ADVERTISEMENT

ಬೆಂಗಳೂರಿನಲ್ಲಿ ನ್ಯಾನೋ, ಬಿಟಿ ಪಾರ್ಕ್

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 19:30 IST
Last Updated 11 ಏಪ್ರಿಲ್ 2012, 19:30 IST

ಮೈಸೂರು: `ಸಿಲಿಕಾನ್ ಸಿಟಿ~ ಬೆಂಗಳೂರಿನಲ್ಲಿ ನ್ಯಾನೋ ತಂತ್ರಜ್ಞಾನ ಪಾರ್ಕ್ ಮತ್ತು ಜೈವಿಕ ತಂತ್ರಜ್ಞಾನ (ಬಿಟಿ) ಪಾರ್ಕ್ ನಿರ್ಮಾಣವಾಗಲಿವೆ ಎಂದು  ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ್ ಹೇಳಿದರು.

ಬುಧವಾರ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್‌ಐಇ) ಕಾಲೇಜಿನಲ್ಲಿ ನ್ಯಾನೋ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದ ಅವರು, `ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿಯೇ ನ್ಯಾನೋ ಪಾರ್ಕ್ ನಿರ್ಮಾಣವಾಗುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖ ಪಾತ್ರ ವಹಿಸಲಿರುವ ನ್ಯಾನೋ ತಂತ್ರಜ್ಞಾನದ ಬೆಳವಣಿಗೆಗೆ ನಾವು ಸಿದ್ಧರಾಗಿದ್ದೇವೆ~ ಎಂದರು.

`ಎಲೆಕ್ಟ್ರಾನಿಕ್ ಸಿಟಿಯಲ್ಲಿ ನೂರು ಎಕರೆ ಭೂಮಿಯನ್ನು ನೀಡಿದ್ದು ಅಮೆರಿಕ ಮೂಲದ ಅಲೆಕ್ಸಿಯಾ ಸಂಸ್ಥೆಯು ಬಯೋ ಟೆಕ್ನಾಲಜಿ ಪಾರ್ಕ್ ನಿರ್ಮಿಸಲಿದೆ. ಜಗತ್ತಿನ ಮುಂಚೂಣಿ ಸಂಸ್ಥೆಯಾಗಿರುವ ಅಲೆಕ್ಸಿಯಾ ಏಷ್ಯಾ ಖಂಡದಲ್ಲಿ ನಿರ್ಮಾಣ ಮಾಡುತ್ತಿರುವ ಮೊದಲ ಜೈವಿಕ ತಂತ್ರಜ್ಞಾನ ಪಾರ್ಕ್ ಇದು~ ಎಂದು ತಿಳಿಸಿದರು.

`ಭವಿಷ್ಯದ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನ ಬೆಳವಣಿಗೆಗೆ ವಿವಿಧ ರಂಗಗಳಲ್ಲಿ ವಿಷನ್ ಸಮೂಹ ರಚಿಸಲಾಗಿದೆ. ವಿಜ್ಞಾನಿ ಸಿಎನ್‌ಆರ್ ರಾವ್ ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ನ್ಯಾನೋ ಕ್ಷೇತ್ರಗಳು ಕಾರ್ಯ ನಿರ್ವಹಿಸಲಿವೆ. ಕಿರಣ್ ಮುಜುಮದಾರ್ ಅವರ ನೇತೃತ್ವದಲ್ಲಿ ಬಯೋಟೆಕ್ನಾಲಜಿ ಸಮೂಹ  ಕಾರ್ಯ ನಿರ್ವಹಿಸಲಿದೆ~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.