ADVERTISEMENT

ಬೆಂಗಳೂರು ವಿಶ್ವವಿದ್ಯಾಲಯ ವಿಶೇಷ ಸಿಂಡಿಕೇಟ್ ಸಭೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಬೆಂಗಳೂರು: ಬಜೆಟ್ ಬಗ್ಗೆ ವಿವರ ಕೊಡುವಂತೆ ಸಿಂಡಿಕೇಟ್ ಸದಸ್ಯರು ಒತ್ತಾಯಿಸಿದ ಹಿನ್ನೆಲೆಯಲ್ಲಿ 2012- 13ರ ಸಾಲಿನ ಬಜೆಟ್ ಮಂಡನೆ ಮತ್ತು ಅನುಮೋದನೆಗಾಗಿ ಬುಧವಾರ ಕರೆದಿದ್ದ ಬೆಂಗಳೂರು ವಿಶ್ವವಿದ್ಯಾಲಯದ ವಿಶೇಷ ಸಿಂಡಿಕೇಟ್ ಸಭೆಯನ್ನು ಮುಂದಕ್ಕೆ ಹಾಕಲಾಗಿದೆ. ಮುಂದೂಡಿದ ಸಭೆಯು ಶನಿವಾರ (ಮಾ. 24) ಬೆಳಿಗ್ಗೆ 10ಕ್ಕೆ ನಡೆಯಲಿದೆ.

ಸಭೆಯಲ್ಲಿ ಹಲವು ಸಿಂಡಿಕೇಟ್ ಸದಸ್ಯರು, `ಲಿಖಿತವಾಗಿ ನೀಡಿದ್ದ ಬಜೆಟ್ ಕುರಿತ ಮಾಹಿತಿಯಲ್ಲಿ ಆದಾಯ ಮತ್ತು ವೆಚ್ಚಗಳು ತಾಳೆಯಾಗುತ್ತಿಲ್ಲ~ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳು ನೀಡಿದ ವಿವರಣೆ ಸದಸ್ಯರಿಗೆ ತೃಪ್ತಿ ತರಲಿಲ್ಲ. ಕೊನೆಗೆ ಸದಸ್ಯರ ಒತ್ತಾಯದಂತೆ ಸಭೆಯನ್ನು ಮುಂದಕ್ಕೆ ಹಾಕಲಾಯಿತು. `ಕಾಯ್ದೆ ಪ್ರಕಾರ ವರ್ಷಕ್ಕೆ 8 ಸಾಮಾನ್ಯ ಸಿಂಡಿಕೇಟ್ ಸಭೆ ಕರೆಯಬೇಕು. ಆದರೆ ಅಷ್ಟು ಸಭೆಗಳನ್ನು ಕರೆದಿಲ್ಲ~ ಎಂಬ ಸದಸ್ಯರ ಆಕ್ಷೇಪಕ್ಕೆ ಉತ್ತರಿಸಿದ ಕುಲಪತಿ ಡಾ.ಎನ್.ಪ್ರಭುದೇವ್, `ವಿಶೇಷ ಸಿಂಡಿಕೇಟ್ ಸಭೆಗಳು ಸೇರಿದರೆ 8ಕ್ಕಿಂತ ಹೆಚ್ಚು ಸಭೆಗಳಾಗುತ್ತವೆ. ವಿಶೇಷ ಸಿಂಡಿಕೇಟ್ ಸಭೆಗೂ ಸಾಮಾನ್ಯ ಸಿಂಡಿಕೇಟ್ ಸಭೆಗೂ ಯಾವುದೇ ವ್ಯತ್ಯಾಸ ಇಲ್ಲ~ ಎಂದರು. ಕುಲಪತಿಯವರ ಈ ವಾದ ಸರಿಯಲ್ಲ ಎಂದು ಸದಸ್ಯರು ಟೀಕಿಸಿದರು.

`ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರನ್ನು ಕೇಳಿಕೊಂಡಿದ್ದೇವೆ. ಅವರ ಒಪ್ಪಿಗೆಯ ನಿರೀಕ್ಷೆಯಲ್ಲಿದ್ದೇವೆ~ ಎಂದು ಪ್ರಭುದೇವ್ ಸಭೆಗೆ ತಿಳಿಸಿದರು.

ಆಗ ಸಿಂಡಿಕೇಟ್ ಸದಸ್ಯ ಡಾ.ಕೆ.ವಿ.ಆಚಾರ್ಯ ಅವರು ಮಾತನಾಡಿ, `ಮುಖ್ಯ ನ್ಯಾಯಮೂರ್ತಿಯವರು ಬರಲು ಒಪ್ಪದಿದ್ದರೆ, ರಾಷ್ಟ್ರಮಟ್ಟದ ಸಾಹಿತ್ಯ ಪುರಸ್ಕಾರ ಪಡೆದಿರುವ ಡಾ.ಚಂದ್ರಶೇಖರ ಕಂಬಾರ ಅಥವಾ ಎಸ್.ಎಲ್.ಭೈರಪ್ಪ ಅವರಲ್ಲಿ ಒಬ್ಬರನ್ನು ಆಹ್ವಾನಿಸಬೇಕು~ ಎಂದು ಸಲಹೆ ನೀಡಿದರು. ಈ ಸಲಹೆಯನ್ನು ಗಮನದಲ್ಲಿ ಇಟ್ಟುಕೊಳ್ಳುವುದಾಗಿ ಪ್ರಭುದೇವ್ ಭರವಸೆ ನೀಡಿದರು.

`ವಿ.ವಿ.ಯಲ್ಲಿ ಅಧ್ಯಯನ ಪೀಠ ಪ್ರಾರಂಭಿಸಲು ಇಸ್ರೊ ಸಂಸ್ಥೆಯು ಮೂರು ವರ್ಷಗಳ ಹಿಂದೆ ರೂ 5 ಲಕ್ಷ ಅನುದಾನ ನೀಡಿತ್ತು. ಅದನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರಿಂದ ರೂ 1 ಲಕ್ಷ ಬಡ್ಡಿ ಬಂದಿದೆ. ಇನ್ನೂ ಪೀಠ ತೆರೆಯದೇ ಇರಲು ಕಾರಣವೇನು?~ ಎಂದು ಆಚಾರ್ಯ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರಭುದೇವ್, `ಪೀಠ ಸ್ಥಾಪನೆಗೆ ಈ ಹಣ ಸಾಕಾಗುವುದಿಲ್ಲ. ರೂ 20 ಲಕ್ಷ ನೀಡುವಂತೆ ಇಸ್ರೊ ಸಂಸ್ಥೆಯನ್ನು ಕೇಳಿಕೊಳ್ಳಲಾಗುವುದು~ ಎಂದರು.

ಮೊದಲಿಗೆ ಆಚಾರ್ಯ ಅವರು, `ನಿಮ್ಮ (ಕುಲಪತಿ) ವಿರುದ್ಧ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿರುವುದರಿಂದ ನೀವು ತಕ್ಷಣ ರಾಜೀನಾಮೆ ನೀಡಬೇಕು~ ಎಂದು ಅವರು ಒತ್ತಾಯಿಸಿದರು.
ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಪ್ರಭುದೇವ್, `ನನ್ನ ರಾಜೀನಾಮೆ ಕೇಳಲು ನಿಮಗೆ ಹಕ್ಕಿಲ್ಲ~ ಎಂದರು. ಆಗ ಇಬ್ಬರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.

