ADVERTISEMENT

ಬಿಎಸ್‌ವೈ ಆಪ್ತ ಸಹಾಯಕ, ರೂಪದರ್ಶಿ ಹೆಸರು ಪ್ರಸ್ತಾಪ

ರೋಚಕತೆ ಪಡೆದ ಈಶ್ವರಪ್ಪ ಆಪ್ತ ಸಹಾಯಕನ ಅಪಹರಣ ಯತ್ನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 20:04 IST
Last Updated 12 ಜುಲೈ 2017, 20:04 IST
ಬಿಎಸ್‌ವೈ ಆಪ್ತ ಸಹಾಯಕ, ರೂಪದರ್ಶಿ ಹೆಸರು ಪ್ರಸ್ತಾಪ
ಬಿಎಸ್‌ವೈ ಆಪ್ತ ಸಹಾಯಕ, ರೂಪದರ್ಶಿ ಹೆಸರು ಪ್ರಸ್ತಾಪ   

ಬೆಂಗಳೂರು: ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ (ಪಿ.ಎ) ವಿನಯ್ ಅಪಹರಣ ಯತ್ನ ಪ್ರಕರಣದಲ್ಲಿ ಈಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪ್ತ ಸಹಾಯಕ ಹಾಗೂ ರೂಪದರ್ಶಿಯೊಬ್ಬರ ಹೆಸರು ಪ್ರಸ್ತಾಪವಾಗಿ ವಿವಾದ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಯಡಿಯೂರಪ್ಪ ಅವರ ಪಿ.ಎ ಸಂತೋಷ್ ಹಾಗೂ ಉತ್ತರ ಕರ್ನಾಟಕದ ರೂಪದರ್ಶಿಯೊಬ್ಬರ ನಡುವಿನ ‘ಸ್ನೇಹ’ದ ಸಂಗತಿಯನ್ನು ಬಹಿರಂಗಪಡಿಸಲು ವಿನಯ್ ಮುಂದಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಅಪಹರಿಸುವ ಸಂಚು ನಡೆದಿತ್ತು ಎಂಬ ವದಂತಿ ಬುಧವಾರ ಹರಿದಾಡಿತು.

ರೂಪದರ್ಶಿ ಸ್ಪಷ್ಟನೆ: ಸುದ್ದಿಗಾರರ ಜತೆ ಮಾತನಾಡಿದ ರೂಪದರ್ಶಿ, ‘ನಾನು ಕೆಲಸ ಮಾಡುತ್ತಿರುವ ಸಂಘಸಂಸ್ಥೆಯೊಂದರ ಕಾರ್ಯಕ್ರಮದ ಕುರಿತು ಮಾತನಾಡಲು ಹಿಂದೆ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಸಂತೋಷ್‌ ಪರಿಚಯವಾಗಿತ್ತು. ಅಂದ ಮಾತ್ರಕ್ಕೆ ನಮ್ಮ ನಡುವೆ ಸಂಬಂಧ ಕಲ್ಪಿಸುವವರು ಅನಾಗರಿಕರು’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ADVERTISEMENT

ವಿನಯ್ ವಿಚಾರಣೆ: ಇದರ ಮಧ್ಯೆಯೇ ಉತ್ತರ ವಿಭಾಗದ ಡಿಸಿಪಿ ಚೇತನ್ ಅವರು ಬುಧವಾರ ಬೆಳಿಗ್ಗೆ ವಿನಯ್ ಅವರನ್ನು ಮಹಾಲಕ್ಷ್ಮಿ ಲೇಔಟ್ ಠಾಣೆಗೆ ಕರೆಸಿಕೊಂಡು ಒಂದು ತಾಸು ವಿಚಾರಣೆ ನಡೆಸಿದರು.

