ADVERTISEMENT

ಬಿಎಸ್‌ಪಿ ಪಟ್ಟಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 20:11 IST
Last Updated 6 ಏಪ್ರಿಲ್ 2013, 20:11 IST

ಬೆಂಗಳೂರು: ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿವೆ.

ಬಿಎಸ್‌ಪಿ 93 ಹಾಗೂ ಎಸ್‌ಡಿಪಿಐ 17 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಎರಡೂ ಪಕ್ಷಗಳು ತೀರ್ಮಾನಿಸಿದ್ದು, ಬಿಎಸ್‌ಪಿ 199 ಹಾಗೂ ಎಸ್‌ಡಿಪಿಐ 25 ಕ್ಷೇತ್ರಗಳಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಂಡಿವೆ. ಬಿಎಸ್‌ಪಿ ಪಟ್ಟಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬುಳ್ಳಾ ಸುಬ್ಬರಾವ್ ಸೇರಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತೆಗೆ ಟಿಕೆಟ್
ಬೆಂಗಳೂರು:
ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಲೈಂಗಿಕ ಅಲ್ಪಸಂಖ್ಯಾತರೊಬ್ಬರಿಗೆ ಬಿಎಸ್‌ಪಿ ಅವಕಾಶ ನೀಡಿದೆ. ಸೌಮ್ಯಾ ಎಂಬ ಲೈಂಗಿಕ ಅಲ್ಪಸಂಖ್ಯಾತೆ ಈ ಬಾರಿ ಬಿಎಸ್‌ಪಿ ಅಭ್ಯರ್ಥಿಯಾಗಿ ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.

ನಗರದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ, `ಅವಕಾಶ ವಂಚಿತ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಪಕ್ಷದ ಉದ್ದೇಶ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಲೈಂಗಿಕ ಅಲ್ಪಸಂಖ್ಯಾತರೊಬ್ಬರಿಗೆ ಪಕ್ಷದ ಟಿಕೆಟ್ ನೀಡಿದ್ದೇವೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಗೋಸಂಗಿ ಎಂಬ ಅಲೆಮಾರಿ ಸಮುದಾಯದ ಮಹಿಳೆಯೊಬ್ಬರಿಗೂ ಟಿಕೆಟ್ ನೀಡಲಾಗಿದೆ' ಎಂದರು.

ಸೌಮ್ಯಾ ಮಾತನಾಡಿ, `ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಬೇರೆ ಪಕ್ಷಗಳು ಈ ಕ್ಷೇತ್ರದಿಂದ ತಮ್ಮ ಅಭ್ಯರ್ಥಿಗಳನ್ನು ಹಿಂತೆಗೆದುಕೊಳ್ಳಲಿ' ಎಂದು ಆಗ್ರಹಿಸಿದರು.

`ಗಾಂಧಿನಗರ ಆರ್ಥಿಕ ಚಟುವಟಿಕೆಗಳ ಪ್ರಮುಖ ಕೇಂದ್ರ. ಇಲ್ಲಿನ ವ್ಯಾಪಾರಸ್ಥರು ನಮ್ಮನ್ನು ಗೌರವದಿಂದ ಕಾಣುವುದರ ಜೊತೆಗೆ ಹಣ ನೀಡಿ ಪೋಷಿಸುತ್ತಾ ಬಂದಿದ್ದಾರೆ. ಈಗ ನೋಟಿನ ಜೊತೆ ಒಂದು ವೋಟು ಕೊಡಿ ಎಂದು ಕೇಳುತ್ತೇನೆ. ಕ್ಷೇತ್ರದ ಮತದಾರರು ಬೆಂಬಲಿಸುತ್ತಾರೆ ಎಂಬ ಭರವಸೆ ಇದೆ' ಎಂದರು.


ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.