ADVERTISEMENT

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಆರೋಪ ಪಟ್ಟಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2018, 4:56 IST
Last Updated 13 ಮಾರ್ಚ್ 2018, 4:56 IST

ಬೆಂಗಳೂರು: ‘ನಮೋ ಎಂದರೆ ನಮಗೆ ಮೋಸ’ ಎಂದು ಆರೋಪಿಸಿರುವ ಕೆಪಿಸಿಸಿ ಸಾಮಾಜಿಕ ಮಾಧ್ಯಮ ಘಟಕ, ಬಿಜೆಪಿ ವಿರುದ್ಧ ಆರೋಪ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.

ಕನ್ನಡ ನಾಡು, ನುಡಿ, ಜಲ ವಿಷಯದಲ್ಲಿ ಮಲತಾಯಿ ಧೋರಣೆ ತೋರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಬಿಜೆಪಿ ಮುಖಂಡರು, ಇದೀಗ ಕನ್ನಡೇತರರಿಗೆ
ರಾಜ್ಯಸಭೆ ಸದಸ್ಯ ಸ್ಥಾನ ನೀಡುವ ಮೂಲಕ ರಾಜ್ಯ ವಿರೋಧಿ ನಿಲುವು ತಾಳಿದ್ದಾರೆ ಎಂದೂ ಆರೋಪಿಸಿದೆ.

ಆರೋಪ ಪಟ್ಟಿಯಲ್ಲಿರುವ ಅಂಶಗಳು:

ADVERTISEMENT

* ಮಹಾದಾಯಿ ಮೋಸ
ಮಹಾದಾಯಿ ಜಲವಿವಾದ ಬಗೆಹರಿಸುವಂತೆ ಹಲವು ಬಾರಿ ಪ್ರಧಾನಿ ಮೋದಿ ಬಳಿ ಮನವಿ ಮಾಡಿದರೂ ಅವರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.

* ಐಬಿಪಿಎಸ್ ಮೋಸ
ಪ್ರಾದೇಶಿಕ ಗ್ರಾಮೀಣ ಬ್ಯಾಂಕಿಂಗ್ ಪರೀಕ್ಷೆಯನ್ನು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಬರೆಯಲು ಅವಕಾಶ ನೀಡಿ, ಕನ್ನಡ ಮಾಧ್ಯಮ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕನ್ನಡಿಗರು ಉದ್ಯೋಗ ವಂಚಿತರಾಗಿದ್ದಾರೆ. ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ.

* ಸಿ.ಆರ್.ಪಿ.ಎಫ್ ಕಚೇರಿ ಸ್ಥಳಾಂತರ
ನಗರದ ಹೊರವಲಯದ ತರಳು ಗ್ರಾಮದಲ್ಲಿದ್ದ ಸಿ.ಆರ್.ಪಿ.ಎಫ್ ಕಚೇರಿ ಉತ್ತರ ಪ್ರದೇಶದಲ್ಲಿರುವ ರಾಜನಾಥ್ ಸಿಂಗ್ ತವರು ಪ್ರದೇಶ ಚಾಂದೌಲಿಗೆ ಸ್ಥಳಾಂತರಿಸಲಾಗಿದೆ. ಇದು ಮೋದಿ ಸರ್ಕಾರದ ನಿಷ್ಠುರತೆಗೆ ನಿದರ್ಶನ.

* ಬರ ಪರಿಹಾರದಲ್ಲಿ ಮೋಸ
ರಾಜ್ಯಕ್ಕೆ 2017ರಲ್ಲಿ ಕೇಂದ್ರ ಸರ್ಕಾರ ಕೊಟ್ಟ ಬರ ಪರಿಹಾರ ಕೇವಲ ₹1435.95 ಕೋಟಿ. ಆದರೆ, ಮಹಾರಾಷ್ಟ್ರ ₹ 8,195 ಕೋಟಿ, ಗುಜರಾತ್ ₹3894 ಕೋಟಿ, ರಾಜಸ್ಥಾನಕ್ಕೆ ₹2,153 ಕೋಟಿ ಪರಿಹಾರ ನೀಡಲಾಗಿದೆ.

