ADVERTISEMENT

ಬೆಟ್ಟಿಂಗ್ ಜಾಲ ಬಯಲು: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2011, 18:40 IST
Last Updated 26 ಫೆಬ್ರುವರಿ 2011, 18:40 IST
ಬೆಟ್ಟಿಂಗ್ ಜಾಲ ಬಯಲು: ಮೂವರ ಬಂಧನ
ಬೆಟ್ಟಿಂಗ್ ಜಾಲ ಬಯಲು: ಮೂವರ ಬಂಧನ   

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಕುಖ್ಯಾತ ಬುಕ್ಕಿ ಫೈಟರ್ ರವಿ (39) ಮತ್ತು ಆತನ ಸಹಚರರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು  ಕಾರು, ರಿವಾಲ್ವರ್, ಲ್ಯಾಪ್‌ಟಾಪ್ ಮತ್ತು 20 ಲಕ್ಷ ನಗದು ಸೇರಿದಂತೆ ಒಂದು ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಫೈಟರ್ ರವಿ ತನ್ನ ರಕ್ಷಣೆಗಾಗಿ ನೇಮಿಸಿಕೊಂಡಿದ್ದ ಉತ್ತರ ಪ್ರದೇಶದ ವಿಫುಲ್ (28) ಮತ್ತು ಹುಬ್ಬಳ್ಳಿಯ ನೇಕಾರನಗರದ ವಿನೋದ್ (27) ಇತರೆ ಬಂಧಿತ ಆರೋಪಿಗಳು.

‘ವೈಯಾಲಿಕಾವಲ್‌ನ ರವಿ ಉರುಫ್ ಫೈಟರ್ ರವಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಲಾಯಿತು. ಆತ ಮುಂಬೈ ಮತ್ತು ನವದೆಹಲಿಯ ಹಲವು ಬುಕ್ಕಿಗಳೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಿಬು, ನರಹರಿ, ಸೋನಿ, ಮುಖೇಶ್, ಹರೀಶ್, ವಿಮಲ್ ಲೋಕೇಶ್, ವಿನೋದ್ ಮತ್ತು ಅಕ್ಕಿಪೇಟೆಯ ಬಾಬು ಎಂಬ ಬುಕ್ಕಿಗಳು ಫೈಟರ್ ರವಿಯೊಂದಿಗೆ ಪಾಲುದಾರರಾಗಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ತೀವ್ರ ನಿಗಾ ಇಡುವಂತೆ ಎಲ್ಲ  ಠಾಣೆಗಳಿಗೂ ಈಗಾಗಲೇ ಎಚ್ಚರಿಕೆ ನೀಡಲಾಗಿದೆ’ ಎಂದು ಬಿದರಿ ಹೇಳಿದರು.

ಫೈಟರ್ ರವಿ ಒಂದು ವಾರದಿಂದ ಹಲವು ಕ್ರಿಕೆಟ್ ಪಂದ್ಯಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ. ಆತನ ಬಳಿಯಿದ್ದ ರಿವಾಲ್ವರ್, ಎರಡು ಕಾರು, 25 ಮೊಬೈಲ್ ಫೋನ್‌ಗಳು, ಮೂರು ಲ್ಯಾಪ್‌ಟಾಪ್ ಮತ್ತು ವಿವಿಧ ಕಂಪೆನಿಗಳ ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬೆಟ್ಟಿಂಗ್ ವಿರುದ್ಧ ಕ್ರಮ:ಭಾನುವಾರ ನಗರದಲ್ಲಿ ನಡೆಯುವ ಭಾರತ-ಇಂಗ್ಲೆಂಡ್ ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಬೆಟ್ಟಿಂಗ್ ನಡೆದಿದೆ ಎಂಬ ಮಾಹಿತಿ ಸರ್ಕಾರಕ್ಕೆ ಇದೆ. ಅವರೆಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಸಮಾರಂಭವೊಂದರಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗೃಹ ಸಚಿವರೂ ಆರ್.ಅಶೋಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.