ಮುಖ್ಯಸ್ಥರ ನೇಮಕಕ್ಕೆ ಖಂಡನೆ
ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರ ಹುದ್ದೆಗೆ ಪ್ರಾಧ್ಯಾಪಕ ಡಾ.ಬಿ.ಶಾಂತವೀರನಗೌಡ ಅವರನ್ನು ಕುಲಪತಿ ಡಾ.ಎನ್.ಪ್ರಭುದೇವ್ ಅವರೇ ಸಹಿ ಹಾಕಿ ನೇಮಕ ಮಾಡಿರುವುದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯ (2000) ಸೆಕ್ಷನ್ 7ರ ಪ್ರಕಾರ, `ವಿಭಾಗಗಳ ಮುಖ್ಯಸ್ಥರ ಹುದ್ದೆಗಳಿಗೆ ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆದು ನೇಮಕ ಮಾಡಬೇಕು. ಸಿಂಡಿಕೇಟ್ ಸಭೆಯ ನಿರ್ಣಯಗಳಿಗೆ ರಿಜಿಸ್ಟ್ರಾರ್ ಅವರೇ ಸಹಿ ಹಾಕಬೇಕು~.

ಈ ನಿಯಮಕ್ಕೆ ವ್ಯತಿರಿಕ್ತವಾಗಿ ನೇಮಕಾತಿ ಆದೇಶಕ್ಕೆ ಪ್ರಭುದೇವ್ ಅವರು ತಾವೇ ಸಹಿ ಹಾಕಿ ಆದೇಶ ಹೊರಡಿಸಿರುವುದನ್ನು ಸಿಂಡಿಕೇಟ್ ಸದಸ್ಯರು ಹಾಗೂ ವಿ.ವಿ ಪರಿಶಿಷ್ಟ ಜಾತಿ ಮತ್ತು ಪಂಗಡ ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು ತೀವ್ರವಾಗಿ ಖಂಡಿಸಿದ್ದಾರೆ.

ವಿ.ವಿ.ಯಲ್ಲಿ ನಾಲ್ಕು ವಿಭಾಗಗಳ ಮುಖ್ಯಸ್ಥರ ಹುದ್ದೆಗಳ ಅಧಿಕಾರಾವಧಿ ಮಾರ್ಚ್ ತಿಂಗಳ ಬೇರೆ ಬೇರೆ ದಿನಾಂಕಗಳಲ್ಲಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಆ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡುವ ಪ್ರಕ್ರಿಯೆಗೆ ಡಿಸೆಂಬರ್ ತಿಂಗಳಲ್ಲೇ ಚಾಲನೆ ನೀಡಲಾಯಿತು.

ಫೆ. 25ರಂದು ನಾಲ್ಕು ವಿಭಾಗಗಳ ಮುಖ್ಯಸ್ಥರನ್ನಾಗಿ ಪ್ರೊ.ಬಿ.ಕೆ.ರವಿ (ಸಂವಹನ), ಪ್ರೊ.ಶಾಂತವೀರನಗೌಡ (ಸಿವಿಲ್ ಎಂಜಿನಿಯರಿಂಗ್), ಪ್ರೊ.ಸುಧೀಂದ್ರ ಶರ್ಮ (ಪ್ರದರ್ಶನ ಕಲೆಗಳು), ಪ್ರೊ.ಷಡಕ್ಷರಸ್ವಾಮಿ (ಭೂಗರ್ಭಶಾಸ್ತ್ರ) ಅವರ ನೇಮಕಕ್ಕೆ ಸಂಬಂಧಿಸಿದಂತೆ ಸಿಂಡಿಕೇಟ್ ಸಭೆಯ ನಿರ್ಣಯವನ್ನು ಕಾಯ್ದಿರಿಸಿ ಆದೇಶವನ್ನು ಸಿದ್ಧಪಡಿಸುವಂತೆ ಕುಲಸಚಿವರಿಗೆ (ಆಡಳಿತ) ಕುಲಪತಿಯವರು ಶಿಫಾರಸು ಮಾಡಿದ್ದಾರೆ.

