ADVERTISEMENT

ಬಿಬಿಎಂಪಿ ಶ್ವೇತಪತ್ರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ಬೆಂಗಳೂರು:`ಬಿಬಿಎಂಪಿಯು 2012-13ರ ಹಣಕಾಸು ವರ್ಷದ ಶ್ವೇತಪತ್ರ ಹೊರಡಿಸಬೇಕು~ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಎಂ.ಕೆ.ಗುಣಶೇಖರ್ ಆಗ್ರಹಿಸಿದ್ದಾರೆ. `ನಗರದ ಅಭಿವೃದ್ಧಿಗಾಗಿ ಸರ್ಕಾರ ಹದಿಮೂರನೇ ಹಣಕಾಸಿನ ಆಯೋಗದ ಶಿಫಾರಸಿನಂತೆ ಪಾಲಿಕೆಗೆ 123 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಈವರೆಗೂ ಅನುದಾನ ಬಂದಿಲ್ಲ.
 
ಪಾಲಿಕೆ ಮೂರು ಸಾವಿರ ಕೋಟಿ ರೂಪಾಯಿ ಸಾಲ ತೀರಿಸಬೇಕಾಗಿದೆ. ಎರಡು ತಿಂಗಳಿಂದ ಬಡ್ಡಿ ಕೂಡ ಕಟ್ಟಿಲ್ಲ. ಈ ಕಾರಣದಿಂದ ಹಣಕಾಸಿನ ಕೊರತೆ ಉಂಟಾಗಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ. ಆದ್ದರಿಂದ ವಸ್ತುಸ್ಥಿತಿಯನ್ನು ನಾಗರಿಕರಿಗೆ ತಿಳಿಸಲು ಪಾಲಿಕೆ ಶ್ವೇತಪತ್ರ ಹೊರಡಿಸಬೇಕು~ ಎಂದು ಅವರು ಆಗ್ರಹಿಸಿದರು.

`ಬಿಬಿಎಂಪಿ 2012-13ನೇ ಸಾಲಿನ ಆಯವ್ಯಯದಲ್ಲಿ ಅಂದಾಜಿಸಿರುವ ವರಮಾನದಂತೆ ಅಕ್ಟೋಬರ್ 8ರವೆರೆಗೆ ಶೇ 16.6ರಷ್ಟು ಮಾತ್ರ ಪ್ರಗತಿಯಾಗಿದೆ. ಹಣಕಾಸಿನ ವರ್ಷ ಮುಕ್ತಾಯವಾಗಿ ಆರು ತಿಂಗಳು ಕಳೆದರೂ ಪಾಲಿಕೆಯ ಕೆಲ ಯೋಜನೆಗಳು ಇನ್ನೂ ಕಾರ್ಯಗತಗೊಂಡಿಲ್ಲ. ಇದಕ್ಕೆ ಕಾರಣಗಳೇನು ಎಂಬುದನ್ನು ಮಂಡಿಸುವಂತೆ ಮುಂದಿನ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಆಯುಕ್ತರಿಗೆ ಒತ್ತಾಯ ಮಾಡುತ್ತೇನೆ~ ಎಂದರು.

`ಸರ್ಕಾರದ ಅನುದಾನದಿಂದ ಕೈಗೊಳ್ಳುವ ಕಾಮಗಾರಿಯಲ್ಲಿ, ಪಾಲಿಕೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ, ಬಹು ಅಂತಸ್ತಿನ ವಾಹನ ನಿಲ್ದಾಣಕ್ಕೆ ರೂ 200 ಕೋಟಿ, ತ್ಯಾಜ್ಯ ನಿರ್ವಹಣೆಗೆ ರೂ 200 ಕೋಟಿ, ಆಯ್ದ ಕೆಲ ರಸ್ತೆಗಳ ಅಭಿವೃದ್ಧಿಗೆ ರೂ 140 ಕೋಟಿ,  ಟೆಂಡರ್ ಶ್ಯೂರ್‌ನಡಿ ಆಯ್ದ ಕೆಲ ರಸ್ತೆಗಳ ಅಭಿವೃದ್ಧಿಗೆ ರೂ 200ಕೋಟಿ, ಹೊಸ ವಲಯಗಳಲ್ಲಿನ ರಸ್ತೆಗಳ ಅಭಿವೃದ್ಧಿಗೆ 34 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿತ್ತು.

ಆದರೆ, ಹಣಕಾಸಿನ ವರ್ಷ ಮುಕ್ತಾಯ ಹಂತ ತಲುಪಿದ್ದರೂ ಹಾಕಿಕೊಂಡಿದ್ದ ಯೋಜನೆಗಳು ಮಾತ್ರ ಕಾರ್ಯಗತಗೊಂಡಿಲ್ಲ~ ಎಂದು ಗುಣಶೇಖರ್ ಆರೋಪಿಸಿದರು.`ಯೋಜನೆಗಳು ಅನುಷ್ಠಾನಕ್ಕೆ ತರಲು ಪಾಲಿಕೆ ವಿಫಲವಾಗಿರುವುದಕ್ಕೆ ಹಣಕಾಸು ಪರಿಸ್ಥಿತಿ ಕ್ಷೀಣಿಸಿರುವುದೇ ಕಾರಣ.

ಹಣಕಾಸು ಆಯೋಗದ ಶಿಫಾರಸಿನಂತೆ ಸರ್ಕಾರ ಸಕಾಲಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ರಸ್ತೆ ನಿರ್ಮಾಣದಂತಹ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನಗರದ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ~ ಎಂದು ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.