ADVERTISEMENT

ಬೈಕ್‌ ಅಪಘಾತದಲ್ಲಿ ಯುವಕ ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಜೆ.ಪಿ.ನಗರ 15ನೇ ಅಡ್ಡರಸ್ತೆಯಲ್ಲಿ ಬುಧವಾರ ರಸ್ತೆ ವಿಭಜಕಕ್ಕೆ ಬೈಕ್‌ ಗುದ್ದಿಸಿ ಸುರೇಶ್‌ (23) ಎಂಬ ಯುವಕ ಮೃತಪಟ್ಟಿದ್ದು, ಇಂದಿರಾನಗರ ಬಳಿಯ ಸುಧಾಮನಗರದಲ್ಲಿ ಟ್ಯಾಂಕರ್‌ ಡಿಕ್ಕಿ ಹೊಡೆದು ಸೆಲ್ವರಾಜ್ (34) ಎಂಬುವರು ಸಾವನ್ನಪ್ಪಿದ್ದಾರೆ.

ಹರಿಶ್ಚಂದ್ರಘಾಟ್‌ ಬಳಿ ಸಂಭವಿಸಿದ ಮತ್ತೊಂದು ಅಪಘಾತದಲ್ಲಿ ಬೈಕ್‌ ಡಿಕ್ಕಿ ಹೊಡೆದು ಮುರಳಿ (43) ಎಂಬ ಆಟೊ ಚಾಲಕ ಮೃತಪಟ್ಟಿದ್ದಾರೆ.
ಹೊಸಕೆರೆಹಳ್ಳಿ ನಿವಾಸಿಯಾದ ಸುರೇಶ್‌, ಸ್ನೇಹಿತ ಮುನಿರಾಜು ಜತೆ ಅಕ್ಕಿ ಮೂಟೆ ತರಲು ಬೈಕ್‌ನಲ್ಲಿ ಜೇಡಿಮರ ವರ್ತುಲ ರಸ್ತೆಗೆ ಬಂದಿದ್ದರು.

ಅಕ್ಕಿ ಮೂಟೆಯೊಂದಿಗೆ ರಾತ್ರಿ 11.15ರ ಸುಮಾರಿಗೆ ಮನೆಗೆ ವಾಪಸ್ ಹೋಗುವಾಗ ವೇಗವಾಗಿ ಬೈಕ್‌ ಚಾಲನೆ ಮಾಡುತ್ತಿದ್ದ ಸುರೇಶ್‌, ಜೆ.ಪಿ.ನಗರ 15ನೇ ಅಡ್ಡರಸ್ತೆಯಲ್ಲಿ ತಿರುವು ಪಡೆಯುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡಿದ್ದಾರೆ.

ಹೀಗಾಗಿ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ ಅವರು ಮೊದಲು ರಸ್ತೆ ಬದಿಯ ಜಾಹೀರಾತು ಫಲಕಕ್ಕೆ ಬೈಕ್‌ ಗುದ್ದಿಸಿದ್ದಾರೆ. ನಂತರವೂ ಮುಂದೆ ಸಾಗಿದ ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆಯಲ್ಲಿ ಸುರೇಶ್‌ ಅವರು ಸುಮಾರು 12 ಅಡಿಯಷ್ಟು ಮೇಲೆ ಎಗರಿ ಬಿದ್ದರು. ಇದರಿಂದಾಗಿ ತಲೆಗೆ ಗಂಭೀರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಅಕ್ಕಿ ಮೂಟೆ ಹಿಡಿದುಕೊಂಡು ಹಿಂದೆ ಕುಳಿತಿದ್ದ ಮುನಿರಾಜು ಅವರ ತಲೆ ಮತ್ತು ಹೊಟ್ಟೆ ಭಾಗಕ್ಕೆ ಪೆಟ್ಟಾಗಿದೆ. ಅವರನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

‘ಸುರೇಶ್‌, ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಅಲ್ಲದೇ, ಅವರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ’ ಎಂದು ಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇಂದಿರಾನಗರ: ಸುಧಾಮನಗರದಲ್ಲಿ ನೀರಿನ ಟ್ಯಾಂಕರ್‌ ಡಿಕ್ಕಿ ಹೊಡೆದು ಸಾವನ್ನಪ್ಪಿದ ಸೆಲ್ವರಾಜ್‌ ತಮಿಳುನಾಡು ಮೂಲದವರು. ಆರು ತಿಂಗಳ ಹಿಂದೆ ಜೆಸಿಂತಾ ಎಂಬುವರನ್ನು ವಿವಾಹವಾಗಿದ್ದ ಅವರು ಸುಧಾಮನಗರ ಆರನೇ ಅಡ್ಡರಸ್ತೆಯಲ್ಲಿ ವಾಸವಾಗಿದ್ದರು.

ಗಾರೆ ಕೆಲಸ ಮಾಡುತ್ತಿದ್ದ ಅವರು ಕೆಲಸ ಮುಗಿಸಿಕೊಂಡು ರಾತ್ರಿ 8.30ರ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ಸುಧಾಮನಗರಕ್ಕೆ ಬಂದಿದ್ದಾರೆ. ಮನೆಗೆ ಹೋಗಲು ರಸ್ತೆ ದಾಟುವಾಗ ಟ್ಯಾಂಕರ್‌ ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಳಗೆ ಬಿದ್ದ ಅವರ ಹೊಟ್ಟೆ ಮೇಲೆ ವಾಹನದ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಚಾಲಕ ಆಸಿನ್‌ (26) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲ್ಲೇಶ್ವರ: ಹರಿಶ್ಚಂದ್ರಘಾಟ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ಮುರಳಿ ಶ್ರೀರಾಂಪುರದ ನಿವಾಸಿ. ಬಾಡಿಗೆ ಆಟೊ ಓಡಿಸುತ್ತಿದ್ದ ಅವರು, ಮಲ್ಲೇಶ್ವರದಲ್ಲಿರುವ ಮಾಲೀಕರ ಮನೆಗೆ ಆಟೊ ಬಿಟ್ಟು ಮನೆಗೆ ಹೋಗಲು ರಾತ್ರಿ 9 ಗಂಟೆ ಸುಮಾರಿಗೆ ಬಸ್‌ ನಿಲ್ದಾಣದ ಕಡೆಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ವೇಗವಾಗಿ ಬಂದ ಬೈಕ್‌ (ಕೆಎ05 ಇಯು 422) ಅವರಿಗೆ ಡಿಕ್ಕಿ ಹೊಡೆಯಿತು.

ಆಗ ಪಾದಚಾರಿ ಮಾರ್ಗದ ಮೇಲೆ ಬಿದ್ದ ಅವರ ತಲೆಗೆ ತೀವ್ರ ಪೆಟ್ಟಾಯಿತು. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಮುರಳಿ ಕೊನೆಯುಸಿರೆಳೆದರು. ಬೈಕ್‌ ಸವಾರ ಗೋವಿಂದರಾಜು ಎಂಬಾತನನ್ನು ಬಂಧಿಸಲಾಗಿದೆ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.