ADVERTISEMENT

ಬಿರುಸಿನ ಕಾವೇರಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ಬೆಂಗಳೂರು: ಕಾವೇರಿ 4ನೇ ಹಂತ 2 ನೇ ಘಟ್ಟದ ಯೋಜನೆಯ ಕಾಮಗಾರಿಯು ಹಗಲಿರುಳು ನಡೆಯುತ್ತಿದೆ. ಆಗಸ್ಟ್ ತಿಂಗಳಿನಲ್ಲಿ ಭಾಗಶಃ ಪೂರ್ಣಗೊಂಡು ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.

ಬೆಂಗಳೂರಿಗೆ ನೀರು ತರಲು ಅಗತ್ಯವಾಗಿ ಆಗಲೇಬೇಕಾದ ಕಚ್ಚಾನೀರು ಸಾಗಾಣಿಕೆ ಮಾರ್ಗ, ಶುದ್ಧೀಕರಣ ಘಟಕ, ಪಂಪಿಂಗ್ ಹೌಸ್ ಇತ್ಯಾದಿಗಳನ್ನು ನಿಗದಿತ ಸಮಯದೊಳಗೆ ನಿರ್ಮಾಣ ಮಾಡಲು ಹಗಲಿರುಳು ಕಾಮಗಾರಿ ನಡೆಯುತ್ತಿದೆ.

ಶಿವ ಬ್ಯಾಲೆನ್ಸಿಂಗ್ ರಿಸರ್ವಾಯರ್‌ನಿಂದ ತೊರೆ ಕಾಡನಹಳ್ಳಿಗೆ ಕಚ್ಚಾ ನೀರು ಸಾಗಾಣಿಕೆ ಮಾರ್ಗ 15.7 ಕಿ.ಮೀ. ಇದ್ದು ಇದರಲ್ಲಿ 15 ಕಿ.ಮೀ. ಕಾಮಗಾರಿ ಮುಗಿದಿದ್ದು ಇನ್ನು ಕೇವಲ 0.7 ಮೀಟರ್ ಕಾಮಗಾರಿ ಬಾಕಿ ಉಳಿದಿದೆ.
ತೊರೆಕಾಡನ ಹಳ್ಳಿಯಲ್ಲಿನ ನೀರು ಶುದ್ಧೀಕರಣ ಘಟಕ ಒಟ್ಟು 24 ಶುದ್ಧೀಕರಣ ಬೆಡ್‌ಗಳನ್ನು ಒಳಗೊಂಡಿದ್ದು ಈಗ ಭಾಗಶಃ ಪೂರೈಕೆಗೆ ಅಗತ್ಯವಾದ 12 ಬೆಡ್‌ಗಳು ಸಿದ್ಧವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಕಾಮಗಾರಿಗಳು ಪ್ರಗತಿಯಲ್ಲಿವೆ.

ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿ ಮೂರು ಸ್ಥಳಗಳಲ್ಲಿ ಭೂಮಟ್ಟದ ಜಲಾಗಾರಗಳ ಒಂದು ಭಾಗವು ಪೂರೈಕೆಗೆ ಸಿದ್ಧವಾಗಿದೆ. ತಾತಗುಣಿಯಲ್ಲಿ ಭೂ ಮಟ್ಟದ ನೀರು ಸಂಗ್ರಹಾರಗಳ ಶುಚಿಗೊಳಿಸುವ ಕೆಲಸ ನಡೆಯುತ್ತಿದೆ.

ಹಾರೋಹಳ್ಳಿಯಲ್ಲಿನ ಜಲಾಗಾರವನ್ನು ಕಟ್ಟಿರುವುದು ಸರಿಯಾಗಿದೆಯೇ ಎಂಬ ಪರೀಕ್ಷೆಗಾಗಿ ನೀರು ಭರ್ತಿ ಮಾಡಲಾಗುತ್ತಿದೆ. ಈ ಮೂರು ಸ್ಥಳಗಳಲ್ಲಿನ ನೀರನ್ನು ಪಂಪ್ ಮಾಡುವ ಪಂಪ್ ಹೌಸ್‌ಗಳು ಸಿದ್ಧವಾಗಿದ್ದು, ಮೋಟಾರುಗಳ ಅಳವಡಿಕೆ ಪ್ರಗತಿಯಲ್ಲಿದೆ. ಈ ಕಾಮಗಾರಿ ಆಗಸ್ಟ್ 7 ರೊಳಗೆ ಮುಗಿಯುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.