ADVERTISEMENT

ಬೈಯಪ್ಪನಹಳ್ಳಿ ಕೆರೆಗೆ ವಿಷವಾದ ಕಸ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಬೆಂಗಳೂರು: `ನಾಲ್ಕು ವರ್ಷದ ಹಿಂದೆ ಸುತ್ತಮುತ್ತಲಿನ ನೂರಾರು ಎಕರೆ ಜಮೀನಿಗೆ ನೀರುಣಿಸುತ್ತಿದ್ದ ಕೆರೆ ಈಗ ವಿಷದ ಗುಂಡಿಯಾಗಿದೆ. ತ್ಯಾಜ್ಯ ವಿಲೇವಾರಿ ಘಟಕದಿಂದ ಹರಿದು ಬರುವ ಕೊಳಚೆ ನೀರು ಕೆರೆ ಸೇರುತ್ತಿದೆ. ಕೆರೆಯ ನೀರನ್ನು ಕುಡಿದ ಪ್ರಾಣಿಗಳು ಸಾಯುತ್ತಿವೆ. ಪ್ರತಿದಿನ ಕೆರೆಯ ದಡದಲ್ಲಿ ಒಂದಲ್ಲ ಒಂದು ಪ್ರಾಣಿಗಳು ಸತ್ತು ಬೀಳುವುದು ಈಗ ಸಾಮಾನ್ಯವಾಗಿದೆ...~

ಮಂಡೂರು ಬಳಿಯ ತ್ಯಾಜ್ಯ ವಿಲೇವಾರಿ ಘಟಕದ ಕಾರಣದಿಂದ ಬೈಯಪ್ಪನಹಳ್ಳಿ ಕೆರೆಗೆ ಸದ್ಯ ಒದಗಿರುವ ಸ್ಥಿತಿಯ ಬಗ್ಗೆ ಬೈಯಪ್ಪನಹಳ್ಳಿಯ ಗ್ರಾಮಸ್ಥ ಬೆಟ್ಟಪ್ಪ ವಿಷಾದ ವ್ಯಕ್ತಪಡಿಸಿದ್ದು ಹೀಗೆ. ತ್ಯಾಜ್ಯ ವಿಲೇವಾರಿ ಘಟಕದಿಂದ ಹೊರ ಬರುವ ಕೊಳಚೆ ನೀರು ಬೈಯ್ಯಪ್ಪನಹಳ್ಳಿ ಕೆರೆಯನ್ನು ಸೇರುತ್ತಿರುವುದರಿಂದ ಗ್ರಾಮಸ್ಥರು ಈಗ ಹಲವು ತೊಂದರೆಗಳನ್ನು ಎದುರಿಸುವಂತಾಗಿದೆ.

`ಮಂಡೂರಿನ ಗುಡ್ಡಕ್ಕೆ ಕಸ ತಂದು ಸುರಿಯಲು ಆರಂಭಿಸಿದ ದಿನಗಳಲ್ಲಿ ಇದು ಇಷ್ಟು ದೊಡ್ಡ ಸಮಸ್ಯೆಯಾಗುತ್ತದೆ ಎಂದು ಗೊತ್ತಿರಲಿಲ್ಲ. ಕಸದಿಂದ ವಿದ್ಯುತ್ ಉತ್ಪಾದಿಸಿ ಸುತ್ತಮುತ್ತಲಿನ ಹಳ್ಳಿಗಳಿಗೆ ಪೂರೈಸುತ್ತಾರೆ ಎಂಬ ಮಾತು ಆಗ ಹರಿದಾಡುತ್ತಿತ್ತು. ಈಗ ವಿದ್ಯುತ್ ಪೂರೈಕೆಯೂ ಇಲ್ಲ, ಗ್ರಾಮದ ಕೆರೆಯ ನೀರೂ ಶುದ್ಧವಾಗಿಲ್ಲ~ ಎಂದು ಅವರು ದೂರಿದರು.

`ಮೇಯಲು ಬಿಟ್ಟ ಜಾನುವಾರುಗಳು ಕೆರೆಯ ನೀರನ್ನು ಕುಡಿದು ಸಾಯುತ್ತಿವೆ. ಇಲ್ಲಿಯವರೆಗೆ ಸಾಕಷ್ಟು ಸಂಖ್ಯೆಯಲ್ಲಿ ಹಸುಗಳು, ಕುರಿಗಳು, ನಾಯಿಗಳು ಸೇರಿದಂತೆ ಅನೇಕ ಪ್ರಾಣಿ-ಪಕ್ಷಿಗಳು ಕೆರೆಯ ನೀರನ್ನು ಕುಡಿದು ಸತ್ತಿವೆ. ಇತ್ತೀಚೆಗೆ ಕೆರೆಯ ಹೂಳನ್ನು ತೆಗೆಸಲಾಗಿದೆ. ಆದರೆ, ತ್ಯಾಜ್ಯದ ವಿಷಯುಕ್ತ ನೀರು ಕೆರೆ ಸೇರುತ್ತಿರುವುದರಿಂದ ಕೆರೆಯ ನೀರು ಯಾವುದಕ್ಕೂ ಉಪಯೋಗಕ್ಕೆ ಬಾರದಂತಾಗಿದೆ.

