ADVERTISEMENT

ಬೈಕ್‌ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಸೆರೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 19:46 IST
Last Updated 27 ಮೇ 2018, 19:46 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ಇಂದಿರಾ ನಗರದ 100 ಅಡಿ ರಸ್ತೆಯಲ್ಲಿ ಯುವತಿ ಜತೆ ಅನುಚಿತವಾಗಿ ವರ್ತಿಸಿ, ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಜೀವನ್ ಬಿಮಾ ನಗರ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ನಿವಾಸಿಗಳಾದ ಬಿಲಾಲ್ ಹುಸೈನ್ (23) ಹಾಗೂ ಅಲಿ ಅಹ್ಮದ್ (28) ಬಂಧಿತರು. ಅವರಿಂದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ, ತಮ್ಮ ಸ್ನೇಹಿತನ ಜತೆಯಲ್ಲಿ ಊಟಕ್ಕೆಂದು ಮೇ 8ರಂದು ತಡರಾತ್ರಿ ಎಂಪೈರ್‌ ಹೋಟೆಲ್‌ಗೆ ಹೋಗಿದ್ದರು. ಊಟ ಮುಗಿಸಿಕೊಂಡು ಮೇ 9ರಂದು ನಸುಕಿನಲ್ಲಿ ಅವರಿಬ್ಬರು ಮನೆಯತ್ತ ಹೊರಟಿದ್ದರು. ಅದೇ ವೇಳೆ, ಅವರಿಬ್ಬರನ್ನು ಅಡ್ಡಗಟ್ಟಿದ್ದ ಆರೋಪಿಗಳು ಕೃತ್ಯ ಎಸಗಿದ್ದರು ಎಂದು ಪೊಲೀಸರು ತಿಳಿಸಿದರು.

ADVERTISEMENT

ಯುವತಿಯ ಕೈ ಹಿಡಿದು ಹಿಡಿದು ಎಳೆದಾಡಿದ್ದ ಆರೋಪಿಗಳು, ಅದನ್ನು ಪ್ರಶ್ನಿಸಿದ್ದ ಸ್ನೇಹಿತನ ಮೇಲೂ ಹಲ್ಲೆ ಮಾಡಿದ್ದರು. ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.

ಅದಾದ ನಂತರ, ಯುವತಿಯನ್ನು ಮನೆಗೆ ಡ್ರಾಪ್‌ ಮಾಡಲೆಂದು ಸ್ನೇಹಿತ ತನ್ನ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ. ದಾರಿ ಮಧ್ಯೆ ಪುನಃ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಜಗಳ ತೆಗೆದಿದ್ದರು. ನಂತರ, ಇಬ್ಬರಿಗೂ ಕಲ್ಲಿನಿಂದ ಹೊಡೆದು ಕೊಲೆಗೆ ಯತ್ನಿಸಿದರು’ ಎಂದು ಪೊಲೀಸರು ವಿವರಿಸಿದರು.

ಘಟನೆ ಸಂಬಂಧ ದೂರು ನೀಡಿದ್ದ ಯುವತಿಯ ಸ್ನೇಹಿತ, ಆರೋಪಿಗಳು ಬಳಸಿದ್ದ ಹೊಂಡಾ ಡಿಯೊ ದ್ವಿಚಕ್ರ ವಾಹನ ನೋಂದಣಿ ಸಂಖ್ಯೆ ತಿಳಿಸಿದ್ದರು. ಅದರ ಮೂಲಕ ಮಾಹಿತಿ ಕಲೆಹಾಕಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದೆವು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.