ADVERTISEMENT

ಬಿಬಿಎಂಪಿಯಿಂದ ಎನ್.ಆರ್.ಕಾಲೋನಿ ಹೆರಿಗೆ ಆಸ್ಪತ್ರೆ ಮೇಲ್ದರ್ಜೆಗೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಬೆಂಗಳೂರು: ನಗರದ ಎನ್.ಆರ್.ಕಾಲೋನಿಯ ಹೆರಿಗೆ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದ್ದು, ಈ ಆಸ್ಪತ್ರೆಯಲ್ಲಿಯೇ ಆರಂಭಿಸಿರುವ ಉಚಿತ ಡಯಾಲಿಸಿಸ್ ಸೆಂಟರ್ ಮತ್ತು ಹೃದಯ ತಪಾಸಣಾ ಕೇಂದ್ರ ಶನಿವಾರ ಕಾರ್ಯಾರಂಭ ಮಾಡಿತು.

ಆಸ್ಪತ್ರೆಯಲ್ಲಿ ಬೆಂಗಳೂರು ಆಬ್‌ಸ್ಟೆಟ್ರಿಷನ್ಸ್ ಮತ್ತು ಗೈನಕಾಲಜಿಸ್ಟ್ ಡಾಕ್ಟರ್ಸ್‌ ಕಂೆನಿಯ ಸಹಭಾಗಿತ್ವದಲ್ಲಿ ಬಿಬಿಎಂಪಿ ಹೃದಯ ತಪಾಸಣೆ ಹಾಗೂ ಡಯಾಲಿಸಿಸ್ ಸೇವೆಗಳನ್ನು ನೀಡಲಿದೆ. ನೂತನ ಸೇವೆಗಳು ಆರಂಭವಾಗಿರುವ ಮೊದಲ ಆರು ತಿಂಗಳು ಖಾಸಗಿ ವೈದ್ಯರು ಬೆಳಿಗ್ಗೆ 9 ರಿಂದ ಸಂಜೆ 4ಗಂಟೆಯವರೆಗೆ ಕೇಂದ್ರದಲ್ಲಿ ಸೇವೆಗೆ ಲಭ್ಯವಿರಲಿದ್ದಾರೆ.
 
ನಂತರದ ಅವಧಿಯಲ್ಲಿ ಹಾಗೂ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಬಿಬಿಎಂಪಿಯ ವೈದ್ಯರು ಆಸ್ಪತ್ರೆಯಲ್ಲಿ ಸೇವೆ ಒದಗಿಸಲಿದ್ದಾರೆ. 6ತಿಂಗಳ ನಂತರ ದಿನದ 24 ಗಂಟೆಯೂ ಸೇವೆ ನೀಡಲು ಖಾಸಗಿ ವೈದ್ಯರು ಬಿಬಿಎಂಪಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಆರೋಗ್ಯ ಸೇವೆ ಒದಗಿಸುವ ಖಾಸಗಿ ವೈದ್ಯರ ಕನ್ಸಲ್ಟೆನ್ಸಿ ಮೊತ್ತವನ್ನು ಬಿಬಿಎಂಪಿಯೇ ಭರಿಸಲಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳೂ ಉಚಿತವಾಗಿ ದೊರೆಯಲಿವೆ. ಆಸ್ಪತ್ರೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನೂ ಬಿಬಿಎಂಪಿ ಒದಗಿಸಲಿದೆ. ತಪಾಸಣಾ ಕೇಂದ್ರಗಳ ಉದ್ಘಾಟನೆ ಹಾಗೂ ಆಸ್ಪತ್ರೆಯ ಹೊಸ ಕಟ್ಟಡದ ಶಿಲಾನ್ಯಾಸವನ್ನು ಶನಿವಾರ ಲೋಕಸಭಾ ಸದಸ್ಯ ಅನಂತ್ ಕುಮಾರ್ ನೆರವೇರಿಸಿದರು.

`ಬೆಂಗಳೂರು ನಗರ ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಮೂರನೇ ಮಹಾನಗರವಾಗಿದೆ. ಆದರೂ ತೆರಿಗೆಯ ಹತ್ತು ಪಟ್ಟು ಅನುದಾನವೂ ನಗರಕ್ಕೆ ಕೇಂದ್ರ ಸರ್ಕಾರದಿಂದ ನಗರಕ್ಕೆ ಸಿಗುತ್ತಿಲ್ಲ. ದೇಶದ ಯಾವುದೇ ಮಹಾನಗರಗಳಿಗೆ ಕಡಿಮೆ ಇಲ್ಲದಂತೆ ಬೆಳೆದಿರುವ ಬೆಂಗಳೂರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದೆ~ ಎಂದು ಅವರು ಆಪಾದಿಸಿದರು.

`ಮಹಾನಗರಕ್ಕೆ ರೂ 5 ಸಾವಿರ ಕೋಟಿ ವಿಶೇಷ ಪ್ಯಾಕೇಜ್‌ಗೆ  ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ವಿಧಾನಸಭಾ ಅಧಿವೇಶನದ ನಂತರ ಮುಖ್ಯಮಂತ್ರಿಹಾಗೂ ಬೆಂಗಳೂರಿನ ಶಾಸಕರನ್ನೊಳಗೊಂಡ ನಿಯೋಗದೊಂದಿಗೆ ಪ್ರಧಾನಿ ಭೇಟಿ ಮಾಡಿ ವಿಶೇಷ ಪ್ಯಾಕೇಜ್‌ಗೆ ಒತ್ತಾಯಿಸಲಾಗುವುದು~ ಎಂದರು.

`ಮೂಲಸೌಕರ್ಯ ಅಭಿವೃದ್ಧಿಗಾಗಿ ಬಿಬಿಎಂಪಿಗೆ ಪ್ರತ್ಯೇಕವಾದ ಕಾನೂನಿನ ಅಗತ್ಯವಿದೆ. ಹಳೆಯದಾದ 1976 ರ ಕರ್ನಾಟಕ ಮುನ್ಸಿಪಲ್ ಕಾಯಿದೆಗೆ ಮಾಡಿದ ತಿದ್ದುಪಡಿ ಬಿಟ್ಟರೆ ಮಹಾನಗರಕ್ಕೆ ಬೇಕಾದ ಕಾಯಿದೆ ಇನ್ನೂ ರೂಪುಗೊಂಡಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಗಮನ ನೀಡಬೇಕು~ ಎಂದು ಅವರು ನುಡಿದರು.

ಗೃಹ ಸಚಿವ ಆರ್.ಅಶೋಕ್ ಮಾತನಾಡಿ, `ಸರ್ಕಾರ   ಕೆ.ಆರ್.ಮಾರುಕಟ್ಟೆಯನ್ನು ಅಡವಿಡುತ್ತಿದೆ ಎಂಬ ಕೂಗು ಹೆಚ್ಚಾಗಿದೆ.  ಸರ್ಕಾರಕ್ಕೆ ಹೆಚ್ಚಿನ ಹಣದ ಅಗತ್ಯ ಬಿದ್ದಾಗ ಕಟ್ಟಡಗಳನ್ನು ಬ್ಯಾಂಕ್‌ಗಳಿಗೆ ಗ್ಯಾರಂಟಿ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ~ ಎಂದರು.

ಬಸವನಗುಡಿ ಶಾಸಕ   ಎಲ್.ಎ.ರವಿಸುಬ್ರಹ್ಮಣ್ಯ, ಮೇಯರ್ ಪಿ.ಶಾರದಮ್ಮ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ನಂಜುಡಪ್ಪ, ಸದಸ್ಯ ಕಟ್ಟೆ ಸತ್ಯನಾರಾಯಣ ಉಪಸ್ಥಿತರಿದ್ದರು.

ಉಚಿತ ಸೇವೆಗಳು
ಹೃದಯ ತಪಾಸಣೆ ಹಾಗೂ ಎಲ್ಲಾ ಕಾಯಿಲೆಗಳ ಪತ್ತೆ, ಸಹಜ ಪ್ರಸವ, ಕಷ್ಟದ ಹೆರಿಗೆ, ಸಿಜೇರಿಯನ್ ಸೇರಿದಂತೆ ಇನ್ನಿತರ ಸ್ತ್ರೀ ರೋಗಗಳಿಗೆ ಶಸ್ತ್ರ ಚಿಕಿತ್ಸೆಗಳು. ಕಾಲೋಸ್ಕೋಪಿ, ಎಂಡೋಸ್ಕೋಪಿ, ಮಕ್ಕಳ ಹಾಗೂ ಮಹಿಳೆಯರ ಕ್ಲಿನಿಕ್ ಮತ್ತು ಸೋನಾಲಜಿಸ್ಟ್ ಸೇವೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.