ADVERTISEMENT

ಬಿಡಿಎ ಉಪ ಕಾರ್ಯದರ್ಶಿ ಬಂಧನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2011, 18:30 IST
Last Updated 10 ಮಾರ್ಚ್ 2011, 18:30 IST

 ಬೆಂಗಳೂರು:ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉಪ ಕಾರ್ಯದರ್ಶಿ ಗಂಗೂಲಪ್ಪ ಅವರನ್ನು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.


ಸಿ.ವಿ. ರಾಮನ್ ನಗರದ ನಿವಾಸಿಗಳಾದ ಮಂಜುಳಾ ಮತ್ತು ಲಕ್ಷ್ಮಮ್ಮ ಎಂಬುವರು ಬಾಣಸವಾಡಿ ಬಡಾವಣೆಯ ನಿರ್ಮಾಣಕ್ಕಾಗಿ 1987ರಲ್ಲಿ ಸ್ವಇಚ್ಛೆಯಿಂದ 1.5 ಎಕರೆ ಭೂಮಿಯನ್ನು ಬಿಡಿಎಗೆ ನೀಡಿದ್ದರು. ಅದಕ್ಕೆ ಇವರಿಗೆ ಬಿಡಿಎಯಿಂದ ಎರಡು ನಿವೇಶನಗಳು (40/60 ಮತ್ತು 30/40) ಮಂಜೂರಾಗಿದ್ದವು. ಈ ಎರಡು ನಿವೇಶನಗಳಿಗೆ 2.63 ಲಕ್ಷ ರೂಪಾಯಿ ಪಾವತಿಸಬೇಕು ಎಂದು ಬಿಡಿಎ ಸೂಚನೆ ನೀಡಿತ್ತು.

ಆದರೆ ಮಂಜುಳಾ ಮತ್ತು ಲಕ್ಷ್ಮಮ್ಮ ಅವರು, ‘ಬಡಾವಣೆ ನಿರ್ಮಾಣಕ್ಕೆ ನಾವು ಭೂಮಿ ನೀಡಿದ್ದೇವೆ. ನಮಗೆ ಕಡಿಮೆ ದರದಲ್ಲಿ ನಿವೇಶನ ಮಂಜೂರು ಮಾಡಿ’ ಎಂದು ಬಿಡಿಎಗೆ ಮನವಿ ಮಾಡಿದ್ದರು.

ಮಂಜುಳಾ ಮತ್ತು ಲಕ್ಷ್ಮಮ್ಮ ಅವರ ಕಡೆಯವರಾದ ಬಸವರಾಜ್ ಎನ್ನುವವರು ಮಾ. 4ರಂದು ಗಂಗೂಲಪ್ಪ ಅವರನ್ನು ಭೇಟಿಯಾಗಿದ್ದಾಗ ಕಡಿಮೆ ಬೆಲೆಗೆ ನಿವೇಶನ ಮಂಜೂರು ಮಾಡಲು 20 ಸಾವಿರ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ 10 ಸಾವಿರ ರೂಪಾಯಿಗಳನ್ನು ಮುಂಗಡವಾಗಿ ಅಂದೇ ಪಡೆದುಕೊಂಡಿದ್ದರು.

ಗುರುವಾರ 10 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಗಂಗೂಲಪ್ಪ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ಲೋಕಾಯುಕ್ತ ಪೊಲೀಸರಾದ ಡಿವೈಎಸ್‌ಪಿ ಎಸ್. ಗಿರೀಶ್ ಮತ್ತು ಇನ್‌ಸ್ಪೆಕ್ಟರ್ ಕೆ. ರವಿಶಂಕರ್ ನೇತೃತ್ವದ ತಂಡ ಈ ದಾಳಿ ನಡೆಸಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT