ADVERTISEMENT

ಬಿಐಎಎಲ್‌ಗೆ ಕೆಂಪೇಗೌಡರ ಹೆಸರು

ನೂತನ ಟರ್ಮಿನಲ್‌ ಇಂದು ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 20:03 IST
Last Updated 13 ಡಿಸೆಂಬರ್ 2013, 20:03 IST

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್‌)ದ ಟರ್ಮಿನಲ್‌ ವಿಸ್ತೀರ್ಣ ಈಗ ಮತ್ತಷ್ಟು ದೊಡ್ಡ­ದಾಗಿದೆ. ಆಕರ್ಷಕವೂ ಆಗಿದೆ. 73,347 ಚದರ ಮೀಟರ್‌ ಇದ್ದ ಟರ್ಮಿನಲ್‌ ಪ್ರದೇಶವನ್ನು 1,50,500 ಚದರ ಮೀಟರ್‌ಗೆ ವಿಸ್ತರಿಸಲಾಗಿದೆ.

ರೂ 1500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ನೂತನ ಟರ್ಮಿನಲ್‌ನ ಉದ್ಘಾಟನೆ ಶನಿವಾರ ನೆರವೇರಲಿದೆ. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡ ಅವರ ಹೆಸರು ಕೂಡ ನಾಮಕರಣ ಮಾಡಲಾಗುತ್ತದೆ ಎಂದು ಮೂಲ­ಸೌಲಭ್ಯ ಅಭಿವೃದ್ದಿ ಸಚಿವ ಎಸ್‌.ಆರ್‌.­ಪಾಟೀಲ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಮಾನಯಾನ ಸಚಿವ ಅಜಿತ್‌ಸಿಂಗ್‌, ಮುಖ್ಯ­ಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ವಿಸ್ತರಣಾ ಯೋಜನೆಯಿಂದಾಗಿ ನಿಲ್ದಾಣದ ಸಾಮರ್ಥ್ಯ ವಾರ್ಷಿಕ ಈಗಿನ 1.2 ಕೋಟಿ ಪ್ರಯಾಣಿಕರಿಂದ ಎರಡು ಕೋಟಿಗೆ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಈ ಸಾಮರ್ಥ್ಯವನ್ನು ವಾರ್ಷಿಕ 5.5 ಕೋಟಿಗೆ ಹೆಚ್ಚಿಸುವ ಉದ್ದೇಶ ಇದೆ ಎಂದು ವಿವರಿಸಿದರು.

ದೇಶ– ವಿದೇಶದ 52 ಸ್ಥಳಗಳಿಗೆ ನಿತ್ಯ 312 ವಿಮಾನಗಳ ಹಾರಾಟ ನಡೆಯುತ್ತಿದೆ ಎಂದರು.

ಅತಿ ಹೆಚ್ಚು ಪ್ರಯಾಣಿಕರ ಓಡಾಟ ದೆಹಲಿ ಮತ್ತು ಮುಂಬೈನಲ್ಲಿದೆ. 3ನೇ ಸ್ಥಾನದಲ್ಲಿ ಬೆಂಗಳೂರು ಮತ್ತು ಚೆನ್ನೈ ಇದ್ದು, ಮುಂದಿನ ವರ್ಷದಲ್ಲಿ ಬೆಂಗಳೂರು ಒಂದೇ 3ನೇ ಸ್ಥಾನದಲ್ಲಿ ಇರುತ್ತದೆ ಎಂದು ಅವರು ವಿವರಿಸಿದರು.

ಹೆಚ್ಚಾದ ಪ್ರಯಾಣಿಕರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಳಸಿದ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನಿಲ್ದಾಣ ಉದ್ಘಾಟನೆಯಾದ 2008–9ನೇ ಸಾಲಿನಲ್ಲಿ 87.1 ಲಕ್ಷ ಮಂದಿ ಪ್ರಯಾ­ಣಿಕರು ಬಳಕೆ ಮಾಡಿದ್ದರೆ, 2012–13ನೇ ಸಾಲಿನಲ್ಲಿ ಅದರ ಸಂಖ್ಯೆ 1.20 ಕೋಟಿಗೆ ಮುಟ್ಟಿದೆ. ಇದುವ­ರೆಗೂ ಒಟ್ಟು 6.4 ಕೋಟಿ ಪ್ರಯಾಣಿಕರು ನಿಲ್ದಾಣ­ವನ್ನು ಬಳಕೆ ಮಾಡಿದ್ದಾರೆ ಎಂದು ವಿವರಿಸಿದರು.

