ADVERTISEMENT

ಬಿಬಿಎಂಪಿ: ಸುಧಾರಣಾ ಶುಲ್ಕ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 19:20 IST
Last Updated 7 ಫೆಬ್ರುವರಿ 2011, 19:20 IST

ಬೆಂಗಳೂರು: ಭೂ ಪರಿವರ್ತನೆಯಾದ ನಿವೇಶನ/ ಕಟ್ಟಡಗಳ ಮಾಲೀಕರಿಂದ ಸುಧಾರಣಾ ಶುಲ್ಕ ಸಂಗ್ರಹ ಪ್ರಸ್ತಾವಕ್ಕೆ ಸರ್ಕಾರದ ಅನುಮೋದನೆ ನಿರೀಕ್ಷಿಸಿ ಶುಲ್ಕ ಸಂಗ್ರಹಿಸಲು ಪಾಲಿಕೆ ಆಡಳಿತ ಮುಂದಾಗಿದೆ. ಆಸ್ತಿದಾರರು ಸುಧಾರಣಾ ಶುಲ್ಕ ಪಾವತಿಸಿ ಖಾತೆ ಪಡೆಯಬಹುದಾಗಿದೆ. ಈ ಸಂಬಂಧ ಆಯುಕ್ತ ಸಿದ್ದಯ್ಯ ಸೋಮವಾರ ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್ ಆದೇಶದನ್ವಯ ಕರ್ನಾಟಕ ಪೌರ ನಿಗಮಗಳ ಕಾಯ್ದೆಯ 466 (ಬಿ) ನಿಯಮದಂತೆ ಪಾಲಿಕೆ ರೂಪಿಸಿದ ನಿಯಮಗಳಿಗೆ ಸರ್ಕಾರ ಅನುಮೋದನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ನಿಯಮಾನುಸಾರ ಪಾಲಿಕೆ ವ್ಯಾಪ್ತಿಯಲ್ಲಿನ ರೆವಿನ್ಯೂ ಪ್ರದೇಶಗಳಲ್ಲಿ ಅಗತ್ಯ ನಾಗರಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಸುಧಾರಣಾ ಶುಲ್ಕ ಸಂಗ್ರಹಿಸಲು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ನಿರ್ಧರಿಸಿತು.

ಈ ಸಂಬಂಧ ಸಮಿತಿ ಮಂಡಿಸಿದ ಪ್ರಸ್ತಾವಕ್ಕೆ ಕೌನ್ಸಿಲ್ ಸಮಿತಿ ಇತ್ತೀಚೆಗೆ ಅನುಮೋದನೆ ನೀಡಿತ್ತು. ಅದರಂತೆ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸಿರುವುದಕ್ಕೆ ಹಾಗೂ ಕಲ್ಪಿಸುವುದಕ್ಕೆ ಮಾಡಲಾಗುವ ವೆಚ್ಚದ ಆಧಾರದ ಮೇಲೆ 1976ರ ಕೆಎಂಸಿ ಕಾಯ್ದೆ 466ರ ನಿಯಮದಡಿ ಸುಧಾರಣಾ ಶುಲ್ಕ ಸಂಗ್ರಹಿಸುವಂತೆ ಆಯುಕ್ತರು ಆದೇಶ      ಹೊರಡಿಸಿದ್ದಾರೆ.

ಒಟ್ಟು 1,200 ಚದರ ಅಡಿವರೆಗಿನ ನಿವೇಶನಕ್ಕೆ ಪ್ರತಿ ಚ.ಮೀ.ಗೆ 150 ರೂಪಾಯಿ, 2,400 ಚ.ಅಡಿವರೆಗಿನ ನಿವೇಶನಕ್ಕೆ ಪ್ರತಿ ಚ.ಮೀ.ಗೆ ರೂ 200, ಹಾಗೆಯೇ 6,000 ಚ.ಅಡಿವರೆಗಿನ ನಿವೇಶನಗಳಿಗೆ ಪ್ರತಿ ಚ.ಮೀ.ಗೆ ರೂ 300 ಹಾಗೂ 6,000 ಚ.ಅಡಿಗಿಂತ ಮೇಲ್ಪಟ್ಟ ನಿವೇಶನಗಳಿಗೆ ಪ್ರತಿ ಚ.ಮೀ.ಗೆ 400 ರೂಪಾಯಿ ಸುಧಾರಣಾ ಶುಲ್ಕ ವಿಧಿಸಲಾಗಿದೆ.

ಪಾಲಿಕೆ ನಿಗದಿಪಡಿಸುವ ಸುಧಾರಣಾ ಶುಲ್ಕವನ್ನು ಪಾವತಿಸುವುದಾಗಿ ಮುಚ್ಚಳಿಕೆ ನೀಡಿ ಖಾತಾ ಪಡೆದಿರುವ ಆಸ್ತಿದಾರರು ಇದೀಗ ಸುಧಾರಣಾ ಶುಲ್ಕ ಪಾವತಿಸಬೇಕಾಗುತ್ತದೆ. ಹಾಗೆಯೇ ಭಾಗಶಃ ಸುಧಾರಣಾ ಶುಲ್ಕ ಪಾವತಿಸಿ ದರ ನಿಗದಿಯಾದ ನಂತರ ವ್ಯತ್ಯಾಸದ ಹಣವನ್ನು ಪಾವತಿಸುವುದಾಗಿ ಮುಚ್ಚಳಿಕೆ ನೀಡಿದವರು ಶುಲ್ಕ ತೆರಬೇಕಾಗುತ್ತದೆ.
‘2007ರಲ್ಲಿ 7 ಸಿಎಂಸಿ, 1 ಟಿಎಂಸಿ ಹಾಗೂ 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದು, ಇದರಲ್ಲಿ ಬಹುಪಾಲು ರೆವಿನ್ಯೂ ಆಸ್ತಿಗಳಿವೆ.

 ಈ ಭಾಗದಲ್ಲಿ ನಾಗರಿಕ ಸೌಲಭ್ಯ ಕಲ್ಪಿಸಲು ಪಾಲಿಕೆ ಸಾಕಷ್ಟು ಹಣ ವೆಚ್ಚ ಮಾಡಿದೆ. ಅಲ್ಲದೇ ಇನ್ನಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಕೆಎಂಸಿ ನಿಯಮದನ್ವಯ ಸುಧಾರಣಾ ಶುಲ್ಕ ಸಂಗ್ರಹಿಸಲು ನಿರ್ಧರಿಸಲಾಗಿದೆ’ ಎಂದು ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎನ್.ಸದಾಶಿವ ‘ಪ್ರಜಾವಾಣಿ’ಗೆ ತಿಳಿಸಿದರು.

190 ಕೋಟಿ ಸಂಗ್ರಹ ನಿರೀಕ್ಷೆ: ‘ಪಾಲಿಕೆ ನಿಗದಿಪಡಿಸಿದ ಸುಧಾರಣಾ ಶುಲ್ಕ ಮೊತ್ತ ಭರಿಸುವುದಾಗಿ ಮುಚ್ಚಳಿಕೆ ನೀಡಿ ಖಾತೆ ಪಡೆದವರು ದೊಡ್ಡ ಸಂಖ್ಯೆಯಲ್ಲಿದ್ದು, ಸುಮಾರು 190 ಕೋಟಿ  ರೂಪಾಯಿ ಸಂಗ್ರಹವಾಗಬೇಕಿದೆ. ಮಾರ್ಚ್‌ನೊಳಗೆ ಈ ಮೊತ್ತ ಸಂಗ್ರಹವಾಗುವ ನಿರೀಕ್ಷೆಯಿದೆ. ಉಳಿದ ಆಸ್ತಿದಾರರಿಂದ ಸುಮಾರು 150 ಕೋಟಿ ರೂಪಾಯಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ’ ಎಂದರು.

ರೆವಿನ್ಯೂ ನಿವೇಶನಕ್ಕೂ ವಿಸ್ತರಣೆ ಚಿಂತನೆ: ‘ಭೂ ಪರಿವರ್ತನೆಯಾಗದ ರೆವಿನ್ಯೂ ಕಟ್ಟಡ, ನಿವೇಶನ ಮಾಲೀಕರಿಂದಲೂ ಭೂಪರಿವರ್ತನಾ ಶುಲ್ಕ ಹಾಗೂ ಸುಧಾರಣಾ ಶುಲ್ಕ ಸಂಗ್ರಹಿಸುವ ಮೂಲಕ ಖಾತೆ ನೀಡುವ ಸಂಬಂಧ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಲಿದೆ ಎಂಬ ವಿಶ್ವಾಸವಿದೆ. ಈ ಪ್ರಸ್ತಾವಕ್ಕೆ ಅನುಮೋದನೆ ದೊರೆತರೆ ದೊಡ್ಡ ಸಂಖ್ಯೆಯಲ್ಲಿರುವ ರೆವಿನ್ಯೂ ನಿವೇಶನದಾರರಿಗೆ ಅನುಕೂಲವಾಗಲಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.