ADVERTISEMENT

ಬಿಟಿಎಂ ಲೇಔಟ್: ಬಿಜೆಪಿ ಭಿನ್ನಮತ ಸ್ಫೋಟ

‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ವೇಳೆ ತಳ್ಳಾಟ–ನೂಕಾಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಬೆಂಗಳೂರು: ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ನಡೆದ ‘ಬೆಂಗಳೂರು ರಕ್ಷಿಸಿ’ ಪಾದಯಾತ್ರೆ ವೇಳೆ ಸ್ಥಳೀಯ ಬಿಜೆಪಿ ಪ್ರಮುಖರ ಮಧ್ಯದ ಭಿನ್ನಮತ ಸ್ಫೋಟಗೊಂಡಿದೆ.

ಈ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾದ ಬಿಜೆಪಿ ರಾಜ್ಯ ಕಾರ್ಯದರ್ಶಿ ಜಯಸಿಂಹ ಹಾಗೂ ವಿವೇಕ್ ರೆಡ್ಡಿ ಬೆಂಬಲಿಗರ ಮಧ್ಯೆ ತಳ್ಳಾಟ–ನೂಕಾಟ ಉಂಟಾದಾಗ ಯಾತ್ರೆಯ ನೇತೃತ್ವ ವಹಿಸಿದ್ದ ಕೇಂದ್ರ ಸಚಿವ ಅನಂತ್ ಕುಮಾರ್‌ ಕೆಲವು ಕ್ಷಣ ಮುಜುಗರ ಅನುಭವಿಸಬೇಕಾಯಿತು. ರಾಜಧಾನಿಯ ಎಲ್ಲ ಕ್ಷೇತ್ರಗಳಲ್ಲಿ ನಡೆದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಶಾಸಕ ಆರ್.ಅಶೋಕ್ ಈ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ.

ಜಯಸಿಂಹ, ವಿವೇಕ್ ರೆಡ್ಡಿ ಹಾಗೂ ಲಲ್ಲೇಶ್ ರೆಡ್ಡಿ ಹೀಗೆ ಮೂವರು ಪ್ರಮುಖರು ಪಾದಯಾತ್ರೆ ನಡೆಸಲು ಸಿದ್ಧತೆ ಮಾಡಿದ್ದರು. ಜ್ಯೋತಿ ನಿವಾಸ್ ಕಾಲೇಜಿನಿಂದ ಮಾತ್ರ ಯಾತ್ರೆ ನಡೆಸಬಹುದು. ಉಳಿದ ಕಡೆಗಳಿಂದ ಯಾತ್ರೆ ಮಾಡಕೂಡದು ಎಂದು ನಿರ್ಬಂಧ ವಿಧಿಸಿದ ಪೊಲೀಸರು ಲಲ್ಲೇಶ್‌ ರೆಡ್ಡಿ ಗುಂಪನ್ನು ನಿರ್ಬಂಧಿಸಿದರು.

ADVERTISEMENT

ಯಾತ್ರೆ ಹೊರಟ ಕೂಡಲೇ ಮುಂದಿನ ಸಾಲಿನಲ್ಲಿ ನಿಲ್ಲಲು ಜಯಸಿಂಹ ಹಾಗೂ ವಿವೇಕ್‌ ಬಣದವರು ಪೈಪೋಟಿಗೆ ಇಳಿದರು. ಮೊದಲ ಸಾಲಿನಲ್ಲಿದ್ದ ವಿವೇಕ್‌ ಅವರನ್ನು ಜಯಸಿಂಹ ಬೆಂಬಲಿಗರು ಹಿಂದಕ್ಕೆ ತಳ್ಳಿದರು. ಉಭಯ ಬಣದವರ ಮಧ್ಯೆ ತಳ್ಳಾಟ ನಡೆಯಿತು. ಬೆಂಬಲಿಗರು ಕಿತ್ತಾಟಕ್ಕೆ ಮುಂದಾಗಿದ್ದರಿಂದಾಗಿ ಸಚಿವ ಅನಂತಕುಮಾರ್ ಕಕ್ಕಾಬಿಕ್ಕಿಯಾದರು.

ಪಾದಯಾತ್ರೆ ವೇಳೆ ಮಾತನಾಡಿದ ಅನಂತಕುಮಾರ್‌ ಅವರು ವಿವೇಕ್‌, ಲಲ್ಲೇಶ್‌ ಹೆಸರು ಪ್ರಸ್ತಾಪಿಸಲಿಲ್ಲ. ಇದಾದ ಬಳಿಕ ಲಲ್ಲೇಶ್ ರೆಡ್ಡಿ ಪ್ರತ್ಯೇಕವಾಗಿ ಪಾದಯಾತ್ರೆ ನಡೆಸಿದರು.

‘ಮೊಯಿಲಿ ಟ್ವೀಟ್‌ಗೆ ಸಿ.ಎಂ ಉತ್ತರಿಸಲಿ’
ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ವಿರುದ್ಧ ಟೀಕೆ ಮಾಡುವುದನ್ನು ಬಿಟ್ಟು ಸಂಸದ ವೀರಪ್ಪ ಮೊಯಿಲಿ ಮಾಡಿರುವ ಟ್ವೀಟ್‌ಗೆ ಉತ್ತರಿಸಲಿ ಎಂದು ಸಚಿವ ಅನಂತಕುಮಾರ್‌ ಆಗ್ರಹಿಸಿದರು.

ಲೋಕೋ‍ಪಯೋಗಿ ಇಲಾಖೆಯ ಗುತ್ತಿಗೆದಾರರು ಕ್ಲಬ್‌ಗಳಲ್ಲಿ ಕುಳಿತು ಕಾಂಗ್ರೆಸ್‌ ಟಿಕೆಟ್ ಹಂಚುತ್ತಿರುವುದನ್ನು ಮೊಯಿಲಿ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ‘ಲೀಡರ್ಸ್‌’ ಇಲ್ಲ, ‘ಕಾಂಟ್ರಾಕ್ಟರ್ಸ್‌’ ಇದ್ದಾರೆ ಎಂಬುದು ಇದರಿಂದ ಸಾಬೀತಾಗಿದೆ ಎಂದು ವ್ಯಂಗ್ಯವಾಡಿದರು.

ಉದ್ಯಮಿ ಅಶೋಕ್ ಖೇಣಿ ಸೇರ್ಪಡೆಯನ್ನು ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದರು. ಪಕ್ಷದ ಬೆಳವಣಿಗೆಗಳ ಕುರಿತು ಮಾರ್ಗರೆಟ್ ಆಳ್ವ ಆಕ್ಷೇಪಿಸಿದ್ದರು. ಇವೆಲ್ಲವನ್ನೂ ಗಮನಿಸಿದರೆ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಇದೆ, ಬಿಜೆಪಿಯಲ್ಲಿ ಒಗ್ಗಟ್ಟು ಇರುವುದು ಸ್ಪಷ್ಟ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.