ADVERTISEMENT

ಬಿಡಿಎ ಆಯುಕ್ತರ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 18:55 IST
Last Updated 9 ಜನವರಿ 2012, 18:55 IST

ಬೆಂಗಳೂರು: `ಬಿಡಿಎ ಆಯುಕ್ತರಾದ ಭರತ್‌ಲಾಲ್ ಮೀನಾ ಅವರನ್ನು ಅಮಾನತುಗೊಳಿಸಿ, ಅವರ ಅವಧಿಯ ಎಲ್ಲ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು~ ಎಂದು ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆಯ ಅಧ್ಯಕ್ಷ ಬಿ.ಎಂ.ಶಿವಕುಮಾರ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಭರತ್‌ಲಾಲ್ ಮೀನಾ ಅವರು ಬಿಡಿಎ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಸಂಸ್ಥೆಯ ಎಲ್ಲ ಉದ್ದೇಶ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವ್ಯವಹಾರ ನಡೆಸಿದ್ದಾರೆ.

ಆಡಳಿತದ ಅವಧಿಯಲ್ಲಿ ಟೆಂಡರ್ ಕರೆಯದೆ, ಹಲವಾರು ಕೋಟಿ ರೂ. ಗಳ ಖರೀದಿ ನಡೆದಿದೆ. ಹಲವಾರು ಕಾಮಗಾರಿಗಳು ನಡೆದಿವೆ. ನಿಯಮಾವಳಿಗಳನ್ನು ಮೀರಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಕೆರೆ ಅಭಿವೃದ್ಧಿ ಹಾಗೂ ಗಿಡ ನೆಡುವ ನೆಪದಲ್ಲಿ ಕೋಟ್ಯಾಂತರ ರೂಪಾಯಿಗಳ ಲೂಟಿಯಾಗಿದೆ~ ಎಂದು ಆರೋಪಿಸಿದರು.

`ಸಾಮಾನ್ಯ ಸಿವಿಲ್ ಎಂಜಿನಿಯರ್ ಕೂಡ ಮಾಡಬಹುದಾದ ಕೆಲ ಯೋಜನೆಗಳ ನೀಲನಕ್ಷೆಯನ್ನು ತಯಾರಿಸಲು ಖಾಸಗಿ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಕೋಟ್ಯಂತರ ರೂ.ಗಳನ್ನು ವಿನಿಯೋಗಿಸಲಾಗಿದೆ. ಖಾಸಗಿ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಾರ್ಯಗತ ವಾಗಲು ಅಸಾಧ್ಯವಾದಂತಹ ಸಾವಿರಾರು ಕೋಟಿ ರೂಪಾಯಿಗಳ ಹಲವಾರು ಯೋಜನೆಗಳನ್ನು ರೂಪಿಸಿ ನೀಲನಕ್ಷೆಗಾಗಿ ಖಾಸಗಿ ಸಂಸ್ಥೆಗಳಿಗೆ ಕೋಟ್ಯಂತರ ರೂಪಾಯಿ ಹಣವನ್ನು ಪಾವತಿಸಿದ್ದಾರೆ. ಬಿಡಿಎ ಎಂಬ ಸಾರ್ವಜನಿಕ ಸಂಸ್ಥೆಯ ಹಣವನ್ನು ಪೋಲು ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು.

`ಬಿಬಿಎಂಪಿಯ ಸಾವಿರಾರು ಕೋಟಿ ರೂ.ಗಳ ಹಗರಣದಲ್ಲಿ ಭರತ್‌ಲಾಲ್ ಮೀನಾರವರ ಅವಧಿಯ ಅವ್ಯವಹಾರವೂ ಕೂಡ ತನಿಖೆ ಆಗುತ್ತಿರುವಾಗ, ಅವರನ್ನೇ ಬಿಡಿಎ ಆಯುಕ್ತರನ್ನಾಗಿ ಮುಂದುವರಿಸಿರುವುದು ಖಂಡನೀಯ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು~ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.