ADVERTISEMENT

ಬಿಬಿಎಂಪಿ ಸಿಬ್ಬಂದಿಗೆ ಕಸ ನಿರ್ವಹಣೆ `ಪಾಠ'

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2012, 21:41 IST
Last Updated 26 ನವೆಂಬರ್ 2012, 21:41 IST

ಬೆಂಗಳೂರು: ಹೈಕೋರ್ಟ್ ಆದೇಶದಿಂದ ಕೊನೆಗೂ ಎಚ್ಚರಗೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಸದ ದೂಳಿನಿಂದ ಮೇಲೆದ್ದು ಬರಲು ನಿರ್ಧರಿಸಿದೆ. ದೇಶದ ವಿವಿಧ ಕಡೆಗಳಲ್ಲಿ ಯಶಸ್ವಿ ಮಾದರಿಗಳನ್ನು ರೂಪಿಸಿದ ತಜ್ಞರಿಂದ ತನ್ನ ಸಿಬ್ಬಂದಿಗೆ ತರಬೇತಿ ಕೊಡಿಸುವ ಪ್ರಕ್ರಿಯೆಯನ್ನು ಸೋಮವಾರ ಆರಂಭಿಸಿದೆ.

ಕಸ ಸಂಗ್ರಹಣೆ ಮತ್ತು ಅದರ ಪುನರ್‌ಬಳಕೆಗೆ ಸಂಬಂಧಿಸಿದಂತೆ ವ್ಲ್ಲೆಲೂರು ಮತ್ತು ಪುಣೆಯಿಂದ ಬಂದಿದ್ದ ತಜ್ಞರ ತಂಡ ಬಿಬಿಎಂಪಿ ಸಿಬ್ಬಂದಿಗೆ ಪೂರ್ಣ ಮಾಹಿತಿ ಒದಗಿಸಿತು. ವೆಲ್ಲೋರ್‌ನಲ್ಲಿ ಸದ್ಯ ಬಳಕೆಯಲ್ಲಿ ಇರುವ ಪದ್ಧತಿಯನ್ನು ನಗರದ ಕೆಲವು ವಾರ್ಡ್‌ಗಳಲ್ಲಿ ಅನುಷ್ಠಾನಕ್ಕೆ ತರಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾರ್ಯಾಗಾರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿದ್ದ ಇಂಡಿಯನ್ ಗ್ರೀನ್ ಸರ್ವೀಸ್ ಸಂಸ್ಥೆಯ ಯೋಜನಾ ನಿರ್ದೇಶಕ ಸಿ.ಶ್ರೀನಿವಾಸನ್, `148 ವಿಧದ ಒಣ ಕಸವನ್ನು ಪುನರ್‌ಬಳಕೆ ಮಾಡಬಹುದು' ಎಂದರು. `9 ವಿಧದ ಕಾರ್ಡ್‌ಬೋರ್ಡ್, 13 ತರಹದ ಹಾಳೆ, 48 ಬಗೆಯ ಪ್ಲಾಸ್ಟಿಕ್, ಅಲ್ಯುಮಿನಿಯಂ ಮೊದಲಾದ ತ್ಯಾಜ್ಯವನ್ನು ಮತ್ತೆ ಬಳಕೆ ಮಾಡಿಕೊಳ್ಳಲು ಸಾಧ್ಯ. ಇವುಗಳ ಮಾರಾಟ ಬೆಲೆ ಪ್ರತಿ ಕೆಜಿಗೆ ರೂ 3.50ರಿಂದ 100ರವರೆಗೆ ಇದೆ. ಥರ್ಮೊಕೋಲ್, ಟೇಬಲ್ ಕವರ್‌ನಂತಹ ಕೇವಲ 15ರಷ್ಟು ಸಾಮಗ್ರಿಗಳು ಮಾತ್ರ ಪುನರ್‌ಬಳಕೆಗೆ ಬರುವುದಿಲ್ಲ' ಎಂದು  ವಿವರಿಸಿದರು.

