ಬೆಂಗಳೂರು: ಚಿನ್ನಾಭರಣ ವ್ಯಾಪಾರಿ ನಿತೇಶ್ ಬೇರಾ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಮಂಗಳವಾರ ನ್ಯಾಯಾಧೀಶರ ಎದುರು ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಂಡರು.
ಆರೋಪಿಗಳಾದ ಕಬ್ಬನ್‌ಪೇಟೆಯ ರಾಕೇಶ್‌ರಾಜ್ (24), ಶಶಿಕಾಂತ್ (24), ಅವೆನ್ಯೂ ರಸ್ತೆಯ ಗಿರಿ (20), ಕಿಲಾರಿ ರಸ್ತೆಯ ಯೋಗೇಶ (20) ಮತ್ತು ಕೆ.ಆರ್.ಪುರ ಬಳಿಯ ಆನಂದಪುರದ ಮೈಕಲ್ ಜಾನ್ (20) ಅವರನ್ನು ಒಂದನೇ ಎಸಿಎಂಎಂ ನ್ಯಾಯಾಧೀಶರ ಎದುರು ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸ್ನೇಹಿತರಾದ ಯೋಗೇಶ ಮತ್ತು ಗಿರಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟಿದ್ದರು. ಶಶಿಕಾಂತ್, ನಿತೇಶ್ ಅವರ ಅಂಗಡಿಯ ಸಮೀಪದ ಮತ್ತೊಂದು ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ. ವಕೀಲನಾದ ರಾಕೇಶ್‌ರಾಜ್ ಮನೆಯ ಸಮೀಪದ ಜಿಮ್ ಸೆಂಟರ್‌ಗೆ ಹೋಗುತ್ತಿದ್ದ. ಇತರೆ ಆರೋಪಿಗಳು ಸಹ ಅದೇ ಜಿಮ್ ಸೆಂಟರ್‌ಗೆ ಬರುತ್ತಿದ್ದ ಕಾರಣ ಪರಸ್ಪರರು ಪರಿಚಿತರಾಗಿದ್ದರು. ಮೋಜಿನ ಜೀವನ ನಡೆಸಲು ಬೇಕಿದ್ದ ಹಣ ಸಂಪಾದನೆಗಾಗಿ ಆರೋಪಿಗಳು ಈ ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್‌ಗಳಾದ ಬಿ.ಬಾಲರಾಜು, ಬಾಳೇಗೌಡ, ಎಸ್.ಕೆ.ಮಾಲತೇಶ್. ಕೆ.ಎಸ್.ನಾಗರಾಜು, ತಮ್ಮಯ್ಯ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಸುಳಿವು ನೀಡಿದ ಮೊಬೈಲ್: ನಿತೇಶ್ ಅವರನ್ನು ಪರಿಚಿತ ವ್ಯಕ್ತಿಗಳೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ಇತ್ತು. ಈ ಹಿನ್ನೆಲೆಯಲ್ಲಿ ಅವರ ಅಂಗಡಿಯ ಅಕ್ಕಪಕ್ಕದ ರಸ್ತೆಗಳಲ್ಲಿನ ಅಂಗಡಿಗಳಲ್ಲಿನ ಕೆಲಸಗಾರರ ಮೇಲೆ ನಿಗಾ ವಹಿಸಲಾಗಿತ್ತು. ಕೊಲೆ ಘಟನೆಯ ನಂತರ ಶಶಿಕಾಂತ್ ಮತ್ತು ಯೋಗೇಶ ನಾಪತ್ತೆಯಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಅವರ ಮೊಬೈಲ್ ಸಂಖ್ಯೆ ಮತ್ತು ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಘಟನೆ ನಡೆದ ದಿನ ರಾತ್ರಿ ಯೋಗೇಶ, ನಿತೇಶ್ ಮನೆಯ ಬಳಿ ಬಂದು ಅವರ ಪತ್ನಿಯಿಂದ ಹಣ ಹಾಗೂ ಚಿನ್ನಾಭರಣ ಪಡೆದುಕೊಂಡು ಹೋಗಿದ್ದ. ಅವರ ಮನೆ ಇರುವ ಭಂಗಿಯಪ್ಪಲೇಔಟ್ ಸುತ್ತಮುತ್ತಲಿನ ಮೊಬೈಲ್ ಗೋಪುರಗಳ (ಟವರ್) ಮೂಲಕ ಯೋಗೇಶನ ಮೊಬೈಲ್‌ಗೆ ಕರೆಗಳು ಬಂದು ಹೋಗಿದ್ದ ಸಂಗತಿ ಗೊತ್ತಾಯಿತು. ಈ ಸುಳಿವು ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂತು ಎಂದರು.
ಪೊಲೀಸ್ ಜೀಪು ಕಂಡು ಬೆದರಿದ್ದ: ಆರೋಪಿಗಳು ನಿತೇಶ್ ಅವರಿಂದ ಅಂಗಡಿಯ ಕೆಲಸದ ಹುಡುಗ ಮಿಥುನ್ ಎಂಬಾತನಿಗೂ ಕರೆ ಮಾಡಿಸಿ ಆಭರಣಗಳನ್ನು ನೀಡುವಂತೆ ಹೇಳಿಸಿದ್ದರು. ಘಟನೆ ನಡೆದ ದಿನ ನಿತೇಶ್‌ರ ಅಂಗಡಿಯ ಸುರಕ್ಷತಾ ಕಪಾಟಿನಲ್ಲಿ ಸುಮಾರು 16 ಕೆ.ಜಿ ಚಿನ್ನದ ಆಭರಣಗಳಿದ್ದವು. ಆ ಸುರಕ್ಷತಾ ಕಪಾಟಿನ ಮತ್ತು ಅಂಗಡಿಯ ಕೀಗಳನ್ನು ಆರೋಪಿಗಳು ನಿತೇಶ್‌ರಿಂದ ಕಿತ್ತುಕೊಂಡು ಯೋಗೇಶನಿಗೆ ಕೊಟ್ಟಿದ್ದರು.
ಯೋಗೇಶ ಆಭರಣಗಳನ್ನು ತೆಗೆದುಕೊಳ್ಳಲು ಕೀಗಳ ಜತೆ ಅಂಗಡಿ ಬಳಿ ಬರುತ್ತಿದ್ದಾಗ ಆತನ ವಾಹನದ ಹಿಂದೆಯೇ ಪೊಲೀಸ್ ಜೀಪು ಒಂದು ಅನಿರೀಕ್ಷಿತವಾಗಿ ಬಂದಿತು. ಇದರಿಂದ ಆತಂಕಗೊಂಡ ಆತ ಪೊಲೀಸರಿಗೆ ಅಪಹರಣದ ಸಂಗತಿ ಗೊತ್ತಾಗಿದೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.