* ರೈತರಿಗೆ ಮೋಸ
ರಾಜ್ಯ ಸರ್ಕಾರ ರೈತರ ₹8,165 ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರಾಷ್ಟ್ರೀಕೃತ ಹಾಗೂ ವಾಣಿಜ್ಯ ಬ್ಯಾಂಕ್‍ಗಳಲ್ಲಿರುವ ರೈತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಸಿದ್ಧ ಇಲ್ಲ.

* ನಾಡಧ್ವಜ
ರಾಜ್ಯ ಸರ್ಕಾರ ನಾಡಧ್ವಜಕ್ಕೆ ಹೊಸ ರೂಪು ನೀಡಿ ಕನ್ನಡದ ಮೆರುಗು ಹೆಚ್ಚಿಸಿದೆ. ಪ್ರತ್ಯೇಕ ಕರ್ನಾಟಕ ಬಾವುಟಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು ಕನ್ನಡ ವಿರೋಧಿ ಧೋರಣೆ ತಾಳಿದ್ದಾರೆ.

* ಬಲವಂತವಾಗಿ ಹಿಂದಿ ಹೇರಿಕೆ
ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಹಿಂದಿ ಹೇರುತ್ತಿದೆ. ಆದರೆ, ರಾಜ್ಯ ಸರ್ಕಾರ ಕನ್ನಡ ಭಾಷೆಯ ಬೆಳವಣಿಗೆ, ಸಂರಕ್ಷಣೆಗೆ ಬದ್ಧವಾಗಿದೆ.

* ಕಾವೇರಿ
ಕಾವೇರಿ ನೀರಿನ ಸಮಸ್ಯೆ ಬಗೆಹರಿಸಲು ಪ್ರಧಾನಿ ಮೋದಿ ಒಲವು ತೋರಿಸಲಿಲ್ಲ. ಸರ್ವಪಕ್ಷ ಸಭೆ ಕರೆದರೂ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಬರಲಿಲ್ಲ.

ಕಾಂಗ್ರೆಸ್‌ ಟಿಕೆಟ್‌ಗೆ 1,570 ಅರ್ಜಿ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸುವ ಕಾರ್ಯ ಸೋಮವಾರ ಮುಕ್ತಾಯಗೊಂಡಿದ್ದು, 224 ವಿಧಾನಸಭಾ ಕ್ಷೇತ್ರಕ್ಕೆ 1,570 ಮಂದಿ ಅರ್ಜಿ ಸಲ್ಲಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇದೇ 5ರಿಂದ ಅರ್ಜಿ ವಿತರಣೆ ಆರಂಭಗೊಂಡಿದ್ದು, 2,650 ಮಂದಿ ₹ 100 ತೆತ್ತು ಅರ್ಜಿ ಪಡೆದುಕೊಂಡಿದ್ದರು. ಅರ್ಜಿ ಪಡೆದವರಲ್ಲಿ 1,080 ಮಂದಿ ಹಿಂದಿರುಗಿಸಿಲ್ಲ. ಸಚಿವರು, ಸಂಸದರು, ಶಾಸಕರು, ಎಸ್‌.ಸಿ, ಎಸ್‌.ಟಿ, ಮಹಿಳೆ ಹೀಗೆ ವಿವಿಧ ವರ್ಗಗಳಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಂ.ಆರ್. ಸೀತಾರಾಂ,  ಟಿ.ಬಿ. ಜಯಚಂದ್ರ, ಶಾಸಕ ಕೆ.ಎನ್. ರಾಜಣ್ಣ ಮತ್ತಿತರ ನಾಯಕರು ತಮಗೆ ಮತ್ತು ತಮ್ಮ ಮಕ್ಕಳಿಗೂ ಅರ್ಜಿ ತೆಗೆದುಕೊಂಡಿದ್ದು, ಎಲ್ಲರ ಅರ್ಜಿ ಸಲ್ಲಿಕೆಯಾಗಿದೆ. ಮಂಡ್ಯ ಶಾಸಕ ಅಂಬರೀಷ್ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.