ವಿಷಯುಕ್ತ ನೀರು ಕೆರೆಗೆ ಹರಿದು ಬರುತ್ತಿರುವುದರಿಂದ ಒಂದೇ ಒಂದು ಜಲಚರವೂ ಕೆರೆಯಲ್ಲಿ ಕಾಣಸಿಗುವುದಿಲ್ಲ~ ಎಂದು ಅವರು ಹೇಳಿದರು. `ಪ್ರತಿದಿನ ಕಸ ಬಂದು ಬೀಳುತ್ತಲೇ ಇದೆ. ಕಸವನ್ನು ತಂದು ಇಲ್ಲಿ ಗುಡ್ಡೆ ಹಾಕಲಾಗುತ್ತಿದೆಯೇ ಹೊರತು ಅದರ ಸಂಸ್ಕರಣೆ ಆಗುತ್ತಿಲ್ಲ. ಇಲ್ಲಿ ಸುರಿಯುತ್ತಿರುವ ಕಸವನ್ನು ಮುಂದೆ ಬಯೊಗ್ಯಾಸ್ ಉತ್ಪಾದನೆಗೆ ಬಳಸಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ, ಆ ಯೋಜನೆ ಎಷ್ಟರ ಮಟ್ಟಿಗೆ ಜಾರಿಗೆ ಬರುತ್ತದೋ ಗೊತ್ತಿಲ್ಲ. ಆದರೆ, ನಮ್ಮ ಊರ ಕೆರೆಯಂತೂ ದಿನದಿಂದ ದಿನಕ್ಕೆ ಕೊಳಚೆಯನ್ನು ತುಂಬಿಕೊಳ್ಳುತ್ತಿದೆ~ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಗ್ರಾಮಸ್ಥ ನಾಗರಾಜ್.

`ಕೆರೆ ನೀರು ಮಲಿನಗೊಳ್ಳುತ್ತಿರುವುದರಿಂದ ಈ ಪ್ರದೇಶದ ಅಂತರ್ಜಲದಲ್ಲೂ ವಿಷಕಾರಿ ಅಂಶ ಹೆಚ್ಚಾಗಿದೆ. ಕೊಳವೆಬಾವಿಗಳ ನೀರು ಕೂಡಾ ಮಲಿನವಾಗಿರುವುದು ನೀರಿನ ಪರೀಕ್ಷೆಯಿಂದ ಗೊತ್ತಾಗಿದೆ. ಆದರೆ, ಗೊತ್ತಿದ್ದೂ ಈ ವಿಷಕಾರಿ ನೀರನ್ನೇ ಕುಡಿಯುವುದು ಈಗ ಅನಿವಾರ್ಯವಾಗಿದೆ. ಸರ್ಕಾರ ಶುದ್ಧ ಕುಡಿಯುವ ನೀರಿನ್ನು ಇದುವರೆಗೂ ಒದಗಿಸಿಲ್ಲ. ಪಾಲಿಕೆ ಹಾಗೂ ಮುಖ್ಯಮಂತ್ರಿಯವರು ಕೇವಲ ಭರವಸೆ ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ~ ಎಂದು ಗ್ರಾಮಸ್ಥ ಕುಮಾರ್ ದೂರಿದರು.
 

ADVERTISEMENT

4,000 ಟನ್ ಕಸ ಹೊರಕ್ಕೆ

ಬೆಂಗಳೂರು: ಹಬ್ಬದ ತ್ಯಾಜ್ಯವನ್ನು ಸಾಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೆಚ್ಚುವರಿ ವ್ಯವಸ್ಥೆ ಮಾಡಿಕೊಂಡಿದ್ದು, ಬುಧವಾರ 395 ಲಾರಿಗಳಲ್ಲಿ 3870 ಟನ್ ಕಸ ಸಾಗಾಟ ಮಾಡಲಾಗಿದೆ.

ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ.ಅವೆನ್ಯೂ ರಸ್ತೆ ಒಂದರಿಂದಲೇ ಬೆಳಗಿನಿಂದ ಸಂಜೆವರೆಗೆ 16 ಲಾರಿಗಳು ಕಸ ಸಾಗಿಸಿದವು. ಚಾಮರಾಜಪೇಟೆಯಲ್ಲಿ ಸಹ ಬಿದ್ದಿದ್ದ ಕಸದ ರಾಶಿಯನ್ನು ಎತ್ತಲಾಗಿದ್ದು, ಸ್ವಚ್ಛಗೊಳಿಸಲಾಗಿದೆ. ಕೆ.ಆರ್. ಮಾರುಕಟ್ಟೆಯಲ್ಲಿ ಕಸದ ಲಾರಿಗಳು ಓಡಾಡಿದರೂ ತ್ಯಾಜ್ಯ ಸಂಪೂರ್ಣವಾಗಿ ಕರಗಲಿಲ್ಲ.

