ADVERTISEMENT

ಬ್ಯಾಂಕ್‌ಗಳಲ್ಲಿ ಬಳಕೆಯಾಗದ ಕನ್ನಡ ಟ್ವಿಟರ್‌ ಅಭಿಯಾನಕ್ಕೆ ಭಾರಿ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 20:07 IST
Last Updated 14 ಜುಲೈ 2017, 20:07 IST
ಬ್ಯಾಂಕ್‌ಗಳಲ್ಲಿ ಬಳಕೆಯಾಗದ ಕನ್ನಡ ಟ್ವಿಟರ್‌ ಅಭಿಯಾನಕ್ಕೆ ಭಾರಿ ಸ್ಪಂದನೆ
ಬ್ಯಾಂಕ್‌ಗಳಲ್ಲಿ ಬಳಕೆಯಾಗದ ಕನ್ನಡ ಟ್ವಿಟರ್‌ ಅಭಿಯಾನಕ್ಕೆ ಭಾರಿ ಸ್ಪಂದನೆ   

ಬೆಂಗಳೂರು: ರಾಜ್ಯದ ಗ್ರಾಹಕರಿಗೆ ಬ್ಯಾಂಕ್‌ಗಳಲ್ಲಿ  ಕನ್ನಡದಲ್ಲಿ ಸೇವೆಗಳು ಸಿಗದೇ ಆಗುತ್ತಿರುವ ತೊಂದರೆ ಬಗ್ಗೆ ಗಮನ ಸೆಳೆಯುವ ಸಲುವಾಗಿ ‘ಕನ್ನಡ ಗ್ರಾಹಕರ ಕೂಟ’ ಇತ್ತೀಚೆಗೆ  ಹಮ್ಮಿಕೊಂಡಿದ್ದ  ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ.

ಎಲ್ಲ ಬ್ಯಾಂಕುಗಳು ಕಡ್ಡಾಯವಾಗಿ ಆಯಾ ರಾಜ್ಯದ ಭಾಷೆಯಲ್ಲಿ ಸೇವೆ ಒದಗಿಸಬೇಕು ಎಂಬ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)  ನಿಯಮ ಜಾರಿಯಲ್ಲಿದ್ದರೂ ರಾಜ್ಯದ ಬಹುತೇಕ ಬ್ಯಾಂಕ್‌ಗಳಲ್ಲಿ ಕನ್ನಡದಲ್ಲಿ ಸೇವೆ ಲಭಿಸುತ್ತಿಲ್ಲ. ಗ್ರಾಹಕರು   ಜುಲೈ 11ರಂದು ‘NammaBankuKannadaBeku’ ಮತ್ತು  “BankInMyLanguage” ಹ್ಯಾಷ್ ಟ್ಯಾಗ್ ಬಳಸಿಕೊಂಡು ಬ್ಯಾಂಕ್ ಗಳಲ್ಲಿ ಆದ ಅನುಭವ ಹಂಚಿಕೊಳ್ಳಬೇಕೆಂದು  ಕೂಟವು ಮನವಿ ಮಾಡಿತ್ತು.

ಆರಂಭವಾದ 45 ನಿಮಿಷಗಳಲ್ಲೇ ಈ ಅಭಿಯಾನವು ಬೆಂಗಳೂರು ಮತ್ತು ಭಾರತದ ಮಟ್ಟದಲ್ಲಿ ಟ್ರೆಂಡ್ ಆಯಿತು. ಟ್ವಿಟರ್‌ನಲ್ಲಿ ಸುಮಾರು 3 ಗಂಟೆ  ಈ ವಿಷಯದ ಬಗ್ಗೆ ಬಿರುಸಿನ ಚರ್ಚೆ ನಡೆಯಿತು. ಈ ವಿಷಯಕ್ಕೆ ಸಂಬಂಧಿಸಿ 25,000ಕ್ಕೂ ಹೆಚ್ಚು ಟ್ವೀಟ್‌ಗಳು ಹರಿದಾಡಿದವು. ಎಟಿಎಂ, ಕಿಯೊಸ್ಕ್, ಚಲನ್, ಚೆಕ್‌ಬುಕ್‌, ಅರ್ಜಿ  ನಮೂನೆಗಳಲ್ಲಿ ಕನ್ನಡ ಇಲ್ಲದಿರುವ ಬಗ್ಗೆ ಗ್ರಾಹಕರು ಟ್ವೀಟ್ ಮಾಡಿದರು ಎಂದು ಎಂದು ಕೂಟದ ಸಂಚಾಲಕ ಜಯಂತ್ ಸಿದ್ದಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಆರ್‌ಬಿಐ ನಿಯಮ ((https://www.rbi.org.in/scripts/bs_viewmascirculardetails.aspx?id=9008) ಪಾಲನೆ ಆಗದ ಕಾರಣ ಬ್ಯಾಂಕ್‌ಗಳಲ್ಲಿ  ಕನ್ನಡದ ಗ್ರಾಹಕರಿಗೆ  ಆಗುತ್ತಿರುವ ತೊಂದರೆ ಬಗ್ಗೆ  ಈಗಲಾದರೂ ಆರ್‌ಬಿಐ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು  ಜನಪ್ರತಿನಿಧಿಗಳು ಗಮನಹರಿಸಬೇಕು’ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.