ADVERTISEMENT

ಬೆಂಗಳೂರು ವಿ.ವಿ ಪ್ರತ್ಯೇಕಿಸುವುದೇಕೆ?: ರಾಜ್ಯಪಾಲ ಕಿಡಿ

ರಾಜ್ಯದಲ್ಲಿ ದಿಕ್ಕು ತಪ್ಪಿದ ಉನ್ನತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 20:00 IST
Last Updated 15 ಜೂನ್ 2013, 20:00 IST

ಬೆಂಗಳೂರು: `ಉನ್ನತ ಶಿಕ್ಷಣ ನೀಡಲು ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಬೇರ್ಪಡಿಸುವ ನಿರ್ಧಾರದ ಹಿಂದಿರುವ ತರ್ಕವೇನು?' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಶ್ನಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದ್ವಿತೀಯ ದೀಕ್ಷಾಂತ ಘಟಿಕೋತ್ಸವ ಸಮಾರಂಭದ  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಆರಂಭದಲ್ಲಿ ಹುಟ್ಟಿದ ವಿ.ವಿ ಗಳಾಗಿವೆ.

ಇವುಗಳ ಮೂಲವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ನಡೆಸಬೇಕು. ಅಲ್ಲದೇ ಬೆಂಗಳೂರು ವಿ.ವಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮ್ಮನೆ ಬೇರ್ಪಡಿಸುವ ಔಚಿತ್ಯ ನನಗಂತೂ ಕಾಣುತ್ತಿಲ್ಲ. ಈ ಬಗ್ಗೆ ಸರ್ಕಾರವೇ ಸ್ಪಷ್ಟ ನಿಲುವು ತಳೆಯಬೇಕು' ಎಂದು ಪ್ರತಿಕ್ರಿಯಿಸಿದರು.

`ಸಂಸ್ಕೃತ ವಿಶ್ವವಿದ್ಯಾಲಯ ರೂಪುಗೊಂಡು 4 ವರ್ಷಗಳು ಕಳೆದರೂ ಘಟಿಕೋತ್ಸವ ನಡೆಸಲು ವಿ.ವಿ.ಗೆ ತನ್ನದೇ ಸಭಾಂಗಣವಿಲ್ಲ. ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದ್ದು, ಉನ್ನತ ಶಿಕ್ಷಣ ಸಂಪೂರ್ಣ ದಿಕ್ಕು ತಪ್ಪಿದಂತೆ ಭಾಸವಾಗುತ್ತಿದೆ. ಇದರಿಂದ ಹಿಂದಿನ ಉನ್ನತ ಶಿಕ್ಷಣ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ಅರಿವಾಗುತ್ತದೆ' ಎಂದು ದೂರಿದರು.

ಇದಕ್ಕೂ ಮುನ್ನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ಕೋಟೆಮನೆ ರಾಮಚಂದ್ರ ಜಿ.ಭಟ್ `ವಿಶ್ವದ ಎಲ್ಲೆಡೆ ಹೆಚ್ಚುತ್ತಿರುವ ಮತಪಂಥಗಳ ಗೋಡೆಗಳನ್ನು ಕೆಡವಲು ಸಾಮರಸ್ಯದ ಸೂತ್ರವಿಂದು ಅಗತ್ಯವಾಗಿ ಬೇಕಿದ್ದು, ಅದು ವೇದಗಳಲ್ಲಿದೆ' ಎಂದು ತಿಳಿಸಿದರು.

ಸಂಸ್ಕೃತವೂ ಈ ನೆಲದ ಭಾಷೆಯಾಗಿದ್ದರೂ ಸಮರ್ಪಕವಾಗಿ ಉಸಿರಾಡಲು ತೊಂದರೆ ಪಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಯುವಸಮೂಹ ಸಂಸ್ಕೃತದೆಡೆಗೆ ಕುತೂಹಲ, ಆಸಕ್ತಿ ಬೆಳೆಸಿಕೊಳ್ಳುವಂತೆ ವಿ.ವಿ ಮಾಡಬೇಕು' ಎಂದು ಸಲಹೆ ನೀಡಿದರು.

