ADVERTISEMENT

ಬೆಳೆ ಹಾನಿ: ತುಟ್ಟಿಯಾಯ್ತು ಟೊಮೆಟೊ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ಬೆಳೆ ಹಾನಿ: ತುಟ್ಟಿಯಾಯ್ತು ಟೊಮೆಟೊ
ಬೆಳೆ ಹಾನಿ: ತುಟ್ಟಿಯಾಯ್ತು ಟೊಮೆಟೊ   

ಬೆಂಗಳೂರು: ನಗರದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದುಪ್ಪಟ್ಟಾಗಿದೆ. ಬೆಂಗಳೂರು ಗ್ರಾಮಾಂತರ,  ಮಂಡ್ಯ, ಕೋಲಾರ, ಮುಳಬಾಗಿಲು, ಚಿಂತಾಮಣಿ ಮತ್ತು ಮಾಲೂರುಗಳಲ್ಲಿ ಕಳೆದ ತಿಂಗಳು ಸುರಿದ ಮಳೆಯಿಂದಾಗಿ ಟೊಮೆಟೊ ಗಿಡಗಳು ಹಾಳಾಗಿವೆ. ಹಾಗಾಗಿ, ಮಾರುಕಟ್ಟೆಗೆ ಹೆಚ್ಚು ಟೊಮೆಟೊ ಸರಬರಾಜು ಆಗುತ್ತಿಲ್ಲ. ಇದರಿಂದಾಗಿ ಬೆಲೆ ಗಣನೀಯವಾಗಿ ಹೆಚ್ಚಿದೆ.

ದೊಡ್ಡಬಳ್ಳಾಪುರ, ಹೊಸಕೋಟೆ, ಆನೇಕಲ್‌, ನೆಲಮಂಗಲ ಮತ್ತು ರಾಮನಗರದ ಪ್ರದೇಶಗಳಲ್ಲಿ ಬೆಳೆಯುವ ಗೋರಿಕಾಯಿ, ಹೂಕೋಸು, ಆಲೂಗಡ್ಡೆಯ ಬೆಳೆಗಳ ಇಳುವರಿ ಉತ್ತಮವಾಗಿ ಬರುತ್ತಿದೆ. ಈ ತರಕಾರಿಗಳು ಮಾರುಕಟ್ಟೆಗೆ ಅಧಿಕವಾಗಿ ಸರಬರಾಜಾಗುತ್ತಿವೆ. ಹಾಗಾಗಿ ಬೆಲೆಗಳು ಕಡಿಮೆ ಆಗಿವೆ.
ಬದನೆಕಾಯಿ, ಕ್ಯಾಪ್ಸಿಕಮ್‌, ನವಿಲುಕೋಸು, ಈರುಳ್ಳಿಯ ಬೆಲೆಗಳಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ.

‘ಗುಣಮಟ್ಟದ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಬೆಲೆ ಹೆಚ್ಚಿರುವುದರಿಂದ ಸ್ವಲ್ಪ ಲಾಭವೂ ಸಿಗುತ್ತಿದೆ’ ಎನ್ನುತ್ತಾರೆ ಕೆ.ಆರ್.ಮಾರುಕಟ್ಟೆಯ ತರಕಾರಿ ವ್ಯಾಪಾರಿ ಮಹಮ್ಮದ್‌ ಇಕ್ಬಾಲ್‌.

ADVERTISEMENT

‘ಪ್ರತಿ ವಾರಕ್ಕೆ 2 ಕೆ.ಜಿ. ಟೊಮೆಟೊ ಖರೀದಿಸುತ್ತಿದ್ದೆ. ಬೆಲೆ ಹೆಚ್ಚಿದ್ದರಿಂದ ಬೇರೆ ತರಕಾರಿಗಳನ್ನು ಹೆಚ್ಚು ಕೊಂಡು, 1 ಕೆ.ಜಿ. ಟೊಮೆಟೊ ಖರೀದಿ ಮಾಡಿದೆ’ ಎಂದು ಚಿಕ್ಕಪೇಟೆಯ ಸಾವಿತ್ರಮ್ಮ ತಿಳಿಸಿದರು.

‘ಒಂದು ಎಕರೆಯಲ್ಲಿ ಟೊಮೆಟೊ ಬೆಳೆ ಹಾಕಿದ್ದೆ. ಮಳೆಯಿಂದ ಶೇ 60ರಷ್ಟು ಬೆಳೆ ಹಾಳಾಯಿತು. ಉಳಿದಿರುವ ಭಾಗದ ಇಳುವರಿಗೆ ಉತ್ತಮ ಬೆಲೆ ಸಿಗುತ್ತಿದೆ. ಪ್ರತಿ 15 ಕೆ.ಜಿ. ಗೆ ₹ 700 ರಿಂದ ₹ 900 ಗೆ ಮಾರುತ್ತಿದ್ದೇನೆ’ ಎಂದು ಚಿಂತಾಮಣಿ ತಾಲ್ಲೂಕಿನ ರೈತ ಶ್ರೀನಿವಾಸ ಆಲಂಬಗಿರಿ ತಿಳಿಸಿದರು. ‘ನೀರಿನ ಸೌಲಭ್ಯ ಇರುವವರು ಟೊಮೆಟೊ ಗಿಡಗಳ ನಾಟಿ ಆರಂಭಿಸಿದ್ದಾರೆ. ಅವುಗಳ ಇಳುವರಿ ಬರಲು ಎರಡು ತಿಂಗಳು ಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.