ಈ ಶಿಫಾರಸಿಗೆ ಪ್ರತಿಕ್ರಿಯೆಯಾಗಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, `ಕಾಯ್ದೆ ಪ್ರಕಾರ ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿ, ತೀರ್ಮಾನ ತೆಗೆದುಕೊಳ್ಳಬೇಕಿದೆ~ ಎಂದು ಬರೆದಿದ್ದಾರೆ. ಆದರೆ ಸಿಂಡಿಕೇಟ್ ಸಭೆ ಮುಂದೆ ಈ ವಿಚಾರ ಬರಲೇ ಇಲ್ಲ. ಸೋಮವಾರ (ಮಾ. 19) ಪ್ರಭುದೇವ್ ಏಕಾಏಕಿ ನೇಮಕಾತಿ ಆದೇಶ ಹೊರಡಿಸಿದ್ದಾರೆ.

ಸಿಂಡಿಕೇಟ್ ನಿರ್ಲಕ್ಷಿಸಿ ಜಾರ್ಜಿಯಾ ಜತೆ ಒಪ್ಪಂದ
`ಅಮೆರಿಕದ ಜಾರ್ಜಿಯಾ ಕಾಲೇಜು ಮತ್ತು ಸ್ಟೇಟ್ ಯೂನಿವರ್ಸಿಟಿ ಜತೆ ಬೆಂಗಳೂರು ವಿ.ವಿ.ಯು ಶೈಕ್ಷಣಿಕ ಸಹಭಾಗಿತ್ವದ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಮನವಿ ನೀಡಿದರೂ ಅದನ್ನು ಲೆಕ್ಕಿಸದೇ ಕುಲಪತಿ ಡಾ.ಎನ್.ಪ್ರಭುದೇವ್ ಅವರು ಜಾರ್ಜಿಯ ವಿವಿ ಜತೆ ಒಡಂಬಡಿಕೆಗೆ ಸಹಿ ಹಾಕಿದ್ದಾರೆ~ ಎಂದು ಸಿಂಡಿಕೇಟ್ ಸದಸ್ಯರು ಆಕ್ಷೇಪಿಸಿದ್ದಾರೆ.

`ಜಾರ್ಜಿಯಾ ವಿವಿ ಜತೆ ಉದ್ದೇಶಿತ ಒಡಂಬಡಿಕೆ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಕುಲಪತಿಯವರು ಮಾ. 8ರಂದು ಸದಸ್ಯರಿಗೆ ಸುತ್ತೋಲೆ ಕಳುಹಿಸಿಕೊಟ್ಟಿದ್ದರು. ಆ ಸುತ್ತೋಲೆಯಲ್ಲಿ ಯಾವುದೇ ವಿವರ ನೀಡಿರಲಿಲ್ಲ. ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಮತ್ತು ಚರ್ಚಿಸಲು ವಿಶೇಷ ಸಭೆ ಕರೆಯುವಂತೆ ಮಾ. 12ರಂದು ಮನವಿ ನೀಡಿದ್ದೆವು~ ಎಂದು ಅವರು ತಿಳಿಸಿದ್ದಾರೆ.

`ನಮ್ಮ ಮನವಿಗೆ ಯಾವುದೇ ಪ್ರತಿಕ್ರಿಯೆ ನೀಡದ ಕುಲಪತಿಯವರು ಮಾ. 19ರಂದು ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ಹೀಗೆ ಕುಲಪತಿಯವರು ಏಕಪಕ್ಷೀಯವಾಗಿ ವರ್ತಿಸುವುದಾದರೆ ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಾದರೂ ಏಕೆ ಬೇಕು?~ ಎಂದು ಅವರು ಪ್ರಶ್ನಿಸಿದ್ದಾರೆ.

ಬುಧವಾರ ನಡೆದ ವಿಶೇಷ ಸಭೆಯಲ್ಲಿ ಈ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಪ್ರಭುದೇವ್, ಕುಲಪತಿಯಾಗಿ ನನಗೆ ಪರಮಾಧಿಕಾರವಿದೆಯೆಂದು ಉತ್ತರಿಸಿದರು ಎಂದು ಗೊತ್ತಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.