ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ, ಅವರ ಪತ್ನಿ ಶೈಲಜಾ ಮತ್ತು ಇತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ಬುಧವಾರ ವರದಿ ದಾಖಲು ಆಗುತ್ತಿದ್ದಂತೆ, ಇದಕ್ಕೆ ರೆಡ್ಡಿ ಅವರು ಆಕ್ಷೇಪಣೆ ಸಲ್ಲಿಸಿದ್ದಾರೆ.
`ನಾಗದೇವನಹಳ್ಳಿಯಲ್ಲಿನ 22 ಗುಂಟೆ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕು~ ಎಂದು ಲೋಕಾಯುಕ್ತ ಪೊಲೀಸರು ಬುಧವಾರ `ಬಿ~ ವರದಿ ಸಲ್ಲಿಸಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿರುವ ರೆಡ್ಡಿ ಅವರು ವರದಿ ರದ್ದತಿಗೆ ಕೋರಿದ್ದಾರೆ.
`ಪೊಲೀಸರು ನೀಡಿರುವ ವರದಿಯಲ್ಲಿ ತಾರತಮ್ಯ ಎಸಗಲಾಗಿದೆ. ಏಕಪಕ್ಷೀಯವಾಗಿ ವರದಿ ನೀಡಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ನೀಡಿರುವ ಹೇಳಿಕೆ ಮೇರೆಗೆ ವರದಿ ತಯಾರು ಮಾಡಲಾಗಿದೆ. ಆದರೆ ನಾನು ನೀಡಿರುವ ದೂರಿನಲ್ಲಿ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವ ಅಧಿಕಾರ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಇಲ್ಲ. ಆದುದರಿಂದ ವರದಿಗೆ ಯಾವುದೇ ಮಾನ್ಯತೆ ಇಲ್ಲ~ ಎಂದು ಆಕ್ಷೇಪಣಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಮೂವರು ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ಮುಂದುವರಿಸುವಂತೆ ರೆಡ್ಡಿ ಪರ ವಕೀಲ ಸುರೇಶ್ ಕೋರಿಕೊಂಡರು. ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದರು.
ವಕೀಲರ ಪರಿಷತ್ತಿಗೆ ನೋಟಿಸ್
ಇದೇ ತಿಂಗಳ 2ರಂದು ನಗರ ಸಿವಿಲ್ ಕೋರ್ಟ್‌ನಲ್ಲಿ ಮಾಧ್ಯಮ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ವಕೀಲರ ವಿರುದ್ಧ ಸೂಕ್ತ ಕ್ರಮಕ್ಕೆ ರಾಜ್ಯ ವಕೀಲರ ಪರಿಷತ್ತಿಗೆ ಆದೇಶಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರ, ಪರಿಷತ್ತು ಸೇರಿದಂತೆ ಇತರ ಪ್ರತಿವಾದಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿಗೆ ಆದೇಶಿಸಿದೆ.
ಚೆನ್ನೈ ಮೂಲದ ವಿಶ್ವನಾಥ ಸ್ವಾಮಿ ಎನ್ನುವವರು ಸಲ್ಲಿಸಿರುವ ಅರ್ಜಿ ಇದಾಗಿದೆ. ಅದೇ ರೀತಿ ಮಾಧ್ಯಮದವರ ಹಾಗೂ ಪೊಲೀಸರ ವಿರುದ್ಧ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು. ಅಂದು ನಡೆದಿರುವ ಘಟನೆಯ ಕುರಿತ ಚಿತ್ರೀಕರಣದ ಸಿ.ಡಿಯನ್ನು ನೀಡುವಂತೆ ಎಲ್ಲ ವಿದ್ಯುನ್ಮಾನ ಮಾಧ್ಯಮಗಳಿಗೆ ಪೀಠ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಆರೋಪಿಗಳಿಗೆ ಜಾಮೀನು
ನೈಸ್ ರಸ್ತೆ ವಿರೋಧಿ ಹೋರಾಟಗಾರ ಸಿದ್ದಲಿಂಗಪ್ರಭು ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಐವರಿಗೆ ಜಾಮೀನು ನೀಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಸಿ.ಆರ್.ಪ್ರಕಾಶ, ಎಸ್.ಡಿ.ಶಾಂತ ಕುಮಾರ್, ಹನುಮಯ್ಯ, ರಾಜು ಅಲಿಯಾಸ್ ರಾಜೇಶ್ ಹಾಗೂ ಜನಾರ್ದನ ಅವರಿಗೆ ಜಾಮೀನು ನೀಡಿ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಆದೇಶಿಸಿದ್ದಾರೆ.
ಕಳೆದ ನ. 17ರಂದು ಕೊಲೆ ನಡೆದಿತ್ತು. ಕೊಲೆಯಲ್ಲಿ ನೈಸ್ ಮುಖ್ಯಸ್ಥ ಅಶೋಕ ಖೇಣಿ ಹಾಗೂ ಈ ಎಲ್ಲ ಆರೋಪಿಗಳ ಕೈವಾಡ ಇದೆ ಎಂದು ಸಿದ್ದಲಿಂಗಪ್ರಭು ಅವರ ಸಂಬಂಧಿ ದೂರಿದ್ದ ಹಿನ್ನೆಲೆಯಲ್ಲಿ, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
`ಇವರ ವಿರುದ್ಧ ತಲಘಟ್ಟಪುರ ಪೊಲೀಸರು ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೇ ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಇವರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಕೊಲೆ ನಡೆದಿದೆ ಎಂದು ಹೇಳಿರುವ ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ಕೂಡ ಆರೋಪಿಗಳನ್ನು ಗುರುತಿಸಲು ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡುವುದು ಸೂಕ್ತ ಎನಿಸುತ್ತಿದೆ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟಿದ್ದಾರೆ.
ತಲಾ 25 ಸಾವಿರ ರೂಪಾಯಿಗಳ ಬಾಂಡ್, ಅಷ್ಟೇ ಮೊತ್ತದ ಎರಡು ಭದ್ರತೆ ನೀಡುವಂತೆ, ಸಾಕ್ಷ್ಯಗಳನ್ನು ನಾಶ ಪಡಿಸದಂತೆ ಹಾಗೂ ವಿಚಾರಣೆಯ ಸಂದರ್ಭಗಳಲ್ಲಿ ಕೋರ್ಟ್‌ಗೆ ಕಡ್ಡಾಯವಾಗಿ ಹಾಜರು ಇರುವಂತೆ ನ್ಯಾಯಮೂರ್ತಿಗಳು ಷರತ್ತು ವಿಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.