತ್ಯಾಗರಾಜನಗರ, ಎನ್.ಆರ್.ಕಾಲೋನಿ ನಿವಾಸಿಗಳು ಜಯನಗರ ಅಥವಾ ಜೆ.ಪಿ.ನಗರದ ಕಡೆ ಹೋಗುವುದಾದರೆ ಶಾಂತಿ ಚಿತ್ರಮಂದಿರದ ಬಳಿಯಿರುವ ಹಳೆಯ ಬಸ್ ನಿಲ್ದಾಣಕ್ಕೆ ಹೋಗಬೇಕು. ಇಲ್ಲವೇ ಬಸವನಗುಡಿ ಪೊಲೀಸ್ ಠಾಣೆ ಬಳಿ ಇರುವ ಬಸ್ ನಿಲ್ದಾಣಕ್ಕೆ ಹೋಗಬೇಕು. ಒಂದೂವರೆ ಕಿಲೋ ಮೀಟರ್ ದೂರವಿರುವ ಈ ಬಸ್ ನಿಲ್ದಾಣಗಳಿಗೆ ಹೋಗಲು ಸ್ಥಳೀಯ ನಿವಾಸಿಗಳು, ವೃದ್ಧರು, ಅಂಗವಿಕಲರಿಗೆ ತೊಂದರೆಯಾಗುತ್ತಿದೆ~ ಎಂದು ದೂರಿದರು.

`ಬೇಡಿಕೆ ಈಡೇರಿಸುವಂತೆ ಈಗಾಗಲೇ ಹಲವು ಬಾರಿ ಬಿಎಂಟಿಸಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಬಸ್ ನಿಲುಗಡೆಗೆ ನಮ್ಮ ಆಕ್ಷೇಪವಿಲ್ಲ. ಆದರೆ, ಸಂಚಾರ ಪೊಲೀಸರು ಇದಕ್ಕೆ ಒಪ್ಪುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ, ಪ್ರತಿಭಟನೆ ನಡೆಸುವುದು ಅನಿವಾರ್ಯವಾಯಿತು~ ಎಂದು ಬಸವನಗುಡಿ ಕ್ಷೇತ್ರದ ಜೆಡಿಎಸ್ ಘಟಕದ ಅಧ್ಯಕ್ಷ ಜ್ಞಾನೇಶ್ ಹೇಳಿದರು.

`ಸಂಚಾರ ಪೊಲೀಸ್ ವಿಭಾಗದ ಹಿರಿಯ ಅಧಿಕಾರಿಗಳು ಮತ್ತು ಬಿಎಂಟಿಸಿ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದಾರೆ. ಹದಿನೈದು ದಿನದೊಳಗೆ ನೆಟ್ಟಕಲ್ಲಪ್ಪ ಮತ್ತು ನಾಗಸಂದ್ರ ವೃತ್ತದಲ್ಲಿ ಬಿಎಂಟಿಸಿ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ~ ಎಂದು  ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.