ADVERTISEMENT

ಬುದ್ಧ ಹುಟ್ಟಿದ ನಾಡಲ್ಲಿ ಬೌದ್ಧ ಮೀಮಾಂಸೆ ನಾಶ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2011, 19:30 IST
Last Updated 19 ಮಾರ್ಚ್ 2011, 19:30 IST

ಬೆಂಗಳೂರು: ‘ಬುದ್ಧ ಹುಟ್ಟಿದ ನಾಡಾದ ಭಾರತದಲ್ಲಿ ಬೌದ್ಧ ಮೀಮಾಂಸೆಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ. ಇದರ ಹಿಂದೆ ದೊಡ್ಡ ರಾಜಕಾರಣವೊಂದು ಅಡಗಿದೆ’ ಎಂದು ಹಿರಿಯ ಕುಂಚ ಕಲಾವಿದ ಕೆ.ಟಿ.ಶಿವಪ್ರಸಾದ್ ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೌದ್ಧ ಮೀಮಾಂಸೆಯ ಮೂಲ ಗ್ರಂಥಗಳು ಭಾರತದಲ್ಲಿ ದೊರೆಯುತ್ತಿಲ್ಲ. ಈ ಗ್ರಂಥಗಳು ಟಿಬೆಟ್‌ನಲ್ಲಿ ಮಾತ್ರ ದೊರೆಯುತ್ತಿವೆ. ಬೌದ್ಧ ಮೀಮಾಂಸೆಯ ಗ್ರಂಥಗಳು ಜನರಿಗೆ ತಲುಪಬಾರದು ಎಂಬ ಕಾರಣಕ್ಕೆ ಅವುಗಳನ್ನು ನಾಶಪಡಿಸಲಾಗಿದೆ’ ಎಂದು ಅವರು ಹೇಳಿದರು.

‘ಬೌದ್ಧ ಮೀಮಾಂಸೆಗೂ ಇಂದಿನ ವಿಜ್ಞಾನಕ್ಕೂ ಹೆಚ್ಚಿನ ಸಂಬಂಧಗಳಿವೆ. ಅಲ್ಲಮ, ಐನ್‌ಸ್ಟೀನ್, ಸ್ಟೀಫನ್ ಹಾಕಿಂಗ್ಸ್ ಹಾಗೂ ಡಾರ್ವಿನ್ ಅವರು ಪ್ರತಿಪಾದಿಸಿರುವ ಸಿದ್ಧಾಂತಗಳಿಗೆ ಬೌದ್ಧ ತತ್ವಗಳು ತಳಹದಿಯಾಗಿವೆ. ಬುದ್ಧನ ಆದರ್ಶಗಳಲ್ಲಿ ನಡೆಯುತ್ತಿರುವ ವೈಜ್ಞಾನಿಕ ತತ್ವಗಳು ದೇಶದ ದಲಿತರನ್ನು ಮುನ್ನಡೆಸುವ ವಿಶ್ವಾಸವಿದೆ’ ಎಂದು ತಿಳಿಸಿದರು.

‘ಕುವೆಂಪು ಅವರ ಕೃತಿಗಳಲ್ಲಿ ಬೌದ್ಧ ಮೀಮಾಂಸೆಯ ತಳಹದಿ ಇದೆ. ಅವರ ಕಾದಂಬರಿ ಮಲೆಗಳಲ್ಲಿ ಮಧುಮಗಳು ಹಾಗೂ ಅನಿಕೇತನ ಕವಿತೆಯಲ್ಲಿ ಇದು ಹೆಚ್ಚು ನಿಚ್ಚಳವಾಗಿ ತೋರುತ್ತದೆ. ಪೂರ್ಣಚಂದ್ರ ತೇಜಸ್ವಿ ಅವರ ಕೃತಿಗಳಲ್ಲಿ ಕೂಡ ಬುದ್ಧನ ಉದಾತ್ತತೆ ಎದ್ದು ತೋರುತ್ತದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.