`ವೆಲ್ಲೂರಿನಲ್ಲಿ ವಾರ್ಡ್ ಇಲ್ಲವೆ ಬೀದಿಯಲ್ಲಿ ಉತ್ಪಾದನೆಯಾಗುವ ಕಸ ಅಲ್ಲಿಯೇ ವಿಲೇವಾರಿ ಆಗುತ್ತದೆ. ಹೀಗಾಗಿ ಕಸ ಅಲ್ಲಿ ಸಮಸ್ಯೆಯೇ ಅಲ್ಲ' ಎಂದು ಹೇಳಿದರು. `ಇಂತಹ ಮಾದರಿಯನ್ನು ಡಿ.ಜೆ. ಹಳ್ಳಿ ಮತ್ತು ಡಾ.ರಾಜಕುಮಾರ್ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುತ್ತದೆ' ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ತಿಳಿಸಿದರು.
ಪರಿಸರ ಕಾರ್ಯಕರ್ತೆ ಅಲ್‌ಮಿತ್ರಾ ಪಟೇಲ್ ಮಾತನಾಡಿ, `ಅಂಗಡಿಯಿಂದ ಅಕ್ಕಿ, ಬೇಳೆ, ಸಕ್ಕರೆ, ಖಾರ, ಎಣ್ಣೆ, ಉಪ್ಪು, ಹಿಟ್ಟು ಎಲ್ಲವನ್ನೂ ಒಂದೇ ಚೀಲದಲ್ಲಿ ತಂದರೆ ಹೇಗೆ ಪ್ರಯೋಜನಕ್ಕೆ ಬರುವುದಿಲ್ಲವೋ, ಹಾಗೆಯೇ ಎಲ್ಲ ಕಸವನ್ನು ಒಟ್ಟಾಗಿ ಸಂಗ್ರಹಿಸಿದರೆ ಉಪಯೋಗ ಇಲ್ಲ' ಎಂದು ಹೇಳಿದರು.

`ಒಣ ತ್ಯಾಜ್ಯ ಮತ್ತು ಹಸಿ ಕಸ ಬೇರೆ, ಬೇರೆ ಮಾಡಿದರೆ ಅದನ್ನು ವಿಲೇವಾರಿ ಮಾಡುವುದು ಸುಲಭ. ಮತ್ತು ಪುನರ್‌ಬಳಕೆ ಮಾಡಲೂ ಬರುತ್ತದೆ. ತಮಿಳುನಾಡಿನಲ್ಲಿ ತ್ಯಾಜ್ಯದಲ್ಲಿ ದೊರೆತ ಪ್ಲಾಸ್ಟಿಕ್‌ನಿಂದ 1,500 ಕಿ.ಮೀ. ರಸ್ತೆ ನಿರ್ಮಾಣ ಮಾಡಲಾಗಿದೆ' ಎಂದು ವಿವರಿಸಿದರು. ಪುಣೆಯಲ್ಲಿ ನಡೆದ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಒದಗಿಸಿದ ಎಐಐಎಲ್‌ಎಸ್‌ಜಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆಶಿಶ್ ದೇವಸ್ಥಳಿ, `ಕಸದ ವಿಲೇವಾರಿಗೆ ಪುಣೆಯಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಬಳಕೆ ಮಾಡಲಾಗುತ್ತಿದ್ದು, ನಿವಾಸಿಗಳ ಸಂಖ್ಯೆಗೆ ಅನುಗುಣವಾಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ' ಎಂದು ತಿಳಿಸಿದರು.

ಮೊದಲ ಬ್ಯಾಚ್‌ನಲ್ಲಿ ಬಿಬಿಎಂಪಿಯ 80 ಎಂಜಿನಿಯರ್‌ಗಳು ತರಬೇತಿ ಪಡೆದುಕೊಂಡರು. ಇನ್ನೂ ನಾಲ್ಕು ದಿನಗಳ ಕಾಲ ಈ ತರಬೇತಿ ಮುಂದುವರಿಯಲಿದೆ. ಹೆಚ್ಚುವರಿ ಆಯುಕ್ತೆ ಸಲ್ಮಾ ಫಾಹಿಮಾ, ಮುಖ್ಯ ಆರೋಗ್ಯಾಧಿಕಾರಿ ಡಾ.ದೇವಕಿ, ರಾಜ್ಯ ನಗರಾಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರಾಣಲಿಂಗ ಶಿವಸಾಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.