ADVERTISEMENT

ಬೆಂಗಳೂರು ನಗರದಲ್ಲಿ ಭಾರಿ ಮಳೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2012, 19:15 IST
Last Updated 23 ಆಗಸ್ಟ್ 2012, 19:15 IST
ಬೆಂಗಳೂರು ನಗರದಲ್ಲಿ ಭಾರಿ ಮಳೆ
ಬೆಂಗಳೂರು ನಗರದಲ್ಲಿ ಭಾರಿ ಮಳೆ   

ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಯಿತು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಮಳೆಯಿಂದ ತೊಂದರೆ ಅನುಭವಿ ಸುವಂತಾಯಿತು. ನಗರದ ಹಲವೆಡೆ ಮರಗಳು ಉರುಳಿಬಿದ್ದವು. ಚರಂಡಿ ಗಳೆಲ್ಲಾ ತುಂಬಿ ಮಳೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿತು.

ರಾತ್ರಿ 8.30ರ ಸುಮಾರಿಗೆ ಆರಂಭವಾದ ಮಳೆ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಪರಿಣಾಮ ಕೆಂಪೇಗೌಡ ರಸ್ತೆ, ಮೈಸೂರು ರಸ್ತೆ, ಲಾಲ್‌ಬಾಗ್ ರಸ್ತೆ, ಹೊಸೂರು ರಸ್ತೆ, ಎಂ.ಜಿ.ರಸ್ತೆ, ಕಾವೇರಿ ಜಂಕ್ಷನ್ ಸುತ್ತಮುತ್ತಲ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಕ್ಷಣ ಮಾತ್ರದಲ್ಲಿ ಜಲಾವೃತವಾದವು. ಚರಂಡಿಗಳೆಲ್ಲಾ ಕಟ್ಟಿಕೊಂಡು ಮಳೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಯಿತು.

ಲಾಲ್‌ಬಾಗ್ ರಸ್ತೆ, ಕೆ.ಎಚ್.ರಸ್ತೆ, ಹೊಸೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು.
ಶ್ರೀನಗರದ ರಾಘವೇಂದ್ರ ಕಾಲೊನಿ, ಆರ್‌ಪಿಸಿ ಲೇಔಟ್, ಕೋರಮಂಗಲ ಎಂಟನೇ ಬ್ಲಾಕ್, ಜಯನಗರ ಎಂಟನೇ ಬ್ಲಾಕ್, ಕೆ.ಆರ್.ಮಾರುಕಟ್ಟೆ, ಸಿಟಿ ಮಾರುಕಟ್ಟೆ, ಇಂದಿರಾನಗರದಲ್ಲಿ ಮರಗಳು ನೆಲಕ್ಕುರುಳಿದವು.
ಕೆಲವು ಕಡೆ ಮನೆಗಳಿಗೆ ನೀರು ನುಗ್ಗಿದ ಕಾರಣ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು.
 
ರಾಮಮೂರ್ತಿನಗರ, ವಿಜಿನಾಪುರ, ಕುವೆಂಪು ಸ್ಟ್ರೀಟ್, ಕವದೇನಹಳ್ಳಿ, ಎಚ್‌ಎಸ್‌ಆರ್ ಲೇಔಟ್‌ನ ಬೃಂದಾವನ ಪಾರ್ಕ್, ಮಂಗಮ್ಮನಪಾಳ್ಯ, ಬೇಗೂರಿನ ಕ್ಲಾಸಿಕ್ ಲೇಔಟ್, ಮುರುಗೇಶ್‌ಪಾಳ್ಯ, ಪುಷ್ಪಗಿರಿನಗರ, ಚಂದಾಪುರ, ಕಗ್ಗದಾಸನಪುರ ಸೇರಿದಂತೆ ಮುಂತಾದ ತಗ್ಗು ಪ್ರದೇಶದಲ್ಲಿ ಮಳೆ ನೀರು ಮನೆಗೆ ನುಗ್ಗಿದ್ದರಿಂದ ಜನರು ಹೊರಗಡೆ ನೀರು ಚೆಲ್ಲುವುದರಲ್ಲೇ ಇಡೀ ರಾತ್ರಿ ಕಳೆಯುವಂತಾಯಿತು.  ಕಲ್ಯಾಣನಗರದಲ್ಲಿ ಸುಮಾರು ಹತ್ತು ಮನೆಗಳಿಗೆ ನೀರು ನುಗ್ಗಿತು. `ಮನೆಯೊಳಗೆ ಸುಮಾರು ಎರಡು ಅಡಿಗಳಷ್ಟು ನೀರು ನಿಂತಿದ್ದು, ಕುಟುಂಬ ಸಮೇತರಾಗಿ ಮನೆಯಿಂದ ಹೊರಬಂದಿದ್ದೇವೆ. ಚರಂಡಿ ನೀರೆಲ್ಲಾ ಮನೆಯೊಳಗೆ ನುಗ್ಗಿದ್ದು ಕಾಲೊನಿ ಜನರು ಪರದಾಡುವಂತಾಗಿದೆ~ ಎಂದು ಸ್ಥಳೀಯ ನಿವಾಸಿ ಅಶ್ವತ್ಥ ನಾರಾಯಣ್ `ಪ್ರಜಾವಾಣಿ~ಗೆ ತಿಳಿಸಿದರು.

ಮಳೆ ಆರಂಭವಾಗುತ್ತಿದ್ದಂತೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ನಗರದಲ್ಲಿ 47.8 ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣ ಸುತ್ತಮುತ್ತ 100.7 ಮಿಲಿ ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.