ಇಂದಿರಾನಗರ ಮತ್ತು ಹಲಸೂರು ಭಾಗಗಳ ಕಸ ವಿಲೇವಾರಿಯಲ್ಲಿ ಸಮಸ್ಯೆ ಎದುರಾಗಿದ್ದು, ಸಂಜೆವರೆಗೆ ಕಸ ರಸ್ತೆಗಳಲ್ಲಿ ಹರಡಿಕೊಂಡಿತ್ತು. ಎಲ್ಲ ವಲಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿ ಕಸ ವಿಲೇವಾರಿ ಉಸ್ತುವಾರಿ ನೋಡಿಕೊಂಡರು. ಎಲ್ಲ ವಲಯಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದು ಎಲ್ಲಿಯೂ ಸಮಸ್ಯೆ ಉದ್ಭವ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ರಜನೀಶ್ ಗೋಯಲ್ ತಿಳಿಸಿದ್ದಾರೆ.

`ಆರೋಗ್ಯ ಕೆಡುತ್ತಿದೆ~:`ಗ್ರಾಮದಲ್ಲಿ ಸುಮಾರು 300 ಮನೆಗಳಿವೆ. ಕೆರೆಯ ದಡದಲ್ಲೇ ಗ್ರಾಮವಿರುವುದರಿಂದ ಗ್ರಾಮದ ಜನರ ಮೇಲೆ ತ್ಯಾಜ್ಯದಿಂದ ಬರುವ ಕೊಳಚೆ ನೀರಿನ ಕೆಟ್ಟ ಪರಿಣಾಮ ಹೆಚ್ಚಾಗುತ್ತಿದೆ. ಕೆರೆಯ ನೀರು ಮಲಿನವಾಗಿರುವುದರಿಂದ ಹಾಗೂ ಕಸ ವಿಲೇವಾರಿ ಘಟಕದಿಂದ ಬೀಸುವ ಕೆಟ್ಟ ಗಾಳಿಯಿಂದ ಗ್ರಾಮದ ಜನ ಆಗಾಗ ಅನಾರೋಗ್ಯದಿಂದ ಬಳಲುವುದು ಹೆಚ್ಚಾಗುತ್ತಿದೆ.

ಅಲರ್ಜಿ, ಚರ್ಮದಲ್ಲಿ ಕಡಿತ, ಉಸಿರಾಟದ ತೊಂದರೆಯಂಥ ಸಮಸ್ಯೆಗಳು ಗ್ರಾಮದಲ್ಲಿ ಸಾಮಾನ್ಯವಾಗಿವೆ. ನಿಯಮಿತ ಆರೋಗ್ಯ ತಪಾಸಣೆಯ ಸರ್ಕಾರದ ಭರವಸೆ ಇನ್ನೂ ಭರವಸೆಯಾಗೇ ಉಳಿದಿದೆ~
-ಚಿಕ್ಕ ಚಿಕ್ಕಣ್ಣ,
ಗ್ರಾಮಸ್ಥರು, ಬೈಯಪ್ಪನಹಳ್ಳಿ

 

`ಮಾನವೀಯತೆಯಿಂದ ಯೋಚಿಸಿ~: `ಮಂಡೂರು ಗುಡ್ಡದಲ್ಲಿ ಕಸ ಸುರಿಯಲು ಬಿಟ್ಟಿದೇ ನಮ್ಮ ಮೊದಲ ತಪ್ಪು. ಸ್ಥಳೀಯರಿಗೆ ಮಾರಕವಾಗುವ ಇಂಥ ಯೋಜನೆಗಳನ್ನು ರೂಪಿಸುವ ಮುನ್ನ ಸರ್ಕಾರ ಮಾನವೀಯತೆಯ ದೃಷ್ಟಿಯಿಂದ ಯೋಚಿಸಬೇಕು.

ಬೆಂಗಳೂರಿನ ಜನ ಆರೋಗ್ಯವಾಗಿದ್ದರೆ ಸಾಕು, ಉಳಿದವರು ಏನಾದರೂ ಆಗಲಿ ಎಂಬಂತೆ ಸರ್ಕಾರ ನಡೆದುಕೊಳ್ಳುತ್ತಿದೆ. ಜನವರಿಯೊಳಗೆ ಕಸ ತಂದು ಸುರಿಯುವುದನ್ನು ನಿಲ್ಲಿಸುವುದಾಗಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ. ಆ ನಂತರವೂ ಕಸ ಸುರಿದರೆ ಹೋರಾಟದ ದಾರಿ ಬಿಟ್ಟು ಬೇರೆ ಪರಿಹಾರವೇ ಇಲ್ಲ
-ಚನ್ನಪ್ಪ,
ಗ್ರಾಮಸ್ಥರು, ಬೈಯಪ್ಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.