ಟರ್ಮಿನಲ್‌ನಲ್ಲಿ ಏನೇನಿದೆ?
*86 ಚೆಕ್‌– ಇನ್‌ ಕೌಂಟರ್‌ ವ್ಯವಸ್ಥೆ
*ತಲಾ 24 ನಿರ್ಗಮನ ಮತ್ತು ಆಗಮನ ವಲಸೆ ಕೌಂಟರ್‌
*13 ಬ್ಯಾಗೇಜ್‌ ಬೆಲ್ಟ್‌ (7 ದೇಶೀಯ ಮತ್ತು 6 ವಿದೇಶಿ ಪ್ರಯಾಣಿಕರಿಗೆ)
*32 ದೇಶೀಯ, 16 ಅಂತರರಾಷ್ಟ್ರೀಯ ಭದ್ರತಾ ಘಟಕ
*1000 ಚದರ ಮೀಟರ್‌ ವಿಸ್ತೀರ್ಣದಲ್ಲಿ ಅತಿ ಗಣ್ಯರ ವಿಶ್ರಾಂತಿಗೆ ವಿಶೇಷ ವ್ಯವಸ್ಥೆ
*ಮಕ್ಕಳ ಪೋಷಣೆ, ಪ್ರಾರ್ಥನೆ ಮತ್ತು ಧೂಮಪಾನಕ್ಕೆ ಪ್ರತ್ಯೇಕ ಕೊಠಡಿ
*ಎರಡು ಅಂತರರಾಷ್ಟ್ರೀಯ ನಿರ್ಗಮನ ಲಾಂಜ್‌ ನಿರ್ಮಾಣ
*ದೇಶೀಯ ನಿರ್ಗಮನ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶದ ಲಾಂಜ್‌
*ವೀಸಾ ಕಚೇರಿ


ಸರಕು ಸಾಗಣೆಯಲ್ಲೂ ತೀವ್ರಗತಿಯ ಏರಿಕೆ ಕಂಡುಬಂದಿದೆ. 2008–9ರಲ್ಲಿ 1,59,386 ಟನ್‌ಗ­ಳಿದ್ದ ಸರಕು ಸಾಗಣೆ 2012–13 ಸಾಲಿನಲ್ಲಿ 2,26,667 ಟನ್‌ಗೆ ತಲುಪಿದೆ. ಈ ವರ್ಷ ಅದು 2.36 ಟನ್‌ ದಾಟುವ ನಿರೀಕ್ಷೆ ಇದೆ ಎಂದು ಸಚಿವರು ಹೇಳಿದರು.

ರೂ 560 ಕೋಟಿ ಆದಾಯ: ಪ್ರಯಾಣಿಕರು ಮತ್ತು ಸರಕು ಸಾಗಣೆ ಯಿಂದ ಒಟ್ಟು ರೂ 560 ಕೋಟಿ ಆದಾಯ 2012–13ನೇ ಸಾಲಿನಲ್ಲಿ ಬಂದಿದೆ. ಇದರಲ್ಲಿ ರೂ114 ಕೋಟಿ ಲಾಭ ಸೇರಿದೆ ಎಂದು ಬಿಐಎಎಲ್‌ ಹಿರಿಯ ನಿರ್ದೇಶಕ ಬಿ.ಭಾಸ್ಕರ್‌ ಸುದ್ದಿಗಾರರಿಗೆ ತಿಳಿಸಿದರು.

ವಿಮಾನ ನಿಲ್ದಾಣದ ಮೊದಲ ಮತ್ತು ಎರಡನೇ ಹಂತದ ಯೋಜನೆಗೆ ತಲಾ ರೂ 1100 ಕೋಟಿ ವಿನಿಯೋಗಿಸಲಾಗಿದೆ. ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ಮರುಪಾವತಿ ನಂತರವೇ ಷೇರುದಾರರಿಗೆ ಲಾಭಾಂಶ ಹಂಚಿಕೆ ಮಾಡಲಾಗು­ವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವಿಮಾನ ನಿಲ್ದಾಣ ಬಳಕೆದಾರರ ಶುಲ್ಕ ದೇಶದಲ್ಲೇ ಅತಿ ಕಡಿಮೆ ಇದೆ. ಹೈದರಾಬಾದ್‌ನಲ್ಲಿ ಒಬ್ಬರಿಗೆ ರೂ 480 ಇದ್ದರೆ, ಬೆಂಗಳೂರಿನಲ್ಲಿ ಕೇವಲ ರೂ 260 ಇದೆ. ಅದೇ ರೀತಿ ದೇಶದ ಇತರ ನಿಲ್ದಾಣಗಳಿಗೆ ಹೋಲಿಸಿ­ದರೂ ತಮ್ಮದು ಅತಿ ಕಡಿಮೆ ಶುಲ್ಕ ಎಂದು ಭಾಸ್ಕರ್‌ ಸಮಜಾಯಿಷಿ ನೀಡಿದರು.

ಎರಡು ಸಂಪರ್ಕ ರಸ್ತೆ: ವಿಮಾನ ನಿಲ್ದಾಣಕ್ಕೆ ಈಗಿ­ರುವ ಒಂದು ಸಂಪರ್ಕ ರಸ್ತೆ ಜತೆಗೆ ಹೆಚ್ಚುವರಿಯಾಗಿ ಇನ್ನೂ ಎರಡು ರಸ್ತೆಗಳನ್ನು ನಿರ್ಮಿಸುವ ಉದ್ದೇಶ ಇದೆ ಎಂದು ಪಾಟೀಲ್‌ ವಿವರಿಸಿದರು.

ರಾಷ್ಟ್ರೀಯ ಹೆದ್ದಾರಿ 7ರಿಂದ ಒಂದು ಮತ್ತು ನಿಲ್ದಾಣ ಸಮೀಪದಲ್ಲೇ ಇರುವ ಕೈಗಾರಿಕಾ ಪ್ರದೇಶದ ಕಡೆಯಿಂದ ಮತ್ತೊಂದು ಸಂಪರ್ಕ ರಸ್ತೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT