ಬೆಂಗಳೂರು: ಮಳೆಗಾಲ ಸಮೀಪಿಸುತ್ತಿದ್ದರೂ ನಗರದ ನೀರಿನ ಅಭಾವವನ್ನು ತಗ್ಗಿಸಲು ಜಲಮಂಡಲಿ ಸೋತಿದೆ ಎಂದು ನಗರದ ಜನತೆ ದೂರಿದ್ದಾರೆ.
ಬೆಂಗಳೂರು ಜಲಮಂಡಲಿಯ ಪಶ್ಚಿಮ ವಲಯದ ವ್ಯಾಪ್ತಿಯ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಬಿಎಂಪಿಯ 121 ನೇ ವಾರ್ಡ್‌ನಲ್ಲಿ ಈಗ ನೀರಿನ ಸಮಸ್ಯೆ ಹೆಚ್ಚಾಗಿದೆ. ಮಾಗಡಿ ರಸ್ತೆಯ ನಾಗಮ್ಮನಗರ, ಗೋಪಾಲಪುರ, ಚನ್ನಪ್ಪ ಗಾರ್ಡನ್, ಬಿನ್ನಿಪೇಟೆ ಹಾಗೂ ಕೆ.ಪಿ.ಅಗ್ರಹಾರ ಭಾಗಗಳ ನೀರಿನ ಪೂರೈಕೆ ಅಸಮರ್ಪಕವಾಗಿದೆ ಎಂಬದು ಈ ಭಾಗದ ಜನರ ಅಳಲು.
`ಬೇಸಿಗೆಯಲ್ಲಿ ನೀರಿನ ಸಮಸ್ಯೆ ಇದೆ ಅಂದ್ರೆ ಒಪ್ಪಬಹುದು. ಮಳೆಗಾಲ ಹತ್ರ ಬರ‌್ತಿದ್ರೂ ಇನ್ನೂ ನೀರಿನ ಸಮಸ್ಯೆ ಕಳೀತಿಲ್ಲ. ಕಳೆದ ನಾಲ್ಕೈದು ತಿಂಗಳಿಂದಲೂ ನಮ್ಮ ಬಡಾವಣೆಗೆ ನೀರು ಸರಿಯಾಗಿ ಬರ‌್ತಿಲ್ಲ. ನೀರು ಬಿಡೋ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಹೆಚ್ಚಾಗ್ತಿದೆ. ಹಳೆಯ ಪೈಪ್‌ಲೈನ್‌ಗಳನ್ನ ಬದಲಾಯಿಸೋದಕ್ಕೂ ಅಧಿಕಾರಿಗಳು ಮುಂದಾಗ್ತಿಲ್ಲ.
ಬಡಾವಣೆಯಲ್ಲಿ ವಾಲ್ವ್‌ಗಳು ಕೆಟ್ಟು ನಿಂತಿದ್ದರೂ ಕನಿಷ್ಠ ಅವುಗಳ ರಿಪೇರಿಗೂ ಜಲಮಂಡಲಿ ಮುಂದಾಗ್ತಿಲ್ಲ. ಪರಿಸ್ಥಿತಿ ಹೀಗಿರೋವಾಗ ನೀರು ಪೂರೈಸೋಕೆ ಅಂತ ಜಲಮಂಡಲಿ ಯಾಕೆ ಬೇಕು~ ಎಂಬುದು ಬಿನ್ನಿಪೇಟೆಯ ನಿವಾಸಿ ಉಮೇಶ್ ಅವರ ಪ್ರಶ್ನೆ.
`ಬಡಾವಣೆಯಲ್ಲಿ ನೀರಿನ ಸಮಸ್ಯೆ ಹಿಂದಿನಿಂದಲೂ ಇದ್ದಿದ್ದೇ. 15-20 ದಿನಗಳಿಗೆ ಒಂದು ಸಾರಿ ಬರ‌್ತಿದ್ದ ನೀರು ಈಗ ತಿಂಗಳಾದರೂ ಬರ‌್ತಿಲ್ಲ. ಬೇಸಿಗೆಯಲ್ಲಿ ನೀರಿನ ಅಭಾವ ಇರೋದು ನಮಗೂ ಗೊತ್ತಿದೆ. ಆದರೆ ವರ್ಷವಿಡೀ ನಮ್ಮ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇದ್ದೇ ಇರುತ್ತೆ. ಜಲಮಂಡಲಿಗೆ ದೂರು ನೀಡಿ ನೀಡೀ ನಮಗೇ ಬೇಸರವಾಗಿದೆ~ ಎಂದವರು ಗೋಪಾಲಪುರದ ನಿವಾಸಿ ಮಹೇಂದರ್ ಜೋಸೆಫ್.
`ಸಮಸ್ಯೆ ಬಗ್ಗೆ ದೂರು ಕೊಟ್ಟಾಗ ಒಂದೆರೆಡು ದಿನ ಸರಿಯಾಗಿ ನೀರು ಬಿಡ್ತಾರೆ. ಆನಂತರ ಮತ್ತೆ ನೀರಿನ ಗೋಳು ತಪ್ಪಿದ್ದಲ್ಲ. ಅಕ್ಕಪಕ್ಕದ ಬಡಾವಣೆಗಳಿಗೆ ಬರೋ ನೀರು ನಮ್ಮ ಬಡಾವಣೆಗೆ ಮಾತ್ರ ಬರೋಲ್ಲ. ದುಡ್ಡು ಕೊಟ್ಟು ಕ್ಯಾನ್ ನೀರು ಕುಡಿಯೋದು ಅನಿವಾರ್ಯ ಆಗಿದೆ. ಇನ್ನು ನೀರು ಬರದ ನಲ್ಲಿಗಳಿಗೂ ಮೀಟರ್ ಬಿಲ್ ಮಾತ್ರ ತಪ್ಪೋಲ್ಲ. ಬೋರ್‌ಗಳು ಇದ್ದರೂ ಅವುಗಳಿಂದಲೂ ಸರಿಯಾಗಿ ನೀರು ಸಿಗೋಲ್ಲ. ಖಾಲಿ ಬಿಂದಿಗೆಗಳನ್ನ ಹಿಡಿದುಕೊಂಡು ದಿನವೂ ನೀರಿಗಾಗಿ ಅಲೆಯೋದು ತಪ್ಪಿದ್ದಲ್ಲ~ ಎಂದು ನೀರಿನ ಬವಣೆ ಹೇಳಿಕೊಂಡವರು ಚನ್ನಪ್ಪ ಗಾರ್ಡನ್ ನಿವಾಸಿ ಧನಲಕ್ಷ್ಮಿ.
`ಮಾಗಡಿ ರಸ್ತೆಯ ಜಲಮಂಡಲಿಯ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಕೆಲಸ ಪೂರ್ತಿಯಾಗಿದ್ದರೂ ಟ್ಯಾಂಕ್‌ಗೆ ನೀರು ಭರ್ತಿ ಮಾಡ್ತಿಲ್ಲ. ನೀರು ಸಂಗ್ರಹವಾಗದೇ ಬಡಾವಣೆಗಳಿಗೆ ಸರಿಯಾಗಿ ನೀರು ಬರ‌್ತಿಲ್ಲ. ಹೆಸರಿಗಾಗಿ ಮಾತ್ರ ಜಲಮಂಡಲಿ ಅಧಿಕಾರಿಗಳು ಇದ್ದಾರೆ. ನೀರು ಬಿಡದ ಮೇಲೆ ಜಲಮಂಡಲಿ ಇದ್ದೇನು ಪ್ರಯೋಜನ. ಹೀಗಾಗಿ ಜಲಮಂಡಲಿಯನ್ನ ವಿಸರ್ಜಿಸುವುದೇ ಮೇಲು~ ಎಂದು ಕಿಡಿಕಾರಿದವರು ಮಾಗಡಿ ರಸ್ತೆ, 7ನೇ `ಡಿ~ ಸ್ಟ್ರೀಟ್ ನಿವಾಸಿ ಮನೋಹರ್‌ರಾವ್.
ಸ್ಥಳೀಯ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರು ಜಲಮಂಡಲಿ ಅಧಿಕಾರಿಗಳ ಮೇಲೆ ಒತ್ತಡ ತಂದು ಬಡಾವಣೆ ನೀರಿನ ಸಮಸ್ಯೆ ಪರಿಹರಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು ಎಂಬುದು ಸ್ಥಳೀಯರ ಒತ್ತಾಯ.
`ಅಧಿಕಾರಿಗಳು ಸ್ಪಂದಿಸ್ತಿಲ್ಲ~
`ನೀರಿನ ಸಮಸ್ಯೆ ಬಗ್ಗೆ ಜಲಮಂಡಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸ್ತಿಲ್ಲ. ಸುಮಾರು ಸಾರಿ ಅಧಿಕಾರಿಗಳನ್ನ ಖುದ್ದು ಭೇಟಿಯಾಗಿ ಮನವಿ ಮಾಡಿದರೂ ಸಮಸ್ಯೆ ಪರಿಹಾರಕ್ಕೆ ಮುಂದಾಗ್ತಿಲ್ಲ. ಸುಮಾರು 30 ಬೋರ್‌ವೆಲ್‌ಗಳಿದ್ದರೂ ಅವುಗಳ ನಿರ್ವಹಣೆಯನ್ನೂ ಮಾಡದೆ ಜಲಮಂಡಲಿ ಅಧಿಕಾರಿಗಳು ಕೇವಲ ಆಶ್ವಾಸನೆಯಲ್ಲೇ ಕಾಲ ಕಳೀತಿದ್ದಾರೆ. ಜಲಮಂಡಲಿ ಸಚಿವರು ನಗರದ ನೀರಿನ ಸಮಸ್ಯೆಯನ್ನ ಕಂಡೂ ಕಾಣದಂತೆ ವರ್ತಿಸ್ತಿದ್ದಾರೆ~
-ವಿದ್ಯಾ ಶಶಿಕುಮಾರ್, ಬಿಬಿಎಂಪಿ 121 ವಾರ್ಡ್ ಸದಸ್ಯೆ
`ಕಠಿಣ ಕ್ರಮ ಕೈಗೊಳ್ತೀವಿ~
`ಬಡಾವಣೆಯಲ್ಲಿ ನೀರಿನ ಸಮಸ್ಯೆ ಇರೋ ಬಗ್ಗೆ ಜಲಮಂಡಲಿಯ ಸಹಾಯಕ ಎಂಜಿನಿಯರ್ ಸೇರಿದಂತೆ ಇನ್ನಿತರ ಅಧಿಕಾರಿಗಳಿಗೆ ಬಡಾವಣೆಯ ಜನರು ಮನವಿ ಮಾಡಿರೋದು ನನ್ನ ಗಮನಕ್ಕೆ ಬಂದಿದೆ. ಜಲಮಂಡಲಿಗೆ ಸೇರಿದ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆಯೂ ಗಮನ ಕೊಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೀತೇನೆ.
ಅಪಾರ್ಟ್‌ಮೆಂಟ್‌ಗಳು ಹಾಗೂ ಹೋಟೆಲ್‌ಗಳಿಗೆ ದೊಡ್ಡ ಪೈಪ್‌ಗಳ ಮೂಲಕ ಅಕ್ರಮವಾಗಿ ನೀರು ಪೂರೈಕೆಯಾಗ್ತಿರೋ ಬಗ್ಗೆಯೂ ದೂರು ಬಂದಿದ್ದು, ಈ ಅಕ್ರಮ ಸಂಪರ್ಕಗಳನ್ನು ಶೀಘ್ರದಲ್ಲಿಯೇ ಕಡಿತಗೊಳಿಸ್ತೇವೆ.
ಬಡಾವಣೆಯ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯವಿರೋ ಪೈಪ್‌ಲೈನ್‌ಗಳು ಹಾಗೂ ವಾಲ್ವ್‌ಗಳ ಬದಲಾವಣೆಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಸಮಸ್ಯೆಯ ತಾತ್ಕಾಲಿಕ ನಿವಾರಣೆಗಾಗಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸ್ತೇವೆ~
-ಸಿ.ಸಿ.ಪುಟ್ಟಮಲ್ಲಪ್ಪ
ಕಾರ್ಯ ನಿರ್ವಾಹಕ ಎಂಜಿನಿಯರ್, ಬಿಡಬ್ಲ್ಯೂಎಸ್‌ಎಸ್‌ಬಿ ಪಶ್ಚಿಮ ವಲಯ,
`ಮಾತುಕತೆ ನಡೆಸ್ತೇನೆ~
`ಬಡಾವಣೆಯ ವಿವಿಧ ಭಾಗಗಳಲ್ಲಿ ಸುಮಾರು ಎರಡು ವರ್ಷಗಳಿಂದಲೂ ನೀರಿನ ಸಮಸ್ಯೆ ಇದೆ. ಹೊಸದಾಗಿ ಪೈಪ್‌ಲೈನ್ ಅಳವಡಿಸೋ ಕೆಲಸವೂ ನಡೀತಿದೆ. ಎಲ್ಲ ಬಡಾವಣೆಗಳಿಗೂ ನೀರು ಪೂರೈಕೆಯಾದ ಮೇಲೆ ಕೊನೆಗೆ 121 ನೇ ವಾರ್ಡ್‌ಗೆ ನೀರು ಬರುತ್ತೆ. ಹೀಗಾಗಿ ಬಡಾವಣೆಗಳಿಗೆ ನೀರು ಬರೋದರೊಳಗೇ ನೀರಿನ ಒತ್ತಡ ಕಡಿಮೆಯಾಗಿರುತ್ತೆ. ಇದು ನೀರಿನ ಸಮಸ್ಯೆಗೆ ಕಾರಣ. ಜಲಮಂಡಲಿ ಅಧಿಕಾರಿಗಳೂ ನೀರಿನ ಸಮಸ್ಯೆಯನ್ನ ಗಂಭೀರವಾಗಿ ತೆಗೆದುಕೊಳ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ಜಲಮಂಡಲಿ ಸಚಿವ ಸುರೇಶ್‌ಕುಮಾರ್ ಜತೆಗೂ ಮಾತುಕತೆ ನಡೆಸ್ತೇನೆ~
-ದಿನೇಶ್ ಗುಂಡೂರಾವ್, ಶಾಸಕ, ಗಾಂಧಿನಗರ ವಿಧಾನಸಭಾ ಕ್ಷೇತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.