ವಿ.ವಿ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ, `ದಿನದಿಂದ ದಿನಕ್ಕೆ ವಿ.ವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿರುವುದು ಸಂತೋಷದ ವಿಚಾರ' ಎಂದು ತಿಳಿಸಿದರು. ಕುಲಸಚಿವ ವೈ.ಎಸ್.ಸಿದ್ದೇಗೌಡ, `ಸಂಸ್ಕೃತದೆಡೆಗೆ ಆಸಕ್ತಿ ಇರುವವರಿಗಾಗಿಯೇ ಸಂಜೆ ಕಾಲೇಜುಗಳನ್ನು ಕೂಡ ತೆರೆಯಲು ಅನುಮತಿ ಸಿಕ್ಕಿದ್ದು, ಸದ್ಯದಲ್ಲೇ ಚಾಲನೆ ದೊರೆಯಲಿದೆ. ಅಲ್ಲದೇ ತಿಪ್ಪಸಂದ್ರದಲ್ಲಿ ನೂರು ಎಕರೆಯ ಜಮೀನು ದೊರೆತಿದ್ದು, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರತೇಕ ಕಟ್ಟಡ ದೊರೆಯಲಿದೆ' ಎಂದರು.

ಘಟಿಕೋತ್ಸವದಲ್ಲಿ 460 ಮಂದಿ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಮಾಣ ಮಾಡಲಾಯಿತು. ಅದರಲ್ಲಿ 166ಮಂದಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು. 9 ಮಂದಿ ರ‍್ಯಾಂಕ್ ಪಡೆದಿದ್ದು, ಹೊನ್ನಾವರದ ಗೌರಿ  ಹೆಗಡೆ ಅವರಿಗೆ ಪ್ರಥಮ ರ‌್ಯಾಂಕ್ ಲಭಿಸಿತು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಧಾರವಾಡದ ಬಾಲಚಂದ್ರಶಾಸ್ತ್ರಿ ಜೋಶಿ, ಮೈಸೂರಿನ ಕೆ.ಎಸ್.ವರದಾಚಾರ್ಯ, ಹೊನ್ನಾವಾರದ ಕೆ.ನಾರಾಯಣ ಶಾಸ್ತ್ರಿ ಬುಚ್ಚನ್, ಬೆಂಗಳೂರಿನ ಡಾ.ಎಂ.ಶಿವಕುಮಾರ ಸ್ವಾಮಿ ಅವರಿಗೆ ಡಿ.ಲಿಟ್ ಪ್ರದಾನ ಮಾಡಿದರು.

ಪರಿಶೀಲಿಸುವೆ: ಸಿಎಂ
ಬೆಂಗಳೂರು
: ಬೆಂಗಳೂರು ವಿವಿ ವಿಭಜನೆಗೆ ರಾಜ್ಯಪಾಲರು ಏಕೆ ವಿರೋಧಿಸಿದ್ದಾರೆ ಎಂಬುದರ ಬಗ್ಗೆ ತಮಗೇನೂ ಗೊತ್ತಿಲ್ಲ. ಪರಿಶೀಲನೆ ನಂತರ ಆ ಕುರಿತು ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಹೇಳಿದರು.

`ಇಷ್ಟಕ್ಕೂ ವಿಶ್ವವಿದ್ಯಾಲಯ ವಿಭಜನೆ ಮಾಡಿದ್ದು, ಹಿಂದಿನ ಬಿಜೆಪಿ ಸರ್ಕಾರ. ಅವರು ಯಾವ ಕಾರಣಕ್ಕೆ ವಿಭಜನೆ ಮಾಡಿದರು? ಅದನ್ನು ರಾಜ್ಯಪಾಲರು ಏಕೆ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನಕ್ಕೆ ಬರಲಾಗುವುದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.