ಬೆಂಗಳೂರು: ಜಿಂದಾಲ್ ಸಮೂಹದಿಂದ ಲಂಚ ಪಡೆದ ಆರೋಪದ ಮೇಲೆ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅವರ ಪುತ್ರರು ಮತ್ತು ಅಳಿಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿದೆ.
ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಡಿ.ಆರ್.ವೆಂಕಟಸುದರ್ಶನ್ ಅವರು ಶನಿವಾರ ಅರ್ಜಿಯ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಸಿಬಿಐ ಪರ ಹಿರಿಯ ವಕೀಲ ಅಶೋಕ್ ಭಾನ್ ವಾದ ಮಂಡನೆಗೆ ಮುಂದಾದರು. ಯಡಿಯೂರಪ್ಪ ಅವರ ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಪರ ವಕೀಲ ಸಿ.ವಿ.ನಾಗೇಶ್ ಅವರು ಭಾನ್ ಅವರ ವಾದ ಮಂಡನೆಗೆ ಆಕ್ಷೇಪ ಎತ್ತಿದರು.
`ಭಾನ್ ಅವರು ಈ ನ್ಯಾಯಾಲಯದ ಅಧಿಕೃತ ಪಬ್ಲಿಕ್ ಪ್ರಾಸಿಕ್ಯೂಟರ್ ಅಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ಅವರಿಗೆ ವಾದ ಮಂಡಿಸಲು ಅವಕಾಶವಿಲ್ಲ~ ಎಂದು ನಾಗೇಶ್ ವಾದಿಸಿದರು. ಆದರೆ, ನಾಗೇಶ್ ವಾದವನ್ನು ಮಾನ್ಯ ಮಾಡದಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ ಭಾನ್, `ಈ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಈಗ ನನಗೆ ವಾದಿಸುವ ಅವಕಾಶವಿದೆ. ವಿಚಾರಣೆಯ ಹಂತದಲ್ಲಿ ಮಾತ್ರ ಅಂತಹ ನಿಯಮ ಅನ್ವಯವಾಗುತ್ತದೆ~ ಎಂದರು.
ಪ್ರಕರಣದ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದ ನ್ಯಾಯಾಧೀಶರು, ಸಿಬಿಐ ಪರ ಯಾರು ವಾದ ಮಂಡಿಸಬೇಕು ಎಂಬುದರ ಕುರಿತು ಅದೇ ದಿನ ಆದೇಶ ನೀಡುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.