ಮೇ 11ರಂದು ದುಷ್ಕರ್ಮಿಗಳು ವಿನಯ್ ಅವರನ್ನು ಅಪಹರಿಸಲು ಯತ್ನಿಸಿದ್ದರು. ಈ ಸಂಬಂಧ ಪೊಲೀಸರು ಮಂಗಳವಾರ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

‘ಯಾವ ರೂಪದರ್ಶಿಯ ವಿಚಾರವೂ ನನಗೆ ಗೊತ್ತಿಲ್ಲ. ಪ್ರಕರಣ ಇನ್ನೂ ತನಿಖಾ ಹಂತದಲ್ಲಿದ್ದು, ಈಗಲೇ ಏನನ್ನೂ ಹೇಳಲು ಇಚ್ಛಿಸುವುದಿಲ್ಲ’ ಎಂದು ವಿನಯ್ ಪ್ರತಿಕ್ರಿಯಿಸಿದರು.

**

ಆರೋಪಿ ಪತ್ನಿಯಿಂದ ಹೇಬಿಯಸ್ ಕಾರ್ಪಸ್‌

ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ  ಅವರ ಆಪ್ತ ಸಹಾಯಕ ವಿನಯ್‌ ಅವರನ್ನು ಅಪಹರಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ಪ್ರಶಾಂತ್ ಕುಮಾರ್ ಪತ್ನಿ, ‘ನನ್ನ ಗಂಡನನ್ನು ಹುಡುಕಿಕೊಡಿ’ ಎಂದು ಹೈಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ.

‘ಪೊಲೀಸರು ನನ್ನ ಗಂಡನನ್ನು  ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಅವರನ್ನು ಕೂಡಲೇ ಕೋರ್ಟ್‌ಗೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕು’ ಎಂದು ಕೋರಿ ಪ್ರಶಾಂತ್‌ ಪತ್ನಿ ಅರ್ಚನಾ ಈ ಅರ್ಜಿ ಸಲ್ಲಿಸಿದ್ದಾರೆ.

ಬುಧವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರತಿವಾದಿಗಳಾದ ಗೃಹ ಇಲಾಖೆ ಕಾರ್ಯದರ್ಶಿ, ನಗರ ಪೊಲೀಸ್ ಕಮಿಷನರ್, ಕೆ.ಆರ್.ಪುರಂ ಹಾಗೂ ಎಚ್‌.ಎ.ಎಲ್‌. ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ಗಳಿಗೆ ನೋಟಿಸ್ ಜಾರಿಗೊಳಿಸಲು ನಿರ್ದೇಶಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲ ಇ.ಎಸ್‌.ಇಂದಿರೇಶ್, ‘ಪ್ರಶಾಂತ್ ಒಬ್ಬ ರೌಡಿ ಶೀಟರ್. ಆತ 14 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ. ಈ ಪ್ರಕರಣದಲ್ಲಿ ಆತ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಅವನನ್ನು ಬಂಧಿಸಲು ನಾಲ್ಕು ಪ್ರತ್ಯೇಕ ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ’ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸಿ ಎಂದು ಸೂಚಿಸಿದೆ.

**

‘2–3 ಕರೆ ಅಷ್ಟೇ’
‘ಸಂತೋಷ್ ಅವರು ನಮ್ಮ ಸಂಘದ ಕೆಲಸಗಳಿಗೆ ಸಹಕರಿಸುವುದಾಗಿ ಭರವಸೆ ಕೊಟ್ಟಿದ್ದರು. ಈವರೆಗೆ 2–3 ಸಲ ಮಾತ್ರ ಅವರ ಜತೆ ಮೊಬೈಲ್‌ನಲ್ಲಿ ಮಾತನಾಡಿರಬಹುದು. ವದಂತಿ ಸೃಷ್ಟಿಸಿ, ಘನತೆಗೆ ಧಕ್ಕೆ ತರಲು ಯತ್ನಿಸುತ್ತಿರುವವರು ಯಾರು ಎಂಬುದು ಗೊತ್ತಾಗಬೇಕು’ ಎಂದು ರೂಪದರ್ಶಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.